Advertisement

ಮೋದಿ ಕ್ಷಮೆ ಕೇಳಲಿಲ್ಲ, ಕಲಾಪ ನಡೆಯಲಿಲ್ಲ

08:30 AM Dec 21, 2017 | Team Udayavani |

ನವದೆಹಲಿ: ಗುಜರಾತ್‌ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಮಾಜಿ ಪಿಎಂ ಡಾ.ಮನಮೋಹನ್‌ ಸಿಂಗ್‌ ವಿರುದ್ಧ ಮಾಡಿದ ಆರೋಪ ಲೋಕಸಭೆ, ರಾಜ್ಯಸಭೆ ಕಲಾಪಗಳನ್ನು ನುಂಗಿ ಹಾಕಿತು. ಪ್ರಧಾನಿ ಮೋದಿ ಡಾ.ಸಿಂಗ್‌ ಕ್ಷಮೆ ಕೋರಲೇ ಬೇಕು ಎಂಬ ಕಾಂಗ್ರೆಸ್‌ ಒತ್ತಾಯದಿಂದಾಗಿ ಎರಡೂ ಸದನಗಳಲ್ಲಿ ಕಲಾಪ ನಡೆಸಲು ಸಾಧ್ಯವಾಗದೆ ಗುರುವಾರಕ್ಕೆ ಮುಂದೂಡಲ್ಪಟ್ಟಿತು.

Advertisement

ಲೋಕಸಭೆ ಕಲಾಪ ಆರಂಭವಾದ ಕೆಲವೇ ನಿಮಿಷಗಳಲ್ಲಿ ಇದನ್ನು ಪ್ರಸ್ತಾಪಿಸಿದ ಕಾಂಗ್ರೆಸ್‌ ಸಂಸದರು, ಪ್ರಧಾನಿ ಕ್ಷಮೆ ಕೇಳಬೇಕೆಂದು ಕಾಂಗ್ರೆಸ್‌ ಸಂಸದರು ಸ್ಪೀಕರ್‌ ಎದುರಿನ ಬಾವಿಗೆ ನುಗ್ಗಿ ಪ್ರತಿಭಟನೆ ನಡೆಸಿದರು. ಗಮನಾರ್ಹ ಅಂಶವೆಂದರೆ ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಇದ್ದರು. ಈ ಸಂದರ್ಭದಲ್ಲಿ “ಡಾಕ್ಟರ್‌ ಸಾಹೇಬ್‌ ಸೆ ಮಾಫಿ ಮಾಂಗೋ’ (ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ರ ಕ್ಷಮೆ ಕೇಳಿ) ಎಂದು ಒತ್ತಾಯಿಸಿದರು.

ಈ ಕುರಿತಾಗಿ ಲೋಕಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತನಾಡಲು ಅವಕಾಶ ನೀಡಬೇಕೆಂದು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರಲ್ಲಿ ಮನವಿ ಸಲ್ಲಿಸಿದರು. ಅಲ್ಲದೆ, ಕಲಾಪದ ಆ ವೇಳೆಯನ್ನು ಶೂನ್ಯ ಅವಧಿಯೆಂದು ಪರಿಗಣಿಸುವಂತೆ ಕೋರಿದರು. ಆದರೆ, ಮಹಾಜನ್‌ ಕಾಂಗ್ರೆಸ್ಸಿಗರ ಮನವಿ ತಳ್ಳಿಹಾಕಿ, ಆ ವೇಳೆಯನ್ನು ಪ್ರಶ್ನೋತ್ತರ ಅವಧಿಯಾಗಿ ಪರಿಗಣಿಸುವುದೆಂದು ಹೇಳಿದರು. ಮಧ್ಯಾಹ್ನದ ಬಳಿಕವೂ ಗದ್ದಲವೇ ಮುಂದುವರಿಯಿತು.

