Advertisement

ಮೊಗೆಬೆಟ್ಟು: ಹರಿದು ಬಂತು ವಾರಾಹಿ ಕಾಲುವೆ ನೀರು

01:10 PM Mar 13, 2017 | |

ತೆಕ್ಕಟ್ಟೆ (ಮೊಗೆಬೆಟ್ಟು): ಕಳೆದ ಒಂದು ವಾರಗಳಿಂದಲೂ ಬೇಳೂರು ಗ್ರಾ.ಪಂ.ವ್ಯಾಪ್ತಿಯ ಸುತ್ತಮುತ್ತಲೂ ವಾರಾಹಿ ಕಾಲುವೆ ನೀರು ಹರಿದು ಬಂದಿದೆ. ಹೊಳೆಯಲ್ಲಿ ನೀರಿನ ಮಟ್ಟ  ಹೆಚ್ಚಾಗಿ ಸುತ್ತಮುತ್ತಲ ಸಹಸ್ರಾರು ಕೃಷಿಭೂಮಿಗಳಿಗೆ ಆಧಾರವಾಗಿದ್ದು  ಇಲ್ಲಿನ ಹಿರೇ ಹೊಳೆಗೆ ಹೊಂದಿಕೊಂಡು ಇರುವ ಬತ್ತಿದ ತೋಡುಗಳಲ್ಲಿ  ನೀರಿನ ಸೆಲೆ ಹೆಚ್ಚಾಗಿದೆ.

Advertisement

ಇಲ್ಲಿನ  ಮೊಗೆಬೆಟ್ಟು ಶಾನಾಡಿ, ಬೆಳಗೋಡು, ಕೊರ್ಗಿ, ಹೊಸಮಠ, ಬೇಳೂರು ಕೋಣಬಗೆ ಮುಂತಾದ ಭಾಗಗಳಿಂದ ನೀರು ಹರಿದು ಬರುವ ಹಿನ್ನೆಲೆಯಲ್ಲಿ  ಗ್ರಾಮೀಣ ಸಾವಿರಾರು ಎಕರೆ ಕೃಷಿ ಭೂಮಿಗೆ ಆಧಾರವಾಗಿದ್ದು ಈ ವಾರಾಹಿ ಕಾಲುವೆ ನೀರು ತೋಡಿನ ಮೂಲಕ ಬೇಳೂರಿನ ಸಣ್ಣ ಹೊಳೆಯನ್ನು ಸೇರುತ್ತಿದೆ. ಆದ್ದರಿಂದ  ಬೇಳೂರು ಗ್ರಾ.ಪಂ. ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ  ನೀರನ್ನು ಕೃಷಿ ಬಳಕೆಗೆ ಪೂರಕವಾಗುವಂತೆ ತೋಡಿನಲ್ಲಿರುವ ಹೂಳನ್ನು ತೆಗೆಯುವ ಕಾರ್ಯದಲ್ಲಿ  ನಿರತರಾಗಿದ್ದಾರೆ.

ಹೆಚ್ಚಿದ ಅಂತರ್ಜಲ ಮಟ್ಟ: ಕುಂದಾಪುರ ತಾಲೂಕಿನ ಗಡಿಭಾಗದಲ್ಲಿರುವ  ಬೇಳೂರು ಗ್ರಾಮದಲ್ಲಿ ಹರಿಯುತ್ತಿರುವ ಹಿರೇಹೊಳೆ  ಸಮೀಪದಲ್ಲಿಯೇ ಉಡುಪಿ ಜಿಲ್ಲೆಯ ಅಚಾÉಡಿ ಗ್ರಾಮವು ಕೂಡಾ ಉತ್ತಮ ನೀರಿನಾಶ್ರಯವನ್ನು ಹೊಂದಿದ್ದು,  ಪ್ರತಿ ವರ್ಷ ಎಪ್ರಿಲ್‌ ಹಾಗೂ ಮೇ ತಿಂಗಳ ಕೊನೆಯಲ್ಲಿ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಅಂತರ್ಜಲ ಬತ್ತಿ ಹೋಗುತ್ತಿದ್ದು ಕುಡಿಯುವ ನೀರಿಗಾಗಿ ಪರಿತಪಿಸಬೇಕಾದ ಅನಿವಾರ್ಯತೆ ಎದುರಾಗುತ್ತಿತ್ತು. ಆದರೆ ಕಳೆದ ಒಂದು ವಾರದಿಂದಲೂ ಈ ಭಾಗದಲ್ಲಿ ಹರಿಯುತ್ತಿರುವ  ವಾರಾಹಿ ಕಾಲುವೆಯ ನೀರಿನಿಂದಾಗಿ ಇಲ್ಲಿನ ಕೆರೆ ಬಾವಿ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಅಂತರ್ಜಲ ಮಟ್ಟದಲ್ಲಿ ಏರಿಕೆ ಕಂಡಿದೆ.ಸಂಕ್ರಾಂತಿ ಕಿಂಡಿ ಅಣೆಕಟ್ಟಿಗೆ ಬೇಕಿದೆ ಅಡ್ಡ ಹಲಗೆ: ಇಲ್ಲಿನ ಬೇಳೂರು ಉಗ್ರಾಣಿ ಬೆಟ್ಟಿನಲ್ಲಿರುವ ನೂರಾರು ವರ್ಷಗಳ ಹಳೆಯದಾದ ಸಂಕ್ರಾಂತಿ ಕಿಂಡಿ ಅಣೆಕಟ್ಟು ಸರಿಯಾದ ನಿರ್ವಹಣೆ 

ಇಲ್ಲದೆ ಸೊರಗುತ್ತಿದ್ದು  ಅಣೆಕಟ್ಟಿಗೆ ಅಡ್ಡಲಾಗಿ ಹಾಕಲಾಗುವ ಅಡ್ಡ ಹಲಗೆಯ ಸಮಸ್ಯೆಯಿಂದ ಪ್ರಮುಖ ಕಿಂಡಿ ಅಣೆಕಟ್ಟಿನಲ್ಲಿ ಸಂಗ್ರಹವಾಗುವ ವಾರಾಹಿ ಕಾಲುವೆಯ  ನೀರು ಸಮರ್ಪಕವಾಗಿ ಸಂಗ್ರಹವಾಗದೆ ನೀರು ಸೋರಿಕೆಯಾಗಿ ವ್ಯರ್ಥವಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟ ಜನಪ್ರತಿನಿಧಿಗಳು ಸಂಕ್ರಾಂತಿ ಕಿಂಡಿ ಅಣೆಕಟ್ಟಿನಲ್ಲಿ ನೀರು ಸಂಗ್ರಹಿಸುವ ನಿಟ್ಟಿನಿಂದ ಪ್ರಮುಖವಾಗಿ ಅಡ್ಡ ಹಲಗೆ ಅಗತ್ಯತೆ ಇದೆ ಎಂದು ಸ್ಥಳೀಯ ರೈತರು ಆಗ್ರಹಿಸಿದ್ದಾರೆ.

ಮೊಸಳೆ ಸಂಚಾರ: ಗ್ರಾಮಸ್ಥರು  ಭಯಭೀತ
ಇಲ್ಲಿನ ಉಗ್ರಾಣಿಬೆಟ್ಟಿನ ಸಮೀಪದಲ್ಲಿರುವ ಸಂಕ್ರಾಂತಿ ಕಿಂಡಿ ಅಣೆಕಟ್ಟಿನ ಸಮೀಪದಲ್ಲಿ ಕಳೆದ ಒಂದು ವಾರಗಳಿಂದಲೂ ಎರಡು ಮೊಸಳೆಗಳು ಸಂಚರಿಸುತ್ತಿರುವುದನ್ನು  ಪ್ರತ್ಯಕ್ಷದರ್ಶಿಯಾಗಿ ಕಂಡ ಇಲ್ಲಿನ ಸ್ಥಳೀಯರು ಭಯಭೀತರಾಗಿದ್ದು   ಒಂದೆಡೆ ಗ್ರಾಮಕ್ಕೆ ಹರಿದು ಬಂದ ನೀರಿನಿಂದ ರೈತರ ಮೊಗದಲ್ಲಿ ಸಂತಸ ಮೂಡಿಸಿದರೆ ಮತ್ತೂಂದೆಡೆಯಲ್ಲಿ ಆತಂಕದ ನಡುವೆ ಕೃಷಿಚಟುವಟಿಕೆ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಪ್ರಸ್ತುತ ದಿನಗಳಲ್ಲಿ ಎದುರಾಗಿರುವುದು ಮಾತ್ರ ವಾಸ್ತವ ಸತ್ಯ.

