Advertisement

ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರಲು ಮೊಯ್ಲಿ ವಿಫ‌ಲ

06:04 PM Apr 16, 2019 | Team Udayavani |

ಬಾಗೇಪಲ್ಲಿ: ವೀರಪ್ಪ ಮೊಯ್ಲಿ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರೂ ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರಲು ಸಂಪೂರ್ಣವಾಗಿ ವಿಫಲರಾದರು ಎಂದು ಸಿಪಿಎಂ ಪಾಲಿಟ್‌ ಬ್ಯೂರೋ ಸದಸ್ಯೆ ಬೃಂದಾ ಕಾರಟ್‌ ತಿಳಿಸಿದರು.

Advertisement

ಸೋಮವಾರ ಪಟ್ಟಣದ ಗೂಳೂರು ವೃತ್ತದಲ್ಲಿ ಸಿಪಿಎಂ ಅಭ್ಯರ್ಥಿ ಎಸ್‌.ವರಲಕ್ಷ್ಮಿ ಪರವಾಗಿ ಚುನಾವಣಾ ಪ್ರಚಾರ ಭಾಷಣ ಮಾಡಿ ಮಾತನಾಡಿದ ಅವರು, ರೈತರು ಆತ್ಮಹತ್ಯೆ ಮಾಡಿಕೊಳ್ಳುವಾಗ ಮೊಯ್ಲಿ ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು.

ಶಾಶ್ವತ ನೀರಾವರಿಗೆ ಆಗ್ರಹಿಸಿ ಡಾ.ಪರಮಶಿವಯ್ಯ ವರದಿ ಜಾರಿಗೆ ಆಗ್ರಹಿಸಿ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ನೇತೃತ್ವದಲ್ಲಿ ಅನೇಕ ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಆದರೆ ಈ ಭಾಗದ ಸಂಸದರು ಕಿವಿಗೆ ಹಾಕಿಕೊಳ್ಳಲಿಲ್ಲ.

ಜನ ಸಾಮಾನ್ಯರ ಹೋರಾಟ: 2014ರಲ್ಲಿ ನರೇಂದ್ರ ಮೋದಿ ಚಿಕ್ಕಬಳ್ಳಾಪುರದಲ್ಲಿ ನಡೆದ ಚುನಾವಣೆ ಪ್ರಚಾರದಲ್ಲಿ ನಮಗೆ ಓಟು ಕೊಡಿ ಬಯಲುಸೀಮೆ ಜಿಲ್ಲೆಗಳಿಗೆ ದೊಡ್ಡ ಪೈಪುಗಳು ಹಾಕಿ ನೀರು ತರುತ್ತೇವೆ. ಈ ದೊಡ್ಡ ಪೈಪುಗಳ ಹೇಗೆ ಇರುತ್ತವೆ ಎಂದರೆ ಪೈಪ್‌ಗ್ಳಲ್ಲಿ ಮಾರುತಿ ಕಾರು ಚಲಿಸಬಹುದು ಎಂದು ಹೇಳಿದ್ದರು. ಆದರೆ ನೀರು ಬರಲೇ ಇಲ್ಲ ಎಂದು ವ್ಯಂಗವಾಡಿದರು.

ಬೇರೆ ಪಕ್ಷಗಳ ಮತಗಳನ್ನು ಖರೀದಿ ಮಾಡುವುದು ಚನ್ನಾಗಿ ಗೊತ್ತಿದೆ. ಆದರೆ ಸಿಪಿಎಂ ಪಕ್ಷಕ್ಕೆ ಮತಗಳನ್ನು ಖರೀದಿ ಮಾಡುವ ಕಾರ್ಯಕ್ಕೆ ಕೈಹಾಕುವುದಿಲ್ಲ. ನಿರಂತರ ಜನಸಾಮಾನ್ಯರ ಮೂಲಭೂತ ಸೌಲಭ್ಯಗಳ ಬಗ್ಗೆ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

Advertisement

ಬಂಡವಾಳಶಾಹಿಗಳ ಪರ ಸರ್ಕಾರ: ಬಿಜೆಪಿ, ಆರ್‌ಎಸ್‌ಎಸ್‌ ಒಂದುಗೂಡಿ ಸಂವಿಧಾನವನ್ನು ಹಾಳು ಮಾಡುವ ಪಿತೂರಿ ನಡೆಸಲಾಗುತ್ತಿದೆ. ಜಾತಿ, ಜಾತಿಗಳ ನಡುವೆ ವೀಷ ಬೀಜ ಬಿತ್ತುತ್ತಿದೆ. ಈ ಚುನಾವಣೆಯಲ್ಲಿ ಬಿಜೆಪಿ, ಆರ್‌ಎಸ್‌ಎಸ್‌ನ್ನು ಸೋಲಿಸಬೇಕಾಗಿದೆ. ಮೋದಿ ಸರ್ಕಾರದಲ್ಲಿ ಕೇವಲ ಬಂಡವಾಳ ಶಾಹಿಗಳಿಗೆ ಮಾತ್ರ ಅನುಕೂಲವಾಗುತ್ತಿದೆ ಎಂದು ಆರೋಪಿಸಿದರು.

