ಪುಂಜಾಲಕಟ್ಟೆ: ಅಡುಗೆ ಮಾಡುವಾಗ ಅದರ ಹೊಗೆಯಿಂದ ಆಗುವ ಆರೋಗ್ಯ ತೊಂದರೆಯಿಂದ ಬಡ ಮಹಿಳೆ ಮುಕ್ತಳಾಗಬೇಕು, ಸಾಮಾನ್ಯ ವರ್ಗದ ಬಡ ಮಹಿಳೆ ಕೂಡ ಆಧುನಿಕ ಸೌಲಭ್ಯಗಳನ್ನು ಹೊಂದಬೇಕೆಂಬ ಆಶಯದೊಂದಿಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಉಜ್ವಲ ಯೋಜನೆಯನ್ನು ಜಾರಿಗೊಳಿಸಿದೆ. ಅದರಂತೆ ಗ್ಯಾಸ್ ಕಿಟ್‌ಗಳನ್ನು ವಿತರಿಸಲಾಗುತ್ತಿದೆ.
ದೇಶವನ್ನು ಹೊಗೆಮುಕ್ತವನ್ನಾಗಿಸುವುದು ನರೇಂದ್ರ ಮೋದಿಯವರ ಸಂಕಲ್ಪ. ಇದನ್ನು ಅರ್ಹರೆಲ್ಲರೂ ಸದುಪಯೋಗಪಡಿಸಿ ಕೊಳ್ಳಬೇಕು ಎಂದು ಪ್ರಗತಿಪರ ಕೃಷಿಕ ರಾಜೇಶ್ ನಾೖಕ್ ಹೇಳಿದರು.
ಅವರು ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮ ಪಂಚಾಯತ್‌ನ ರಾಜೀವ್ ಗಾಂಧಿ ಸಭಾಂಗಣದಲ್ಲಿ ಕೇಂದ್ರ ಸರಕಾರದ ಪೆಟ್ರೋಲಿಯಂ ಮತ್ತು ಪ್ರಾಕೃತಿಕ ಅನಿಲ ಖಾತೆಯ ವತಿಯಿಂದ ನಡೆದ ಸರಪಾಡಿ ಮತ್ತು ಮಣಿನಾಲ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ವಿಮಾ ಸೌಲಭ್ಯ
ಪ್ರತೀ ಗ್ರಾಮದ ಅರ್ಹ ಬಡಜನತೆಗೆ ಈ ಯೋಜನೆಯನ್ನು ತಲುಪಿಸಲಾಗುವುದು. ಈ ಯೋಜನೆಯಲ್ಲಿ ಫಲಾನುಭವಿಗಳಿಗೆ ವಿಮೆಯನ್ನೂ ಒದಗಿಸಲಾಗಿದೆ. ಈ ಮೂಲಕವಾಗಿ ಅಡುಗೆ ಅನಿಲದಿಂದಾಗಿ ಯಾವುದೇ ರೀತಿಯ ಅವಘಡವು ಸಂಭವಿಸಿದರೆ ಈ ವಿಮಾ ಯೋಜನೆಯ ಮೂಲಕ ಪರಿಹಾರ ದೊರಕುತ್ತದೆ ಎಂದರು.
ಸರಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ಧರ್ಣಪ್ಪ ಪೂಜಾರಿ, ಉಪಾಧ್ಯಕ್ಷ ದಯಾನಂದ ಶೆಟ್ಟಿ,ಸದಸ್ಯರಾದ ಧನಂಜಯ ಶೆಟ್ಟಿ ಎನ್., ನಾಣ್ಯಪ್ಪ ಪೂಜಾರಿ, ಆದಂ ಕುಂಞಿ, ಯಕ್ಷಗಾನ ಕಲಾವಿದ ಅಶೋಕ ಶೆಟ್ಟಿ ಸರಪಾಡಿ, ಪ್ರಮುಖರಾದ ಪುರುಷೋತ್ತಮ ಮಜಲು, ಶ್ರೀನಿವಾಸ ಮೇಸ್ತ್ರಿ, ಪೂವಪ್ಪ ಕಡಮಾಜೆ, ಸಾಂತಪ್ಪ ಪೂಜಾರಿ, ಶಶಿಕಾಂತ ಶೆಟ್ಟಿ, ಪ್ರಭಾರ ಪಂಚಾಯತ್ ಅಧಿಕಾರಿ ರಾಜಶೇಖರ ರೈ ಮತ್ತಿತರರು ಉಪಸ್ಥಿತರಿದ್ದರು.