ಬೆಂಗಳೂರು: “ಪ್ರಧಾನಿ ನರೇಂದ್ರ ಮೋದಿಗೆ ರಾಜ್ಯದ ನೆರೆ ಸಂತ್ರಸ್ತರಿಗೆ ಸಾಂತ್ವನ ಹೇಳಲು ಸಮಯವಿಲ್ಲ. ಆದರೆ, ಅಮೆರಿಕಕ್ಕೆ ಹೋಗಿ ಒಂದು ಪಕ್ಷದ ಪರ ಚುನಾವಣಾ ಪ್ರಚಾರ ಮಾಡುತ್ತಾರೆ. ಟ್ರಂಪ್‌ಗೆ ಮತ ಹಾಕಿ ಎಂದು ಮೋದಿ ಅಮೆರಿಕದಲ್ಲಿರುವ ಭಾರತೀಯರಿಗೆ ಹೇಳಿರುವುದು ನಮ್ಮ ವಿದೇಶಾಂಗ ನೀತಿಯನ್ನು ಗಾಳಿಗೆ ತೂರಿದಂತಾಗಿದೆ’ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಇದು ಅಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಗೂ ಧಕ್ಕೆಯಾಗಲಿದೆ. ಮುಂದಿನ ಚುನಾವಣೆಯಲ್ಲಿ ಅಮೆರಿಕದಲ್ಲಿ ಟ್ರಂಪ್ ಬದಲು ಬೇರೆ ಸರ್ಕಾರ ಬಂದರೆ, ಆ ಸರ್ಕಾರ ಭಾರತದ ಮೇಲೆ ಅನಗತ್ಯ ನಿರ್ಬಂಧ ಹೇರುವ ಸಾಧ್ಯತೆಯಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಇವಿಎಂ ದುರುಪಯೋಗ: ಕೇಂದ್ರ ಸರ್ಕಾರ ಕೆಲವು ಕ್ಷೇತ್ರಗಳಲ್ಲಿ ಇವಿಎಂ ದುರುಪಯೋಗ ಪಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ನಾನು ಚುನಾವಣೆಯಲ್ಲಿ ಸೋತಿದ್ದೇನೆಂದು ಈ ರೀತಿಯ ಆರೋಪ ಮಾಡುತ್ತಿಲ್ಲ. ನನ್ನ ಆರೋಪಕ್ಕೆ ಸ್ಪಷ್ಟ ಉದಾಹರಣೆಗಳಿವೆ ಎಂದರು.
2 ವರ್ಷದಿಂದಲೇ ಕಲಬುರಗಿ ಕ್ಷೇತ್ರದಲ್ಲಿ ಆರ್‌ಎಸ್‌ಎಸ್‌ನವರು ನನ್ನನ್ನು ಸೋಲಿಸಲು ಕೆಲಸ ಮಾಡಿದ್ದಾರೆ. ಮೋದಿ ಕೂಡ ಕಲಬುರಗಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಇದೆಲ್ಲವನ್ನೂ ಗಮನಿಸಿದಾಗ ಅನುಮಾನ ಮೂಡುವುದು ಸಹಜ. ಇವಿಎಂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ಖರ್ಗೆ ಆತಂಕ ವ್ಯಕ್ತಪಡಿಸಿದರು. ಈಗ ಬೇರೆ ರಾಜ್ಯಗಳ ಜತೆಗೆ ಕರ್ನಾಟಕದಲ್ಲಿಯೂ ಉಪ ಚುನಾವಣೆ ನಡೆಯುತ್ತಿದೆ.
ಹೀಗಾಗಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆಗೆ ತರಬೇಕು. ಇವಿಎಂ ವಿರುದ್ಧ ದೊಡ್ಡ ಆಂದೋಲನವಾಗಬೇಕು ಎಂದರು. ಅನರ್ಹ ಶಾಸಕರ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದೆ. ಈ ಸಂದರ್ಭದಲ್ಲಿ ಚುನಾವಣಾ ಆಯೋಗ ಅನಗತ್ಯವಾಗಿ ಮೂಗು ತೂರಿಸುತ್ತಿದೆ. ಇದನ್ನು ನೋಡಿದರೆ, ನೀನು ಚಿವುಟಿದಂತೆ ಮಾಡು, ನಾನು ಅತ್ತಂತೆ ಮಾಡುತ್ತೇನೆ ಎನ್ನುವಂತಿದೆ ಎಂದು ಆರೋಪಿಸಿದರು.