ಹೊಸದಿಲ್ಲಿ : “ಸ್ವಾತಂತ್ರ್ಯದ ಬಳಿಕ 75 ವರ್ಷಗಳಲ್ಲಿ ನಾವು ಏನು ನಿರ್ಮಿಸಿದ್ದೇವೆ? ಭಾರತವು ಭಾರತೀಯರಿಂದ ನಿರ್ಮಿಸಲ್ಪಟ್ಟ ಸಂಸತ್ತನ್ನು ಏಕೆ ಪಡೆಯಬಾರದು” ಎಂದು ಗುರುವಾರ ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಉಪಕ್ರಮದಿಂದ ಹೊಸ ಸಂಸತ್ ಭವನವನ್ನು ನಿರ್ಮಿಸಲಾಗಿದೆ ಎಂಬ ಕಾರಣಕ್ಕೆ ವಿರೋಧ ಪಕ್ಷಗಳು ಅದರ ಉದ್ಘಾಟನೆಯನ್ನು ಬಹಿಷ್ಕರಿಸಲು ನಿರ್ಧರಿಸಿವೆ. ಹೊಸ ಕಟ್ಟಡವು ಭಾರತದ ಹೆಮ್ಮೆಯ ಸಂಕೇತವಾಗಿದೆ ಮತ್ತು ಮೇ 28 ರಂದು “ವಿಶಾಲ ಹೃದಯ” ತೋರಿಸುವ ಮೂಲಕ ಅದರ ಉದ್ಘಾಟನೆಯ “ಐತಿಹಾಸಿಕ ದಿನ” ದಲ್ಲಿ ಭಾಗವಹಿಸಲು ವಿರೋಧ ಪಕ್ಷಗಳಿಗೆ ಮನವಿ ಮಾಡಿದರು.
“ಮೊಘಲರು ಲಾಲ್ ಕಿಲಾ, ಜಾಮಾ ಮಸೀದಿ ಮತ್ತು ಹುಮಾಯೂನ್ ಸಮಾಧಿಯನ್ನು ನಿರ್ಮಿಸಿದರು. ಕುತುಬ್-ಉದ್-ದಿನ್ ಐಬಕ್ ಕುತುಬ್ ಮಿನಾರ್ ಅನ್ನು ನಿರ್ಮಿಸಿದ ಎಂದು ಅವರು ಹೇಳುತ್ತಾರೆ. ಬ್ರಿಟಿಷರು ನಾರ್ತ್ ಬ್ಲಾಕ್, ಸೌತ್ ಬ್ಲಾಕ್, ವೈಸರಾಯ್ ಹೌಸ್ ಎಂದು ಕರೆಯಲಾಗುತ್ತಿದ್ದ ರಾಷ್ಟ್ರಪತಿ ಭವನ ಮತ್ತು ಸಂಸದ್ ಭವನವನ್ನು ನಿರ್ಮಿಸಿದರು,ಭಾರತವು ಭಾರತೀಯರಿಂದ ನಿರ್ಮಿಸಲ್ಪಟ್ಟ ಸಂಸತ್ತನ್ನು ಏಕೆ ಪಡೆಯಬಾರದು ಎಂದು ಪ್ರಶ್ನಿಸಿದರು.
ಹೊಸ ಸಂಸತ್ತಿನ ಕಟ್ಟಡವು ಭಾರತೀಯ ವಾಸ್ತುಶಿಲ್ಪದ ಅನುಕರಣೀಯ ಮಾದರಿ ಮತ್ತು ಇದನ್ನು ಭಾರತೀಯ ಸಂಸ್ಕಾರದ ಪ್ರಕಾರ ನಿರ್ಮಿಸಲಾಗಿದೆ ಎಂದು ಪ್ರಸಾದ್ ಹೇಳಿದರು.
