ಮೈಸೂರು: ಶಾಸಕ ಆನಂದಸಿಂಗ್ ಹೊರತುಪಡಿಸಿ ಬೇರ್ಯಾರು ರಾಜೀನಾಮೆ ನೀಡಿಲ್ಲ. ಸದ್ಯಕ್ಕೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆ ಕರೆಯುವ ಸಂದರ್ಭ, ವಾತಾವರಣ ನಿರ್ಮಾಣವಾಗಿಲ್ಲ. ರಾಜೀನಾಮೆ ಕೊಟ್ಟಿರುವ ಶಾಸಕ ಆನಂದಸಿಂಗ್ ಜತೆ ನಾನು ಮಾತನಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯನಗರ ಕ್ಷೇತ್ರದ ಶಾಸಕ ಆನಂದಸಿಂಗ್ ಸಚಿವ ಸ್ಥಾನದ ವಿಚಾರಕ್ಕೆ ರಾಜೀನಾಮೆ ಕೊಟ್ಟಿಲ್ಲ. ಶಾಸಕ ಆನಂದ ಸಿಂಗ್ ರಾಜೀನಾಮೆ ಹಿಂದೆ ಬೇರೆಯದ್ದೇ ಕಾರಣವಿದೆ. ಜಿಂದಾಲ್ ಕಂಪನಿಗೆ ಭೂಮಿ ನೀಡುವುದನ್ನು ವಿರೋಧಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಕೊಟ್ಟ ನಂತರ ಆನಂದಸಿಂಗ್ ತಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ, ಅವರೊಂದಿಗೆ ನಾನು ಮಾತನಾಡುತ್ತೇನೆ ಎಂದರು.
ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟಿಲ್ಲ. ಮಾಧ್ಯಮಗಳಲ್ಲಿ ಬಂದಿರುವುದು ಸುಳ್ಳೆಂದು ಸ್ಪೀಕರ್ ರಮೇಶ್‌ಕುಮಾರ್ ಅವರೇ ತಮ್ಮ ಕಚೇರಿಯಲ್ಲಿ ಪರಿಶೀಲಿಸಿ ಸ್ಪಷ್ಟಪಡಿಸಿದ್ದಾರೆ. ರಮೇಶ್ ಜಾರಕಿಹೊಳಿ ತಮ್ಮ ಲೆಟರ್ ಹೆಡ್‌ನಲ್ಲಿ ರಾಜೀನಾಮೆ ಬರೆದು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟರೆ ಅದನ್ನು ರಾಜೀನಾಮೆ ಎನ್ನುವುದಿಲ್ಲ. ರಾಜೀನಾಮೆ ಕೊಡಲು ರೀತಿ ನೀತಿ ಇದೆ ಎಂದು ಹೇಳಿದರು.
ಜಿಟಿಡಿಗೆ ಟಾಂಗ್: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಬಿಜೆಪಿ ನಾಯಕರು ಆಪರೇಷನ್ ಕಮಲ ಮಾಡುತ್ತಿಲ್ಲ ಎಂಬ ಹೇಳಿಕೆ ನೀಡಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಆತನಿಗೆ ಆ ರೀತಿಯ ಮಾಹಿತಿ ಇರಬಹುದು. ಆದರೆ, ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತಿದ್ದಾರೆ. ಸ್ವತಃ ನರೇಂದ್ರ ಮೋದಿ, ಅಮಿತ್ ಶಾ ಅವರೇ ಆಪರೇಷನ್ ಕಮಲ ಮಾಡುತ್ತಿದ್ದಾರೆ ಎಂದು ಮತ್ತೂಮ್ಮೆ ಆರೋಪಿಸುವ ಮೂಲಕ ಸಚಿವ ಜಿಟಿಡಿಗೆ ಟಾಂಗ್ ಕೊಟ್ಟರು.
ವರುಣಾ ಕ್ಷೇತ್ರದ ಸಭೆ: ರಾಜ್ಯರಾಜಕೀಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಮಧ್ಯೆ ಸಿದ್ದರಾಮಯ್ಯ ಅವರು ತಮ್ಮ ಪುತ್ರ ಪ್ರತಿನಿಧಿಸುತ್ತಿರುವ ವರುಣಾ ಕ್ಷೇತ್ರದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು.