Advertisement

ಹಿಂದೂಗಳು ಒಗ್ಗಟ್ಟಾಗಲಿ

06:00 AM Sep 09, 2018 | |

ಷಿಕಾಗೋ: “”ಸಿಂಹ ಏಕಾಂಗಿಯಾಗಿದ್ದರೆ ಕಾಡು ನಾಯಿಗಳು ದಾಳಿ ಮಾಡುತ್ತವೆ. ಇದನ್ನು ನಾವು ಮರೆಯಬಾರದು. ನಾವೆಲ್ಲರೂ ಒಗ್ಗಟ್ಟಾಗಿ, ಮನುಕುಲದ ಒಳಿತಿಗೆ ಏಕತೆಯಿಂದ ಶ್ರಮಿಸಬೇಕು” ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಸಮಸ್ತ ಹಿಂದೂ ನಾಯಕರಿಗೆ ಕರೆ ಕೊಟ್ಟಿದ್ದಾರೆ. ಷಿಕಾಗೋದಲ್ಲಿ ಶುಕ್ರವಾರ ಆರಂಭಗೊಂಡ 3 ದಿನಗಳ ವಿಶ್ವ ಹಿಂದೂ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದೂಗಳ ಐಕ್ಯತೆ ಹಾಗೂ ಸಾರ್ವಭೌಮತೆಗೆ ಕರೆ ನೀಡಿದರು. 1883 ರಲ್ಲಿ ಸ್ವಾಮಿ ವಿವೇಕಾನಂದ ಅವರು ಅಂತಾರಾಷ್ಟ್ರೀಯ ಧರ್ಮ ಸಂಸತ್‌ ಸಭೆಯಲ್ಲಿ ಮಾಡಿದ ಐತಿಹಾಸಿಕ ಭಾಷಣಕ್ಕೆ 125 ವರ್ಷ ಸಂದ ಹಿನ್ನೆಲೆಯಲ್ಲಿ ಈ ಸಮ್ಮೇಳನ ಆಯೋಜಿಸಲಾಗಿದೆ. 

Advertisement

ತಮ್ಮ ಭಾಷಣದಲ್ಲಿ ಹಿಂದೂಗಳ ಸರ್ವಧರ್ಮ ಸಹಿಷ್ಣುತೆಯ ಗುಣವನ್ನು ವಿಶೇಷವಾಗಿ ಉಲ್ಲೇಖೀಸಿದ ಭಾಗವತ್‌, “”ಹಿಂದೂಗಳು ಸಮಾಜದಲ್ಲಿ ತಾವೇ ಪ್ರಬಲರಾಗಿರ ಬೇಕೆಂದು ಎಂದಿಗೂ ಬಯಸುವುದಿಲ್ಲ. ಆದರೆ, ಹಿಂದೂಗಳಲ್ಲಿ ಏಕತೆಯ ಕೊರತೆಯಿದೆ. ಇಡೀ ಸಮುದಾಯವೇ ಒಂದು ಸಮಾಜದಂತೆ ನಡೆದುಕೊಂಡಲ್ಲಿ ಮಾತ್ರ ಹಿಂದೂಗಳು ಸಂಪದ್ಭರಿತವಾಗಿ ಜೀವಿಸಲು ಸಾಧ್ಯ” ಎಂದರು. 

ಇದೇ ವೇಳೆ, ಒಗ್ಗಟ್ಟಿನಿಂದ ಬದುಕಲು ಹಿಂದೂ ಧರ್ಮದ ನಾಯಕರಿಗೆ ಕಿವಿಮಾತು ಹೇಳಿದ ಅವರು, “”ಒಬ್ಬರ ಅಭಿಪ್ರಾಯವನ್ನು ಮತ್ತೂಬ್ಬರು ಗೌರವಿಸಬೇಕು. ಅಹಂಕಾರಗಳನ್ನು ಬಿಡಬೇಕು. ಹಿಂದೂಗಳಲ್ಲಿ ಅನೇಕ ಪ್ರಜ್ಞಾವಂತ ನಾಯಕರಿದ್ದಾರೆ. ಆದರೆ, ಅವರೆಲ್ಲರೂ ಒಗ್ಗೂಡುವುದೇ ಕಠಿಣ” ಎಂದು ವಿಷಾದಿಸಿದರು.

