ಹೊಸದಿಲ್ಲಿ: ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಮೋದಿ ಸರ್ ನೇಮ್ ವಿವಾದದಲ್ಲಿ ಗುಜರಾತ್ ಹೈಕೋರ್ಟ್ ನಲ್ಲಿ ಹಿನ್ನಡೆಯಾದ ಕಾರಣ ರಾಹುಲ್ ಗಾಂಧಿ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಮೋದಿ ಸರ್ ನೇಮ್ ವಿಚಾರದಲ್ಲಿ ದಾಖಲಿಸಿದ್ದ ಮೊಕದ್ದಮೆಯ ತನಿಖೆ ನಡೆಸಿದ್ದ ಸೂರತ್ ನ್ಯಾಯಾಲವು ಮಾರ್ಚ್ 24 ರಂದು ರಾಹುಲ್ ಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಇದರ ಕಾರಣದಿಂದ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಲಾಯಿತು. ಇದಾದ ಬಳಿಕ ರಾಹುಲ್ ಗುಜರಾತ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಅಲ್ಲೂ ಅವರಿಗೆ ಹಿನ್ನಡೆಯಾಗಿತ್ತು.
ಇದನ್ನೂ ಓದಿ:Mumbai: ಚೊಚ್ಚಲ ಟೆಸ್ಟ್ ಶತಕದ ಬೆನ್ನಲ್ಲೇ ಕನಸಿನ ಮನೆ ಖರೀದಿಸಿದ ಯಶಸ್ವಿ ಜೈಸ್ವಾಲ್
“ಎಲ್ಲಾ ಕಳ್ಳರು ಮೋದಿಯನ್ನು ಸಾಮಾನ್ಯ ಉಪನಾಮವಾಗಿ ಹೇಗೆ ಹೊಂದಿದ್ದಾರೆ?” ಎಂದು 2019ರ ಏಪ್ರಿಲ್ 13 ರಂದು ಕರ್ನಾಟಕದ ಕೋಲಾರದಲ್ಲಿ ಚುನಾವಣಾ ರ್ಯಾಲಿಯಲ್ಲಿ ರಾಹುಲ್ ಹೇಳಿಕೆ ನೀಡಿದ್ದರು. ಇದನ್ನು ಪ್ರಶ್ನಿಸಿ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ಕೇಸು ದಾಖಲಿಸಿದ್ದರು.
2019 ರಲ್ಲಿ ಕೇರಳದ ವಯನಾಡ್ ನಿಂದ ಲೋಕಸಭೆಗೆ ಚುನಾಯಿತರಾದ 53 ವರ್ಷದ ರಾಹುಲ್ ಗಾಂಧಿ ಅವರನ್ನು ಸೂರತ್ ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಎರಡು ವರ್ಷಗಳ ಶಿಕ್ಷೆ ವಿಧಿಸಿದ ನಂತರ ಪ್ರಜಾಪ್ರತಿನಿಧಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಸಂಸತ್ ಸದಸ್ಯರಾಗಿ ಅನರ್ಹಗೊಳಿಸಲಾಯಿತು. ಸದ್ಯ ಅವರು ಜಾಮೀನಿನಲ್ಲಿದ್ದಾರೆ.