ತಿಪಟೂರು: “ಮೋದಿ ಮತ್ತೆ ನಾನು ಪ್ರಧಾನಿ ಆಗ್ತಿàನಿ ಅಂತಾರೆ. ಆದರೆ, ಅದು ಅಷ್ಟು ಸುಲಭದ ಮಾತಲ್ಲ. ಮೋದಿ ಮತ್ತೆ ಈ ದೇಶದ ಪ್ರಧಾನಿಯಾಗಲು ಸಾಧ್ಯವಿಲ್ಲ’ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಬುಧವಾರ ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. “ನಾನು ಸುದೀರ್ಘ ಅವಧಿಗೆ, ಕಳೆದ 60 ವರ್ಷಗಳಿಂದಲೂ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ರಾಜಕಾರಣ ಎಂದರೆ ಏನೆಂದು ಮೋದಿಗಿಂತ ನನಗೆ ಹೆಚ್ಚು ತಿಳಿದಿದೆ. ಈಗ ಯಾವ, ಯಾವ ರಾಜ್ಯಗಳಲ್ಲಿ ರಾಜಕೀಯ ಪರಿಸ್ಥಿತಿ ಯಾವ ರೀತಿ ಇದೆ ಎಂಬುದು ನನಗೆ ಗೊತ್ತು. ಯಾವ ಕಾರಣಕ್ಕೂ ಅವರು ಮತ್ತೆ ಪ್ರಧಾನಿ ಆಗಲ್ಲ’ ಎಂದು ಭವಿಷ್ಯ ನುಡಿದರು.
ರಾಹುಲ್ ಅವರು ಕರ್ನಾಟಕದಲ್ಲಿ ದೇವೇಗೌಡರಿಗೆ ಗೆಲ್ಲಲು ಬಿಡಲ್ಲ. ಅವರಿಗೆ ಒಕ್ಕಲಿಗರು ಓಟು ಹಾಕಲ್ಲ ಎಂದು ಕೇರಳಕ್ಕೆ ಕಳುಹಿಸಿದ್ದಾರೆ ಎಂಬ ಆರೋಪವನ್ನು ಮೋದಿ ಮಾಡಿದ್ದಾರೆ. ಆದರೆ, ಒಕ್ಕಲಿಗರು ಚಿಕ್ಕಮಗಳೂರು ಕ್ಷೇತ್ರದಿಂದ ಈ ಹಿಂದೆ ಮಾಜಿ ಪ್ರಧಾನಿ ಇಂದಿರಾಗಾಂಧಿಯವರನ್ನು ಗೆಲ್ಲಿಸಿ ಕಳುಹಿಸಿಲ್ಲವೆ?. ಬಳ್ಳಾರಿಯಿಂದ ಸೋನಿಯಾಗಾಂಧಿಯವರನ್ನು ನಮ್ಮ ನಾಡಿನ ಜನತೆ ಗೆಲ್ಲಿಸಲ್ಲವೆ? ಎಂದರು.
ಮೈತ್ರಿ ಸರ್ಕಾರದ ಮುಖಂಡರುಗಳು ಸೇರಿದಂತೆ ಡಿಸಿಎಂ ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಅಭಿಮಾನಿಗಳು, ಕಾರ್ಯಕರ್ತರ ಒತ್ತಡದ ಮೇರೆಗೆ ಸ್ಪರ್ಧಿಸಲು ತುಮಕೂರು ಕ್ಷೇತ್ರಕ್ಕೆ ಬಂದಿದ್ದೇನೆ. ಈಗ ಏನನ್ನೂ ಆಶ್ವಾಸನೆ ನೀಡಲ್ಲ. ಗೆದ್ದ ನಂತರ ಈ ಕ್ಷೇತ್ರಕ್ಕೆ ನೀರು ಸೇರಿದಂತೆ ಏನೇನು ಮಾಡಬೇಕೋ ಎಲ್ಲವನ್ನೂ ಮಾಡಿ ತೋರಿಸುತ್ತೇನೆ ಎಂದು ವಾಗ್ಧಾನ ಮಾಡಿದರು.
ಕುರುಬ, ಮುಸ್ಲಿಮರಿಗೆ ಬಿಜೆಪಿ ಟಿಕೆಟನ್ನೇ ನೀಡಿಲ್ಲ: ಲೋಕಸಭಾ ಚುನಾವಣೆಯ 28 ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿಯೂ ಕುರುಬ, ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ಕೋಮುವಾದಿ ಬಿಜೆಪಿ ಟಿಕೆಟ್ ನೀಡಿಲ್ಲ. ಇಂತಹ ಪಕ್ಷಕ್ಕೆ ನೀವು ಮತ ನೀಡದಿರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೋಪಿಸಿದರು.
ಪಟ್ಟಣದಲ್ಲಿ ದೇವೇಗೌಡರ ಪರ ಚುನಾವಣಾ ಪ್ರಚಾರ ನಡೆಸಿದ ಅವರು, ಹಿಂದುಳಿದ ವರ್ಗಗಳಿಗೆ, ಮಹಿಳೆಯರಿಗೆ ಚುನಾವಣೆಗೆ ಸ್ಪರ್ಧಿಸಲು ಮಿಸಲಾತಿ ತಂದಿದ್ದು ನಾವು. ಇದನ್ನು ಬಿಜೆಪಿಯವರು ವಿರೋಧಿಸಿದ್ದರು. ಬಿಜೆಪಿಯವರಿಗೆ ಸಾಮಾಜಿಕ ನ್ಯಾಯವಿಲ್ಲ.
ಕೋಮು ಗಲಭೆ ಸೃಷ್ಟಿಸುವ ಕೆಲಸ ಮಾಡುತ್ತಾರೆ. ಇವರಿಂದ ಅಭಿವೃದ್ದಿ ನಿರೀಕ್ಷಿಸಲು ಸಾಧ್ಯವೇ ಇಲ್ಲ. ಕರ್ನಾಟಕದಿಂದ ಪ್ರಧಾನಿಯಾಗಿದ್ದ ಏಕೈಕ ವ್ಯಕ್ತಿ ದೇವೇಗೌಡರು, ನೆಲ, ಜಲದ ಬಗ್ಗೆ ಅಪಾರವಾದ ಕಾಳಜಿ ಹಾಗು ಅನುಭವ ಹೊಂದಿದ್ದಾರೆ. ಇಳಿವಯಸ್ಸಿನಲ್ಲಿಯೂ ದೇಶದ ಅಭಿವೃದ್ದಿಯ ಕನಸು ಕಾಣುತ್ತಿದ್ದಾರೆ ಎಂದರು.