ಲೋಕಸಭೆ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ಎಸ್‌.ವರಲಕ್ಷ್ಮಿ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಯೋಚನೆ ಮಾಡಿ ಮತದಾನ ಮತದಾನ ಮಾಡಬೇಕು. ಡಾ.ಬಿ.ಆರ್‌.ಅಂಬೇಡ್ಕರ್‌ ಸಂವಿಧಾನದಲ್ಲಿ ದೇಶದ ಪ್ರತಿಯೊಬ್ಬರಿಗೂ ಮತದಾನಕ್ಕೆ ಅವಕಾಶ ಕೊಡಲಾಗಿದೆ. ಮತದಾನದ ಹಕ್ಕನ್ನು ಸದುಪಯೋಗ ಪಡಿಸಿಕೊಂಡು ಯೋಗ್ಯರನ್ನು ಚುನಾಯಿಸಬೇಕಾಗಿದೆ.

ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಜನರ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತಿದ್ದಾರೆ. ಸಿಪಿಎಂ ಪಕ್ಷಕ್ಕೆ ಸೋಲು, ಗೆಲುವು ಮುಖ್ಯವಲ್ಲ ಜನರ ಸಮಸ್ಯೆಗಳೇ ಮುಖ್ಯ. ಜನರಿಗೆ ಸುಳ್ಳು ಭರವಸೆ ನೀಡಿ ವಂಚನೆ ಮಾಡುತ್ತಿರುವ ಕಾಂಗ್ರೆಸ್‌,ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿ ಮನೆಗೆ ಕಳುಹಿಸಬೇಕು ಎಂದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಿಪಿಎಂ ಕಾರ್ಯಕರ್ತರು ಬೈಕ್‌ ರ್ಯಾಲಿ ನಡೆಸಿ ಮತಯಾಚಿಸಿದರು.

ರಾಜ್ಯ ಸಿಪಿಎಂ ಕಾರ್ಯದರ್ಶಿ ಬಸವರಾಜ್‌, ಮಾಜಿ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಜಯರಾಮರೆಡ್ಡಿ, ತಾಲೂಕು ಕಾರ್ಯದರ್ಶಿ ಚನ್ನರಾಯಪ್ಪ, ನಗರ ಘಟಕದ ಅಧ್ಯಕ್ಷ ವಾಲ್ಮೀಕಿ ನಗರದ ಅಶ್ವತ್ಥಪ್ಪ, ತಾಪಂ ಸದಸ್ಯ ಶ್ರೀರಾಮನಾಯ್ಕ, ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಜೆಸಿಬಿ ಪಿ.ಮಂಜುನಾಥರೆಡ್ಡಿ, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಉಮೇಶ್‌, ಮೀನಾಕ್ಷಿ ಸುಂದರ, ತಾಲೂಕು ಸಿಐಟಿಯು ಅಧ್ಯಕ್ಷ ಬಿ.ಆಂಜನೇಯರೆಡ್ಡಿ, ಜಿಲ್ಲಾ ಡಿವೈಎಫ್‌ಐ ಅಧ್ಯಕ್ಷ ಬಿ.ಎಂ.ಹೇಮಚಂದ್ರ ಇದ್ದರು.

2004ರ ಲೋಕಸಭೆಯಲ್ಲಿ 61 ಸ್ಥಾನಗಳನ್ನು ಹೊಂದಿದ್ದ ಸಿಪಿಎಂ ಪಕ್ಷ ದೇಶದಲ್ಲಿ ನರೇಗಾ ಮತ್ತು ಅನೇಕ ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೆ ತರಲು ಶ್ರಮಿಸಿದೆ. ಪುನಃ ಮೋದಿ ಸರ್ಕಾರದ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಕೋಮು ಸೌಹಾರ್ದತೆ ನಾಶವಾಗುತ್ತದೆ.
-ಬೃಂದಾ ಕಾರಟ್‌, ಸಿಪಿಎಂ ಪಾಲಿಟ್‌ ಬ್ಯೂರೋ ಸದಸ್ಯೆ

Advertisement

Udayavani is now on Telegram. Click here to join our channel and stay updated with the latest news.

Next