ಯಾರೂ ಕ್ಷಮೆ ಕೇಳಬೇಕಾದ ಅಗತ್ಯವಿಲ್ಲ: ರಾಜ್ಯಸಭೆಯಲ್ಲಿ ಕೂಡ ಪ್ರಧಾನಿ ಮೋದಿ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್‌ ಸದಸ್ಯರು ಪಟ್ಟು ಹಿಡಿದರು. ಅವರನ್ನು ಮನ ವೊಲಿಸಲು ಸಭಾಪತಿ ಯತ್ನಿಸಿದರಾದರೂ ಕಾಂಗ್ರೆಸ್‌ ಸಂಸದರು ಮಣಿಯಲಿಲ್ಲ. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ನಾಯ್ಡು “ಪ್ರಧಾನಿ ಸಂಸತ್‌ನಲ್ಲಿ ಹೇಳಿಕೆ ನೀಡಲಿಲ್ಲ. ಹೀಗಾಗಿ ಅವರಾಗಲಿ ಯಾರೇ ಆಗಲಿ ಕ್ಷಮೆ ಕೋರಬೇಕಾಗಿಲ್ಲ’ ಎಂದರು. ಪ್ರಶ್ನೋತ್ತರ ರದ್ದು ಮಾಡುವಂತೆ ಕೇಳಿಕೊಂಡಾಗಲೂ ಆಕ್ಷೇಪಿಸಿದ ಸಭಾಪತಿ “ಇದು ಸಂಸತ್‌. ರಾಜ್ಯಸಭೆ. ಪ್ರಶ್ನೋತ್ತರ ವೇಳೆ ರದ್ದು ಮಾಡುವ ಅಭ್ಯಾಸ ಇಲ್ಲಿಲ್ಲ’ ಎಂದರು.

ಕೋಮು ಗಲಭೆ ರಾಜ್ಯಕ್ಕೆ 2ನೇ ಸ್ಥಾನ
ಕಳೆದ ಮೂರು ವರ್ಷಗಳಲ್ಲಿ ದೇಶಾದ್ಯಂತ ನಡೆದ ಕೋಮು ಗಲಭೆಗಳಲ್ಲಿ ಕರ್ನಾಟಕ 2ನೇ ಸ್ಥಾನ ಗಳಿಸಿದೆ ಆತಂಕ ಮೂಡಿಸುವ ಈ ಸತ್ಯವನ್ನು ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ಹನ್ಸ್‌ರಾಜ್‌ ಆಹಿರ್‌, ರಾಜ್ಯಸಭೆಗೆ ಈ ವಿಚಾರ ತಿಳಿಸಿದ್ದಾರೆ. 2014ರಿಂದ 2016ರ ಅವಧಿಯಲ್ಲಿ ರಾಜ್ಯದಲ್ಲಿ 279 ಕೋಮು ಗಲಭೆಗಳು ನಡೆದಿದ್ದು ಇವುಗಳಲ್ಲಿ 29 ಜನರು ಪ್ರಾಣ ತೆತ್ತಿದ್ದಾರೆ ಎಂದು ಸಚಿವರು ಸದನಕ್ಕೆ ತಿಳಿಸಿದ್ದಾರೆ.  ಈ ಪಟ್ಟಿಯಲ್ಲಿ ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿದೆ. ಅಲ್ಲಿ, ಕಳೆದ ಮೂರು ವರ್ಷಗಳಲ್ಲಿ 2,098 ಕೋಮು ಗಲಭೆಗಳು ನಡೆದಿದ್ದು 278 ಜನರು ಸಾವಿಗೀಡಾಗಿದ್ದಾರೆ. ಇನ್ನು, ಮಹಾರಾಷ್ಟ್ರ ಈ ಪಟ್ಟಿಯ ಮೂರನೇ ಸ್ಥಾನದಲ್ಲಿದೆ. ಆ ರಾಜ್ಯದಲ್ಲಿ 2014ರಿಂದೀಚೆಗೆ 270 ಕೋಮು ಗಲಭೆಗಳು ನಡೆದಿದ್ದು, ಇವುಗಳಲ್ಲಿ 32 ಜನರು ಬಲಿಯಾಗಿದ್ದಾರೆ.  ಪ್ರಮುಖ ರಾಜ್ಯಗಳಾದ ರಾಜಸ್ಥಾನದಲ್ಲಿ 200 ಗಲಭೆಗಳಾಗಿದ್ದು 24 ಜನರು ಜೀವ ಕಳೆದುಕೊಂಡಿದ್ದರೆ, ಗುಜರಾತ್‌ನಲ್ಲಿ 182 ಕೋಮು ದಳ್ಳುರಿಗೆ 21 ಜನರು ಆಹುತಿಯಾಗಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next