ಒಂದರ ಮೇಲೊಂದು ಹೊಸಬರ ಚಿತ್ರ ತಯಾರಾಗುತ್ತಲೇ ಇವೆ. ಇದೀಗ “ಮಾಂಕ್ ದಿ ಯಂಗ್’ ಎಂಬ ವಿಭಿನ್ನ ಶೀರ್ಷಿಕೆಯೊಂದಿಗೆ ಚಿತ್ರವೊಂದು ತಯಾರಾಗುತ್ತಿದೆ.
ಮಾಶ್ಚಿತ್ ಸೂರ್ಯ ಚಿತ್ರ ನಿರ್ದೇಶನದ ಜೊತೆಗೆ ಕಥೆ, ಚಿತ್ರ ಕಥೆ, ಸಂಭಾಷಣೆಯನ್ನು ಬರೆದಿದ್ದಾರೆ. “ವೊಲ್‌ಕೆನೋ ಪ್ರೊಡಕ್ಷನ್’ ಬ್ಯಾನರ್‌ನಲ್ಲಿ , ಕರ್ನಲ್ ಎ ರಾಜೇಂದ್ರ, ಲಾಲ್ ಚಂದ್ ಕಟರ್, ವಿನಯ್ ರೆಡ್ಡಿ, ಗೋಪಿಚಂದ್, ಸರೋವರ್ ಐದು ಜನ ಚಿತ್ರ ನಿರ್ಮಾಣ ಮಾಡಿದ್ದಾರೆ. ವಿಶೇಷವೆಂದರೆ ಐದು ಜನ ನಿರ್ಮಾಪಕರು ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಕರ್ನಾಟಕ ಚಲನಚಿತ್ರ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್, ನಟ ರಿಷಭ್ ಶೆಟ್ಟಿ “ಮಾಂಕ್ ದಿ ಯಂಗ್’ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಚಿತ್ರ ನಿರ್ದೇಶಕ ಮಾಶ್ಚಿತ್ ಸೂರ್ಯ ಮಾತನಾಡಿ, “ಒಂದು ಕಿರುಚಿತ್ರ ಮಾಡುವ ಚಿಂತನೆಯಲ್ಲಿ ಪ್ರಾರಂಭವಾದ ಈ ಚಿತ್ರ, ಇಂದು ಸಿನಿಮಾವಾಗಿದೆ. ವಿಂಟೆಜ್ ಫ್ಯಾಂಟಸಿ ಥ್ರಿಲ್ಲರ್ ಕಥಾಹಂದರದ ಚಿತ್ರ ಇದಾಗಿದೆ. ವಿಸ್ಕಿ ಹಾಗೂ ವೈನ್ ಕಥೆಯುಳ್ಳ ಚಿತ್ರ ಇದಾಗಿದ್ದು , ಬ್ರಿಟಿಷ್ ಕಾಲದ ವಿಂಟೆಜ್ ಲುಕ್‌ನ ಸಂದರ್ಭಗಳನ್ನು ಕಾಣಬಹುದು. ಚಿತ್ರದಲ್ಲಿ ವಿಂಟೆಜ್ ಲುಕ್ ಜೊತೆಗೆ ಅದೇ ಥರದ ಸಾಹಸಮಯ ಸನ್ನಿವೇಶಗಳು ಇವೆ. ಚಿತ್ರಕ್ಕೆ ಅನೂಕುಲವಾಗುವಂತೆ ಹಳೆ ಶೈಲಿಯ ಫೈಟಿಂಗ್ ದೃಶ್ಯಗಳನ್ನು ಚಿತ್ರೀಕರಿಸಿದ್ದೇವೆ ಎಂದರು.
ನಿರ್ಮಾಪಕರಲ್ಲೊಬ್ಬರಾದ ಕರ್ನಲ್ ಎ ರಾಜೇಂದ್ರ ಮಾತನಾಡಿ, “ನಾನು ನನ್ನ 17 ನೇ ವಯಸ್ಸಿಗೆ ಸೇನೆಗೆ ಸೇರಿದ್ದೆ, 57 ನೇ ವಯಸ್ಸಿಗೆ ನಿವೃತ್ತಿ ಹೊಂದಿದಾಗ ಭಿನ್ನವಾಗಿ ಏನನ್ನಾದರೂ ಮಾಡುವ ಆಲೋಚನೆ ಇತ್ತು. ಆಗ ಚಿತ್ರವೊಂದರಲ್ಲಿ ನಟಿಸಿದ್ದೆ. ಅದನ್ನು ಗುರುತಿಸಿ ನಿರ್ದೇಶಕ ಸೂರ್ಯ ನನಗೆ ಒಂದು ರೋಲ್ ನೀಡಿದರು. ಮೊದಲು ಕೇವಲ ನಟನಾಗಿ ಬಂದಿದ್ದ ನಾನು ನಂತರ ಚಿತ್ರಕ್ಕೆ ಬಂಡವಾಳವನ್ನು ಹಾಕಿ ನಿರ್ಮಾಪಕನಾದೆ. ಕನ್ನಡ ಮಣ್ಣಲ್ಲಿ ಜೀವಿಸುವ ನಾನು ಕನ್ನಡಕ್ಕಾಗಿ ಒಂದು ಚಿತ್ರ ಮಾಡುವ ಆಸೆಯಿಂದ ಈ ಚಿತ್ರತಂಡದ ಭಾಗವಾದೆ’ ಎಂದರು.
ಚಿತ್ರದಲ್ಲಿ ನೂತನ ಪ್ರತಿಭೆ ಸರೋವರ್ ಹಾಗೂ ಸೌಂದರ್ಯ ಗೌಡ ನಾಯಕ, ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಉಷಾ ಭಂಡಾರಿ, ಪ್ರಣಯ ಮೂರ್ತಿ, ಕರ್ನಲ್ ಎ ರಾಜೇಂದ್ರ ಮುಂತಾದವರು ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಕಾರ್ತಿಕ್ ಶರ್ಮಾ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿದೆ. ಇನ್ನು ಮಾಂಕ್ ದಿ ಯಂಗ್ ಚಿತ್ರವನ್ನು ಪಶ್ಚಿಮ ಬಂಗಾಳ, ಉಡುಪಿ, ಮಂಗಳೂರು, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.