Advertisement

ಭದ್ರಾವತಿ ತಾಲೂಕಿಗೆ ಕಾಲಿಟ್ಟ ಮಂಗನ ಕಾಯಿಲೆ

11:23 AM Jan 25, 2019 | |

ಭದ್ರಾವತಿ: ಭದ್ರಾವತಿ ತಾಲೂಕಿನ ಬೆಳ್ಳಿಗೆರೆ ಮತ್ತು ಸಂಕ್ಲೀಪುರ ಗ್ರಾಮಗಳಲ್ಲಿ ಎರಡು ಮಂಗಗಳು ಕೆಎಫ್‌ಡಿ ರೋಗದಿಂದ ಮೃತಪಟ್ಟಿರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ ಎಂದು ತಾಲೂಕು ಮುಖ್ಯ ವೈದ್ಯಾಧಿಕಾರಿ ಡಾ| ಗುಡದಪ್ಪ ಕಸಬಿ ಹೇಳಿದರು.

Advertisement

ತಾಲೂಕಿನ 2 ಗ್ರಾಮಗಳಲ್ಲಿ 2 ಮಂಗಗಳು ಮೃತಪಟ್ಟಿರುವ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ತಾಲೂಕಿನ ಸಂಕ್ಲಿಪುರ ಗ್ರಾಮದ ಅರಣ್ಯದ ಸಮೀಪವಿರುವ ಗೌಡನಕಟ್ಟೆ ಕೆರೆ ದಡದ ಬಳಿ 1ಮಂಗ ಹಾಗೂ ಬೆಳ್ಳಿಗೆರೆ ಗ್ರಾಮದ ತೋಟದ ಸಮೀಪ 1ಮಂಗ ಸತ್ತಿದೆ. ಸುದ್ದಿ ತಿಳಿದ ಕೂಡಲೇ ಆ ಸ್ಥಳಕ್ಕೆ ವೈದ್ಯಕೀಯ ತಂಡದೊಂದಿಗೆ ತೆರಳಿ ಮೃತಪಟ್ಟ 2ಮಂಗಗಳ ದೇಹದ ತುಣುಕನ್ನು ವೈದ್ಯಕೀಯ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ್ದೆವು. ಪರೀಕ್ಷೆಯಿಂದ ಮಂಗಗಳ ಸಾವಿಗೆ ಕೆಎಫ್‌ಡಿ ಕಾರಣ ಎಂದು ದೃಢಪಟ್ಟದೆ. ಮೃತ ಮಂಗಗಳ ಕಳೇಬರವನ್ನು ಸುಟ್ಟು ಹಾಕಿ ಅಲ್ಲಿ ಔಷಧಿ ಸಿಂಪಡಿಸಲಾಗಿದೆ ಎಂದರು.

ಮುಂಜಾಗ್ರತೆ: ಭದ್ರಾವತಿ ತಾಲೂಕಿನ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಈ ರೀತಿ ಕಾಯಿಲೆಗೆ ಮಂಗಗಳು ಮೃತಪಟ್ಟಿದ್ದು ಈ ಬಗ್ಗೆ ಮುನ್ನೆಚ್ಚರಿಕೆಯಾಗಿ ಗ್ರಾಮದಿಂದ ಸುತ್ತಮುತ್ತ 5ಕಿಮೀ ವ್ಯಾಪ್ತಿಯಲ್ಲಿನ ನಿವಾಸಿಗಳು ಕಾಡಿನೊಳಗೆ ಹೋಗಬಾರದು. ಒಂದೊಮ್ಮೆ ಹೋಗುವುದಾದರೆ ಮೈತುಂಬ ಬಟ್ಟೆ ಧರಿಸಿ ಹೋಗಬೇಕು. ದೇಹದ ಯಾವ ಭಾಗಕ್ಕೆ ಬಟ್ಟೆ ಹಾಕಲು ಸಾಧ್ಯವಿಲ್ಲವೋ ಆ ಭಾಗಕ್ಕೆ ಡಿಎಂಪಿ ಎಣ್ಣೆ ಸವರಿಕೊಂಡು ಹೋಗಬೇಕು. ಅರಣ್ಯ ಪ್ರದೇಶದಲ್ಲಿ ಮಲಗಿಕೊಳ್ಳುವುದು, ಕುಳಿತುಕೊಳ್ಳುವುದು ಮಾಡಬಾರದೆಂದು ತಿಳಿಸಿದರು.

