Advertisement

‘ಮೋದಿ ಸರಕಾರದಿಂದ ದಮನಕಾರಿ ನೀತಿ’

11:13 AM Oct 11, 2017 | Team Udayavani |

ಮಹಾನಗರ: ವಿದ್ಯಾರ್ಥಿ ಯುವಜನರ, ರೈತ ಕಾರ್ಮಿಕರ ಪ್ರಶ್ನೆಗಳಿಗೆ ಸ್ಪಂದಿಸಬೇಕಾದ ನರೇಂದ್ರ ಮೋದಿ ಸರಕಾರವು ದೇಶದ ಬಂಡವಾಳಶಾಹಿಗಳ ಹಿತಾಸಕ್ತಿಯನ್ನು ಕಾಪಾಡುತ್ತಿದೆ. ಅಲ್ಪಸಂಖ್ಯಾಕರು, ದೀನ ದಲಿತರು ಹಾಗೂ ಮಹಿಳೆಯರಿಗೆ ರಕ್ಷಣೆಯೇ ಇಲ್ಲವಾಗಿದೆ. ಸರಕಾರದ ವಿರುದ್ಧ ಆಕ್ರೋಶಗೊಂಡ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಕೋಮುಗಲಭೆಗಳನ್ನು ಸೃಷ್ಟಿಸಲಾಗುತ್ತಿದೆ ಹಾಗೂ ವಿರುದ್ಧ ಸ್ವರ ಎತ್ತುವವರನ್ನು ದಮನಿಸಲಾಗುತ್ತಿದೆ ಎಂದು ಸಿಪಿಎಂ ಜಿಲ್ಲಾ ನಾಯಕ ಕೆ. ಆರ್‌. ಶ್ರೀಯಾನ್‌ ಹೇಳಿದರು.

Advertisement

ಬಿಜೆಪಿ ಜನರಕ್ಷಾ ಯಾತ್ರೆಯ ಹೆಸರಲ್ಲಿ ಕೇರಳದಲ್ಲಿ ಹಿಂಸಾಚಾರ ನಡೆಸಿ ಸಿಪಿಎಂ ವಿರುದ್ಧ ಅಪಪ್ರಚಾರ ಮಾಡುತ್ತಿದೆ ಹಾಗೂ ದೇಶದೆಲ್ಲೆಡೆ ಕಚೇರಿ ಹಾಗೂ ಕಾರ್ಯಕರ್ತರ ಮೇಲೆ ದಾಳಿ ನಡೆಸುತ್ತಿದೆ ಎಂದು ಖಂಡಿಸಿ ಜಿಲ್ಲಾ ಸಿಪಿಎಂ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಆಯೋಜಿಸಿದ್ದ ಪ್ರತಿಭಟನ ಪ್ರದರ್ಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಸುಳ್ಳು ಭರವಸೆಗಳನ್ನು ನೀಡಿ, ದೇಶದ ಅಧಿಕಾರದ ಚುಕ್ಕಾಣಿಯನ್ನು ಹಿಡಿದ ನರೇಂದ್ರ ಮೋದಿ ಸರಕಾರವು ಕಳೆದ ಮೂರು ವರ್ಷಗಳ ಅವಧಿಯಲ್ಲಿ ಜನಸಾಮಾನ್ಯರ ಬದುಕನ್ನು ತೀರಾ ಸಂಕಷ್ಟಕ್ಕೆ ದೂಡಿದೆ ಎಂದವರು ಟೀಕಿಸಿದರು.

ಆಡಳಿತ ಹತಾಶೆ ಮೂಡಿಸಿದೆ
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಮಾತನಾಡಿ ದುಡಿಯುವ ವರ್ಗದ ಆಶಾಕಿರಣವಾಗಿ ಜನಸಾಮಾನ್ಯರ ಬದುಕಿನ ಬಗ್ಗೆ ನಿರಂತರವಾಗಿ ಹೋರಾಡುವ ಸಿಪಿಎಂ ಅನ್ನು ಗುರಿಯಾಗಿಸಿ ದೇಶಾದ್ಯಂತ ಸಂಘಪರಿವಾರ ನಡೆಸುತ್ತಿರುವ ದಾಳಿಯು ಅದರ ಹತಾಶೆಯನ್ನು ಎತ್ತಿ ತೋರಿಸಿದೆ ಎಂದು ಹೇಳಿದರು. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ. ಯಾದವ ಶೆಟ್ಟಿ ಮಾತನಾಡಿ, ಬಿಜೆಪಿ ಸಂಘ ಪರಿವಾರದವರು ಜನ ಸಾಮಾನ್ಯರಿಗಾಗಿ ಹೋರಾಟ ನಡೆಸಿದ
ಚರಿತ್ರೆಯನ್ನು ಜನರ ಮುಂದಿಡಲಿ ಎಂದು ಸವಾಲು ಹಾಕಿದರು.

ಜಿಲ್ಲಾ ಮುಖಂಡರಾದ ಸುನೀಲ್‌ ಕುಮಾರ್‌ ಬಜಾಲ್‌, ಕೃಷ್ಣಪ್ಪ ಸಾಲ್ಯಾನ್‌, ಮುನೀರ್‌ ಕಾಟಿಪಳ್ಳ, ಜಯಂತ್‌ ನಾಯ್ಕ, ಪದ್ಮಾವತಿ ಶೆಟ್ಟಿ, ರಮಣಿ, ಜಯಂತಿ ಶೆಟ್ಟಿ, ಯೋಗೀಶ್‌ ಜಪ್ಪಿನ ಮೊಗರು, ಸದಾಶಿವದಾಸ್‌, ಕೃಷ್ಣಪ್ಪ ಕೊಂಚಾಡಿ ಮತ್ತಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next