ಎನ್‌ಇಪಿ ಬದಲು ಎಸ್‌ಇಪಿ ಜಾರಿಗೊಳಿಸುವ ವಿಚಾರಕ್ಕೆ ಸಂಬಂಧಿಸಿದ ಚರ್ಚೆ ವೇಳೆ ವಿಷಯ ಪ್ರಸ್ತಾಪಿಸಿದ ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ.ಸುಧಾಕರ್, ಕ್ಯಾಂಪಸ್‌ಗಳಲ್ಲಿ ಸೆಲ್ಫಿ ಪಾಯಿಂಟ್ ಸ್ಥಾಪಿಸುವಂತೆ ಯುಜಿಸಿ ಎಲ್ಲ ಕಾಲೇಜು ಮತ್ತು ವಿವಿಗಳಿಗೆ ಸೂಚಿಸಿದೆ. ಆದರೆ ಅಲ್ಲಿನ ಗುಂಡಿ ಒತ್ತಿದರೆ, ಪ್ರಧಾನಿ ಫೋಟೋ ಬರುತ್ತದೆ. ಯಾವುದಾದರೂ ಸಾಧಕರೊಂದಿಗೆ ಫೋಟೋ ತೆಗೆಸಿಕೊಳ್ಳುವುದಾದರೆ ಆಗಬಹುದು. ಆದರೆ ನಮ್ಮ ಪ್ರಧಾನಿ ಏನು ಓದಿದ್ದಾರೆ ಎಂಬುದೇ ಇಂದಿಗೂ ಯಾರಿಗೂ ಗೊತ್ತಿಲ್ಲ ಎಂದು ಹೇಳಿದರು.
Advertisement
ಇದು ಆಕ್ರೋಶದ ಕಿಡಿಹೊತ್ತಿಸಿತು. ವಿಪಕ್ಷ ಬಿಜೆಪಿ ಸದಸ್ಯರು ಆಡಳಿತ ಪಕ್ಷದ ಮೇಲೆ ಮುಗಿಬಿದ್ದರು. ಒಬ್ಬ ಪ್ರಧಾನಿ ಬಗ್ಗೆ ಹೀಗೆ ಮಾತನಾಡುವುದು ಎಷ್ಟು ಸರಿ? ಹೀಗಾದರೆ, ನಿಮ್ಮ ಸೋನಿಯಾ ಗಾಂಧಿ ಏನು ಓದಿದ್ದಾರೆ ಅಂತ ಕೇಳಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಭಾಪತಿ ಬಸವರಾಜ ಹೊರಟ್ಟಿ, ಪ್ರಧಾನಿ ಬಗ್ಗೆ ಹಾಗೆಲ್ಲ ಮಾತನಾಡುವುದು ಸರಿಯಲ್ಲ. ಅದನ್ನು ಕಡತದಿಂದ ತೆಗೆದುಹಾಕುವಂತೆ ಸೂಚಿಸಿದರು. ಇದಾದ ಮೇಲೂ ವಾಗ್ವಾದ ಮುಂದುವರಿದಾಗ, ಗದ್ದಲದ ವಾತಾವರಣ ಸೃಷ್ಟಿಯಾಯಿತು. ಕೊನೆಗೆ ಸದನವನ್ನು ಸೋಮವಾರಕ್ಕೆ ಮುಂದೂಡಲಾಯಿತು.