ಕನ್ನಡ ಚಿತ್ರರಂಗ ಸಿನಿಮಾ ಪ್ರಚಾರ ಸಂಸ್ಥೆ ಶ್ರೀ ರಾಘವೇಂದ್ರ ಚಿತ್ರವಾಣಿಯ 49ನೇ ವಾರ್ಷಿಕೋತ್ಸವ ಹಾಗೂ 24ನೇ ಪ್ರಶಸ್ತಿ ಪ್ರದಾನ ಸಮಾರಂಭ ಜ.26ರಂದು ನಡೆಯಲಿದೆ.
ನಗರದ ಎಂಎಂಬಿ ಲೆಗೆಸ್ಸಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರು ಭಾಗಿಯಾಗಲಿದ್ದಾರೆ.
ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ದಿವಂಗತ ಡಿ.ವಿ. ಸುಧೀಂದ್ರ ಅವರು ಈ ಸಂಸ್ಥೆಯ ಸಂಸ್ಥಾಪಕರು. ಸಂಸ್ಥೆಗೆ 25 ವರ್ಷ ತುಂಬಿದ ಸಂದರ್ಭದಲ್ಲಿ ನಿರ್ಮಾಪಕರಿಗೆ ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಿದ್ದು, ಅದು ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ.
ಪ್ರಶಸ್ತಿಯ ವಿವರ: ಹಿರಿಯ ಚಲನಚಿತ್ರ ನಿರ್ಮಾಪಕರಾದ ಮೀನಾಕ್ಷಿ ಕೆ.ವಿ. ಜಯರಾಂ ಹಾಗೂ ಹಾಗೂ ಹಿರಿಯ ಪತ್ರಕರ್ತ ಕೆ.ಜೆ.ಕುಮಾರ್ ಅವರಿಗೆ ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ, ಗಾಯಕಿ ಕುಮಾರಿ ಅನುರಾಧಾ ಭಟ್ ಅವರಿಗೆ ಡಾ. ರಾಜಕುಮಾರ್ ಪ್ರಶಸ್ತಿ, ಹಿರಿಯ ನಿರ್ದೇಶಕ ಓಂಪ್ರಕಾಶ್ ರಾವ್ ಅವರಿಗೆ ಯಜಮಾನ ಚಿತ್ರದ ಖ್ಯಾತಿಯ ಆರ್. ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ, ಹಿರಿಯ ನಟಿ ರೇಖಾ ರಾವ್ ಅವರಿಗೆ ನಟಿ ಡಾ. ಜಯಮಾಲ ಎಚ್.ಎಂ. ರಾಮಚಂದ್ರ ಪ್ರಶಸ್ತಿ , ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಎಂ.ಎಸ್. ರಾಮಯ್ಯ ಮೀಡಿಯಾ ಆ್ಯಂಡ್ ಎಂಟರ್‌ಟೈನ್ಮೆಂಟ್ ಪ್ರಶಸ್ತಿ, ಕಥಾ ಲೇಖಕ ಹಾಗೂ ನಿರ್ದೇಶಕ ಜಯಶಂಕರ್ ಅವರಿಗೆ ಕೆ.ವಿ. ಜಯರಾಂ ಪ್ರಶಸ್ತಿ, ಸಂಭಾಷಣೆಕಾರ ಹಾಗೂ ನಿರ್ದೇಶಕ ಚಂದ್ರಜಿತ್ ಬೆಳ್ಳಿಯಪ್ಪ ಅವರಿಗೆ ಖ್ಯಾತ ಚಿತ್ರಸಾಹಿತಿ ಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ, ನಿರ್ದೇಶಕ ಉತ್ಸವ್ ಗೋನ್ವಾರ್
ಅವರಿಗೆ ಬಿ. ಸುರೇಶ ಪ್ರಶಸ್ತಿ, ಗೀತರಚನೆಕಾರ ಡಾ.ವಿ.ನಾಗೇಂದ್ರ ಪ್ರಸಾದ್ ಅವರಿಗೆ ಹಿರಿಯ ಪತ್ರಕರ್ತರಾದ ಪಿ.ಜಿ. ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
ಸದ್ಯ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯನ್ನು ಸುಧೀಂದ್ರ ವೆಂಕಟೇಶ್, ಸುನೀಲ್ ಹಾಗೂ ವಾಸುದೇವ್ ಮುನ್ನಡೆಸಿಕೊಂಡು ಬರುತ್ತಿದ್ದಾರೆ.