ಮೈಸೂರು: ಆಕಾಶಕ್ಕೆ ಉಗುಳಿದ್ರೆ ಅದು ನಿಮ್ಮ ಮೇಲೆಯೇ ಬೀಳುತ್ತೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಾಕಾರರಿಗೆ ಸಂಸದ ಪ್ರತಾಪ್‌ಸಿಂಹ ತಿರುಗೇಟು ನೀಡಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕದ ಪ್ರವಾಹ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ಟ್ವೀಟ್ ಮಾಡಲಿಲ್ಲ ಅನ್ನುವವರಿಗೆ ಮೋದಿಯವರು ಅಮಿತ್ ಶಾ ಅವರನ್ನು ಕಳುಹಿಸಿದ್ದು ಕಾಣುವುದಿಲ್ಲವೇ? ಮೊದಲು ರಾಜ್ಯದ ಸಂಸದರ ಬಗ್ಗೆ ಮಾತನಾಡುತ್ತಿದ್ದರು. ಈಗ ಮೋದಿ ಬಗ್ಗೆ ಮಾತನಾಡುತ್ತಿದ್ದಾರೆ. ಟೀಕಿಸುವವರು ಮೊದಲು ಎನ್‌ಡಿಆರ್‌ಎಫ್ ಕಾರ್ಯವೈಖರಿ ತಿಳಿದುಕೊಳ್ಳಲಿ ಎಂದರು.
ಚಕ್ರವರ್ತಿ ಸೂಲಿಬೆಲೆ ಟ್ವೀಟ್‌ಗೂ ತಿರುಗೇಟು: ಸೂಲಿಬೆಲೆ ಟ್ವೀಟ್‌ಗೂ ತಿರುಗೇಟು ನೀಡಿದ ಪ್ರತಾಪ್‌ಸಿಂಹ, ಯಾರೂ ತಮ್ಮ ಕಿಸೆಯಿಂದ ಪರಿಹಾರ ಕೊಡುವುದಕ್ಕೆ ಆಗಲ್ಲ. ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಬೇಕಾದರೆ ಅದರದ್ದೇ ಆದ ಪ್ರಕ್ರಿಯೆ ಗಳಿವೆ. ಏನೂ ತಿಳಿಯದೇ ಸುಮ್ಮನೆ ಮಾತನಾಡುವವರು ರಾಜ್ಯದ ನಾಲ್ಕು ಜಿಲ್ಲೆಗಳಿಗೆ ಭೇಟಿ ನೀಡಿ ಯಾರನ್ನಾದರೂ ಕೇಳಿ ನೋಡಲಿ. ಸಂತ್ರಸ್ತರ ಪ್ರತಿ ಮನೆಗೂ 10 ಸಾವಿರ ರೂ.ನೀಡಿದ್ದೇವೆ. ಇಂತಹ ಮನೆಗೆ ಪರಿಹಾರ ತಲುಪಿಲ್ಲ ಎಂದು ನೋಡಿ ಹೇಳಲಿ. ಅದು ಬಿಟ್ಟು ಎಲ್ಲೋ ಕುಳಿತು ಸುಮ್ಮನೆ ಮಾತನಾಡುವುದು ಸರಿಯಲ್ಲ ಎಂದರು.
ಕೇಂದ್ರ ಸರ್ಕಾರದಿಂದ ಕಾನೂನಾತ್ಮಕ ಜತೆಗೆ ಇನ್ನೂ ಹೆಚ್ಚಿನ ಪರಿಹಾರದ ಅಗತ್ಯವಿದೆ. ಕೇಂದ್ರ ಸರ್ಕಾರದ ಅನುದಾನ, ಸಹಾಯ-ಸಹಕಾರ ಅಗತ್ಯವಿದೆ. ಪ್ರತಾಪ ಸಿಂಹ ಒಬ್ಬರೇ ಅಲ್ಲ. ಸಾಮಾನ್ಯರಿಗೂ ಕೂಡ ಭಾಷೆ ಬಳಸುವಾಗ ಜ್ಞಾನ ಇರಬೇಕು. ಎಚ್ಚರದಿಂದ ಮಾತನಾಡಬೇಕು.
-ಗೋವಿಂದ ಕಾರಜೋಳ, ಡಿಸಿಎಂ