Advertisement

ಹಣ, ಅಧಿಕಾರ, ಅಂತಸ್ತು ಯಾವುದು ಬದುಕಿನ ಗಾಡಿಗೆ ಇಂಧನ?

11:26 PM Dec 09, 2020 | mahesh |

ಬದುಕೆಂಬ ಗಾಡಿಗೆ ಇಂಧನವಾಗಿ ನಿನ ಗೇನು ಬೇಕು? ಹಣ, ಅಂತಸ್ತು, ಅಧಿಕಾರ, ಸಂಬಂಧ? ಇಷ್ಟಾದರೆ ಸಾಕೇ? ಇನ್ನೂ ಏನಾದರೂ ಬೇಕೇ ಮುನ್ನಡೆಸಲು?

Advertisement

ವೃದ್ಧರೊಬ್ಬರಿಗೆ ಕನಸಿನಲ್ಲಿ ಬಂದ ದೇವರು ಕೇಳಿದ ಪ್ರಶ್ನೆ ಇದು. ಆ ಕ್ಷಣದಲ್ಲಿ ವಿಚಿತ್ರ ಎನಿಸಿತು ವೃದ್ಧರಿಗೆ. ಹೌದಲ್ಲ, ನನಗೆ ಇನ್ನೇನು ಬೇಕು? ಉತ್ತರ ಸಿಗಲಿಲ್ಲ. ದೇವರಲ್ಲಿ ನಾಳೆ ಉತ್ತರಿಸುತ್ತೇನೆ, ಒಂದು ದಿನ ಸಮಯ ಕೊಡು ಎಂದು ಮನವಿ ಮಾಡಿದರು. ದೇವರು ತಥಾಸ್ತು ಎಂದ.

ಈ ಅಜ್ಜ ಅದ್ಭುತವಾಗಿ ಬದುಕಿದವ. ಮಕ್ಕಳು, ಮೊಮ್ಮಕ್ಕಳು, ಅವರ ಮಕ್ಕಳು ಹೀಗೆ ಎಲ್ಲರನ್ನೂ ನೋಡಿದ್ದರು. ಎಲ್ಲರ ಬದುಕನ್ನೂ, ಬೆಳವಣಿಗೆಯನ್ನೂ ಕಣ್ತುಂಬಿಕೊಂಡಿದ್ದರು. ದುಃಖ, ಸುಖ, ಸಂತೋಷ ಎಲ್ಲವೂ ಮಿಶ್ರವಾಗಿತ್ತು. ಎಲ್ಲವನ್ನೂ ಸ್ವಾಭಾವಿಕ ಎಂಬುವಂತೆ ಸ್ವೀಕರಿಸಿದ್ದರು. ಹಾಗಾಗಿ ಹೆಚ್ಚು ತಲೆ ಕೆಡಿಸಿಕೊಳ್ಳದೇ ಬದುಕಿದವರು.

ಬೆಳಗ್ಗೆ ಎದ್ದವರೇ ತಮ್ಮ ಬದುಕಿನ ಕ್ಷಣಗಳನ್ನೆಲ್ಲ ನೆನಪಿಸಿಕೊಂಡರು. ಎಲ್ಲವೂ ಚೆನ್ನಾಗಿಯೇ ಕಾಣುತ್ತಿದ್ದವು. ಎಲ್ಲ ಸುಖವೂ ಸಿಕ್ಕಿದೆಯಲ್ಲ. ಇನ್ನೇನೂ ಬಾಕಿ ಇಲ್ಲ ಎನಿಸಿತು. ಇವೆಲ್ಲವನ್ನೂ ಪಡೆದ ಬಗೆಯನ್ನು ನೆನಪಿಗೆ ತಂದುಕೊಳ್ಳತೊಡಗಿದರು. ಎಲ್ಲವೂ ಸಿನೆಮಾ ಎಂಬಂತೆ ಕಣ್ಣು ಮುಂದೆ ಬಂದವು.

ಅಜ್ಜನಿಗೆ ನಾಲ್ವರು ಮಕ್ಕಳು. ಮೂರು ಮಕ್ಕಳು ದೊಡ್ಡವರಾಗುವ ಹೊತ್ತಿಗೆ ಪತ್ನಿ ಕಾಲವಾದರು. ನಾಲ್ಕನೇ ಮಗುವನ್ನು ಬೆಳೆಸಿದ್ದು ಈ ನಾಲ್ಕು ಮಂದಿ. ಈಗ ನಾಲ್ವರು ಮಕ್ಕಳೂ ತಕ್ಕಮಟ್ಟಿಗೆ ಸ್ವತಂತ್ರವಾಗಿ ಬದುಕು ನಡೆಸುತ್ತಿದ್ದಾರೆ. ಅವರ ಹೊಣೆಯೇನೂ ಅಜ್ಜನ ಮೇಲಿಲ್ಲ. ಬೆಳಗ್ಗೆಯಿಂದ ಸಂಜೆವರೆಗೂ ಕೃಷಿ, ಓಡಾಟ-ಹೀಗೆ ಬದುಕನ್ನು ತೊಡಗಿಸಿಕೊಂಡು ಬಿಟ್ಟಿದ್ದರು. ಸುಮ್ಮನೆ ಬೇಸರವಾಯಿತೆನಿಸಿಕೊಳ್ಳಲು ಪುರಸೊತ್ತಿರಲಿಲ್ಲ.