Advertisement

ಇಲ್ಲಿನ ಬೇಳೂರು ಉಗ್ರಾಣಿ ಬೆಟ್ಟಿನಲ್ಲಿರುವ ಸಂಕ್ರಾಂತಿ ಕಿಂಡಿ ಅಣೆಕಟ್ಟಿಗೆ  ನವೆಂಬರ್‌ ತಿಂಗಳಲ್ಲಿಯೇ ಅಡ್ಡಹಲಗೆ ಹಾಕಿದರೆ ಈ ಸುತ್ತಮುತ್ತಲ ಭಾಗದಲ್ಲಿರುವ ಕೃಷಿ ಭೂಮಿಯಲ್ಲಿ ಸುಗ್ಗಿ ಹಾಗೂ ದ್ವಿದಳ ಧಾನ್ಯಗಳ ಬೆಳೆಗೆ ಸಹಕಾರಿಯಾಗುವುದು. ಅಲ್ಲದೆ ಕಳೆದ ಹಲವು ವರ್ಷಗಳಿಂದಲೂ ಸಂಕ್ರಾಂತಿ ಕಿಂಡಿ ಅಣೆಕಟ್ಟಿನ ಹಲಗೆಯನ್ನು ಸ್ಥಳೀಯ ಸಹಕಾರದಿಂದ ನಿರ್ವಹಿಸಿಕೊಂಡು ಬಂದಿದ್ದೇವೆ. ಆದರೆ ಪ್ರಸ್ತುತ ಸಂಕ್ರಾಂತಿ ಕಿಂಡಿ ಅಣೆಕಟ್ಟಿಗೆ ತುರ್ತಾಗಿ  ಅಡ್ಡ ಹಲಗೆ ಅಳವಡಿಸಬೇಕಾಗಿದೆ.
– ಸುಧಾಕರ ಶೆಟ್ಟಿ ಉಗ್ರಾಣಿಬೆಟ್ಟು ಬೇಳೂರು, ಹಿರಿಯ ಸಾಂಪ್ರದಾಯಿಕ ಕೃಷಿಕರು

ಸುಮಾರು 20 ವರ್ಷಗಳ ಹಿಂದೆ ವಾರಾಹಿ ಕಾಲುವೆ ನೀರು ಕುಂದಾಪುರ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಿಗೆ ಹರಿದಿದ್ದರೇ ಈ ಭಾಗದ ಸಾವಿರಾರು ಕಬ್ಬು ಬೆಳೆಗಾರರಿಗೆ ಅಶ್ರಯವಾಗಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಉಳಿಯುತ್ತಿತ್ತು.  ಆದರೆ  40 ವರ್ಷಗಳ ವಾರಾಹಿ ಕಾಮಗಾರಿಯಲ್ಲಿ ನಡೆದ  ಕರ್ಮಕಾಂಡದಿಂದಾಗಿ  ಬೇಲಿಯೇ ಎದ್ದು ಹೊಲ ಮೇಯುವ ಪರಿಸ್ಥಿತಿ ಬಂದಿದ್ದು  ನಾವುಗಳು ಬುದ್ಧಿವಂತರ ಜಿಲ್ಲೆಯಲ್ಲಿದ್ದು ಕೂಡಾ ಬುದ್ಧಿ ಇದ್ದು ದಡ್ಡರನ್ನಾಗಿಸಿ ಜನರನ್ನು ದಾರಿ ತಪ್ಪಿಸಿರುವುದೇ ಉಡುಪಿ ಜಿಲ್ಲೆಯ ಮಹಾ  ದುರಂತದಲ್ಲೊಂದು.
– ಬೇಳೂರು ಮಧುಕರ ಶೆಟ್ಟಿ , (ಸಾಮಾಜಿಕ ಕಾರ್ಯಕರ್ತರು )

– ಟಿ. ಲೋಕೇಶ್‌ ಆಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next