ರಾಜಕೀಯದಲ್ಲೂ ಏಕತೆಯಿರಲಿ: ರಾಜಕೀಯದಲ್ಲೂ ಧಾರ್ಮಿಕತೆಯ ತಳಹದಿ ಇರಬೇಕೆಂದು ಆಶಿಸಿದ ಭಾಗವತ್‌, “”ರಾಜಕೀಯವನ್ನು ಧ್ಯಾನಶಿಬಿರದಂತೆ ನಡೆಸಲು ಸಾಧ್ಯವಿಲ್ಲ. ಆದರೂ, ಮಹಾಭಾರತದ ಶ್ರೀಕೃಷ್ಣ ಹಾಗೂ ಯುಧಿಷ್ಠಿರರು ಎಂದಿಗೂ ತಮ್ಮ ನಡುವೆ ಭಿನ್ನಾಭಿಪ್ರಾಯಕ್ಕೆ ಅವಕಾಶ ಮಾಡಿಕೊಡಲಿಲ್ಲ. ಇಂದಿನ ಯುಗದಲ್ಲಿ ಇಡೀ ವಿಶ್ವವನ್ನೇ ಒಂದು ಕುಟುಂಬವನ್ನಾಗಿ ರೂಪಿಸಬೇಕೆಂದರೆ ಜಗತ್ತಿನ ನಾನಾ ನಾಯಕರ ನಡುವೆ ಕೃಷ್ಣ-ಯುಧಿಷ್ಠಿರರಂಥ ಸಮನ್ವಯತೆ ಇರಬೇಕು” ಎಂದು ಅವರು ಅಭಿಪ್ರಾಯಪಟ್ಟರು.   

ಸಂಪ್ರದಾಯವಾದಿಯಲ್ಲ: ಇದೇ ವೇಳೆ, ತಾವೊಬ್ಬ ಆದರ್ಶವಾದಿ ಎಂದು ತಮ್ಮನ್ನು ತಾವು ಬಣ್ಣಿಸಿಕೊಂಡ ಭಾಗವತ್‌, ನಾನು ಆಧುನಿಕತೆಯ ವಿರೋಧಿಯಲ್ಲ. ನಾನೊಬ್ಬ ಭವಿಷ್ಯವಾದಿ. ತಮ್ಮಿ ವ್ಯಕ್ತಿತ್ವಕ್ಕೆ ತಾವು ನಂಬಿರುವ ಹಿಂದೂ ಧರ್ಮವೇ ಕಾರಣ. ಹಿಂದೂ ಧರ್ಮವು ಪುರಾತನವಾಗಿದ್ದರೂ ಅದರ ಒಳದೃಷ್ಟಿಯು ಆಧುನಿಕತೆಯನ್ನೂ ಮೀರಿಸಿದೆ ಎಂದರು.

Advertisement

ತಂತ್ರಜ್ಞಾನದಿಂದ ಎಲ್ಲರನ್ನೂ ಬೆಸೆಯೋಣ
“ವಿಶ್ವವನ್ನು ಹುರಿದು ಮುಕ್ಕುತ್ತಿರುವ ಅನೇಕ ಸಮಸ್ಯೆಗಳಿಗೆ ಹಿಂದೂ ಧರ್ಮದ ಆಳವಾದ ಚಿಂತನೆಗಳಲ್ಲಿ ಪರಿಹಾರವಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ವಿಶ್ವ ಹಿಂದೂ ಸಮ್ಮೇಳನಕ್ಕಾಗಿ ವಿಶೇಷ ಸಂದೇಶವನ್ನು ರವಾನಿಸಿರುವ ಅವರು, “ಇಂದಿನ ತಂತ್ರಜ್ಞಾನದ ಯುಗದಲ್ಲಿ ಮನುಕುಲವನ್ನು ತಂತ್ರಜ್ಞಾನದಿಂದಲೇ ಬೆಸೆಯಬೇಕಿದೆ. ಹೀಗೆ, ಎಲ್ಲರನ್ನೂ ಬೆಸೆಯುವ ಮೂಲಕ ಹಿಂದೂ ಧರ್ಮದ ಚಿಂತನೆಗಳನ್ನು ಸರ್ವರಿಗೂ ಮುಟ್ಟಿಸಬೇಕಿದೆ. ಇಂಥ ಪ್ರಯತ್ನಗಳ ಬಗ್ಗೆ ಸಮ್ಮೇಳನಕ್ಕೆ ಹಾಜರಾಗಿರುವ ಎಲ್ಲರೂ ಆಲೋಚಿಸಬೇಕು’ ಎಂದು ಕರೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next