Advertisement

ಮೊಮ್ಮಕ್ಕಳು ಈಗಾಗಲೇ ಅಂಗಳಕ್ಕೆ ಬಂದಿದ್ದಾರೆ. ಅವರೊಂದಿಗೆ ಆಟವಾಡುತ್ತಾ ಬದುಕನ್ನು ಕಳೆಯುವ ಕ್ಷಣಗಳೂ ಸಿಕ್ಕಿವೆ. ಇವೆಲ್ಲವೂ ಸಿಕ್ಕಿದ್ದು ಹೇಗೆ? ಯಾವ ಅಧಿಕಾರ ತನಗಿತ್ತು? ಅಂತಸ್ತು? ಹಣ ಎಂಬುದೇನು ಕೊಳೆಯುತ್ತಿತ್ತು¤¤ ಮನೆಯಲ್ಲಿ?- ತಮ್ಮನ್ನು ತಾವೇ ಕೇಳಿಕೊಂಡರು. ಹೊಳೆದ ಉತ್ತರ ಕಂಡು ನಗು ಬಂದಿತು. ಯಾಕೆಂದರೆ ಯಾವುದೂ ಸಮೃದ್ಧವಾಗಿರಲಿಲ್ಲ. ಹಾಗಾದರೆ ಇಷ್ಟು ಸಮೃದ್ಧವಾಗಿ ಬದುಕಿದ್ದು ಹೇಗೆ ಎಂಬ ಹೊಸ ಪ್ರಶ್ನೆ ಬಂದಿತು. ಕೆಲವು ಕ್ಷಣಗಳ ಬಳಿಕ ಉತ್ತರ ಸಿಕ್ಕಂತೆ ಕಂಡು ಬಂದಿತು.

ರಾತ್ರಿ ಮತ್ತೆ ದೇವರು ಕನಸಿನಲ್ಲಿ ಪ್ರತ್ಯಕ್ಷನಾಗಿ, “ಉತ್ತರ ಸಿಕ್ಕಿತೇ?’ ಎಂದು ಕೇಳಿದ. “ಹೌದು, ಉತ್ತರ ಸಿಕ್ಕಿತು’ ಎಂದು ಉತ್ತರಿಸಿದರು ಅಜ್ಜ. ದೇವರಿಗೂ ಕುತೂಹಲವೆನಿಸಿತು. “ಏನದು?’ ಎಂದು ಕೇಳಿದ್ದಕ್ಕೆ ಅಜ್ಜ, “ನನಗೆ ಅದ್ಯಾವುದೂ ಬೇಡ. ಯಾಕೆಂದರೆ ಅವು ಯಾವುದೂ ನನ್ನಲ್ಲಿ ಬದುಕಿಗೆ ಕೊನೆವರೆಗೂ ಇರಲಿಲ್ಲ. ಎಲ್ಲವೂ ಅರೆಕ್ಷಣ ಬಂದವು, ಬಳಿಕ ಹೋದವು. ಆದರೆ ಈವರೆಗೂ ನಾನು ಉಳಿಸಿಕೊಂಡಿದ್ದು ಒಂದೇ-ಅದು ಜೀವನೋತ್ಸಾಹ. ಅದನ್ನೇ ಮತ್ತಷ್ಟು ಕೊಡು ಸಾಕು’ ಎಂದು ಕೈ ಮುಗಿದರು. ದೇವರು ಪ್ರಸನ್ನನಾದ.

ನಾವೂ ಪ್ರತೀದಿನವೂ ದೇವರ ಎದುರು ಕೇಳಬೇಕಾದದ್ದು ಇದನ್ನೇ. ಬದುಕಿನುದ್ದಕ್ಕೂ ಜೀವನೋತ್ಸಾಹ ಕೊಡು ಎಂದು ಕೇಳಬೇಕು. ಅದು ಮಾತ್ರ ನಮ್ಮನ್ನು ದಡಕ್ಕೆ ತೇಲಿಸಬಲ್ಲದು.

(ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next