ಈ ಕುರಿತಂತೆ ಆ ಪ್ರದೇಶದ ಜನರಿಗೆ ಕರಪತ್ರಗಳ ಮೂಲಕ ಮುನ್ನೆಚ್ಚೆರಿಕೆ ಕ್ರಮ ತಿಳಿಸುವ ಪ್ರಯತ್ನ ಮಾಡಲಾಗುವುದು. ಈ ಬಗ್ಗೆ ಗುರುವಾರ ಬೆಳಗ್ಗೆ ಸರ್ಕಾರಿ ಆಸ್ಪತ್ರೆಯಲ್ಲಿ ತಹಶೀಲ್ದಾರ್‌, ತಾಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ತಾಲೂಕು ಅರಣ್ಯಾಧಿಕಾರಿ ಗ್ರಾಮಗಳ ಪಿಡಿಒಗಳ ಸಭೆ ಕರೆದು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಡಿಎಂಪಿ ಎಣ್ಣೆ ಕೊರತೆ : ಕಾಡಿನೊಳಗೆ ಹೋಗಬೇಕಾದವರು ಮಂಗನ ಕಾಯಿಲೆ ಬರದಂತೆ ತಡೆಯಲು ಮುನ್ನೆಚ್ಚರಿಕೆಯಾಗಿ ಮೈ ಕೈಗೆ ಡಿಎಂಪಿ ಎಣ್ಣೆ ಬಳಿದುಕೊಳ್ಳಬೇಕು ಎಂದು ತಾಲೂಕು ಮುಖ್ಯ ವೈದ್ಯಾಧಿಕಾರಿಗಳು ತಿಳಿಸಿದರು. ಡಿಎಂಪಿ ಎಣ್ಣೆ ಸರ್ಕಾರಿ ಆಸ್ಪತ್ರೆಯಲ್ಲಿ ದೊರಕುತ್ತದೆ. ಆದರೆ ಪ್ರಸ್ತುತ ಸಾಗರ ತಾಲೂಕಿನ ಅರಳಗೋಡಿನಲ್ಲಿ ಮಂಗನ ಕಾಯಿಲೆ ತೀವ್ರಗೊಂಡ ಕಾರಣ ಅಲ್ಲಿಗೆ ಎಣ್ಣೆ ಸರಬರಾಜಾಗಿರುವುದರಿಂದ ನಮ್ಮಲ್ಲಿ ಎಣ್ಣೆ ಕಡಿಮೆ ಪ್ರಮಾಣದಲ್ಲಿದೆ. ಆದರೂ ಅದನ್ನು ತರಿಸುವ ಪ್ರಯತ್ನ ಮಾಡಲಾಗುವುದು ಎಂದರು.

Advertisement

ಸ್ಥಳಕ್ಕೆ ಭೇಟಿ ನೀಡುತ್ತೇವೆ: ಸರ್ಕಾರಿ ಕಾರ್ಯಕ್ರಮವೊಂದರಲ್ಲಿದ್ದ ತಹಶೀಲ್ದಾರ್‌ ನಾಗರಾಜ್‌ ಹಾಗೂ ತಾಪಂ ಕಾರ್ಯ ನಿರ್ವಹಣಾಧಿಕಾರಿ ಡಾ| ಮೋಹನ್‌ ಅವರನ್ನು ಮಂಗಗಳು ಮೃತಪಟ್ಟ ಬೆಳ್ಳಿಗೆರೆ ಮತ್ತು ಸಂಕ್ಲೀಪುರ ಗ್ರಾಮಗಳಿಗೆ ಭೇಟಿ ನೀಡುವಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾಳೆ ಬೆಳಗ್ಗೆ ಆ ಸ್ಥಳಕ್ಕೆ ಭೇಟಿ ನೀಡುತ್ತೇವೆ. ಅದಕ್ಕೆ ಮುನ್ನ ಸ್ಥಳಕ್ಕೆ ಹೋಗುವಾಗ ವಹಿಸಬೇಕಾದ ಮುನ್ನೆಚ್ಚರಿಕೆ ಏನೆಂದು ವೈದ್ಯಾಧಿಕಾರಿಗಳ ಬಳಿ ತಿಳಿದುಕೊಂಡು ಅದನ್ನು ಪಾಲಿಸುವ ಮೂಲಕ ಆ ಸ್ಥಳಕ್ಕೆ ಭೇಟಿ ನೀಡುತ್ತೇವೆ ಎಂದರು.

ನಾಗರಿಕರಲ್ಲಿ ಆತಂಕ: ಇದುವರೆಗೆ ಮಂಗಗಳ ಸಾವು, ಮಂಗನ ಕಾಯಿಲೆ ಬಗ್ಗೆ ಪತ್ರಿಕೆ, ದೂರದರ್ಶನ ವಾಹಿನಿಯಲ್ಲಿ ನೋಡಿ ತಿಳಿಯುತ್ತಿದ್ದ ಈ ಕ್ಷೇತ್ರದ ಜನರಲ್ಲಿ ಈಗ ತಮ್ಮ ಕ್ಷೇತ್ರದಲ್ಲಿ 2 ಮಂಗಗಳ ಸಾವು ಹಾಗೂ ಅದಕ್ಕೆ ಕೆಎಫ್‌ಡಿ ಕಾರಣ ಎಂಬುದು ತಿಳಿದು ಆತಂಕ ಪಡುವ ಸಿತಿ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next