Related Articles
”ನೀವು ಬಂದು ಕಾರ್ಯಕ್ರಮಕ್ಕೆ ಹಾಜರಾಗಿ ಎಂದು ನಾನು ಕಾಂಗ್ರೆಸ್ ನಾಯಕರು ಮತ್ತು ಇತರ ಪ್ರತಿಪಕ್ಷ ನಾಯಕರಿಗೆ ಹೇಳುತ್ತೇನೆ. ಸಂಸತ್ತು ದೇಶದ ಪ್ರಜಾಪ್ರಭುತ್ವದ ಕಿರೀಟವಾಗಿದೆ. ಭಾರತದ ಮೊದಲ ಪ್ರಧಾನಿಯಾಗಿದ್ದ ನಿಮ್ಮ ನಾಯಕ ಸಂಬಂಧ ಹೊಂದಿದ್ದ ಸೆಂಗೋಲ್ ಹಸ್ತಾಂತರಿಸುವ ಸಂಪ್ರದಾಯವಿದೆ. ಈ ಇತಿಹಾಸ, ಐತಿಹಾಸಿಕ ಪರಂಪರೆಯನ್ನು ವೀಕ್ಷಿಸಲು ಕಾಂಗ್ರೆಸ್‌ನಲ್ಲಿರುವ ನನ್ನ ಸ್ನೇಹಿತರನ್ನು ನಾನು ಕೇಳುತ್ತೇನೆ” ಎಂದರು.
“ಪ್ರತಿ ವಾರ ಲಕ್ಷಗಟ್ಟಲೆ ಪ್ರವಾಸಿಗರು ಭೇಟಿ ನೀಡುವ ಸರ್ದಾರ್ ಪಟೇಲ್ ಅವರ ಏಕತಾ ಪ್ರತಿಮೆಯನ್ನು ನೋಡಲು ಅವರು ಹೋಗಿದ್ದಾರೆಯೇ? ಪರಮವೀರ ಚಕ್ರ ಪುರಸ್ಕೃತರಿಗೆ ಶ್ರದ್ಧಾಂಜಲಿ ಅರ್ಪಿಸಲು ಇಂಡಿಯಾ ಗೇಟ್ ಬಳಿ ನಿರ್ಮಿಸಲಾದ ವಿಶ್ವ ದರ್ಜೆಯ ಯುದ್ಧ ಸ್ಮಾರಕಕ್ಕೆ ಅವರು ಭೇಟಿ ನೀಡಿದ್ದಾರೆಯೇ? ಇಲ್ಲ, ಅವರು ಅದನ್ನು ಮಾಡಿಲ್ಲ ಏಕೆಂದರೆ ಅದನ್ನು ಮೋದಿ ಜಿ ನಿರ್ಮಿಸಿದ್ದಾರೆ. ಪ್ರಧಾನಿ ಮೋದಿ ಅವರು ವಿವಿಧ ಸಂದರ್ಭಗಳಲ್ಲಿ ತಮ್ಮ ಹಿಂದಿನ ಎಲ್ಲ ನಾಯಕರಿಗೆ ಗೌರವವನ್ನು ತೋರಿಸಿದ್ದಾರೆ ಎಂದು ಹೇಳಿದರು.
“ದೇಶದಲ್ಲಿ ಜನರಿಂದ ಚುನಾಯಿತರಾದ ನಾಲ್ಕು ಪ್ರಧಾನ ಮಂತ್ರಿಗಳು ಮಾತ್ರ ಇದ್ದಾರೆ ಎಂದು ನಾನು ಈ ದೇಶಕ್ಕೆ ಹೇಳಲು ಬಯಸುತ್ತೇನೆ – ಮೊದಲನೇಯವರು ನೆಹರೂ ಜಿ, ಎರಡನೇಯವರು ಇಂದಿರಾ ಗಾಂಧಿ, ಮೂರನೇಯವರು ಅಟಲ್ ಬಿಹಾರಿ ವಾಜಪೇಯಿ ಮತ್ತು ನಾಲ್ಕನೇಯವರು ನರೇಂದ್ರ ಮೋದಿ” ಎಂದು ಹೇಳಿದರು.