ಹೊಸದಿಲ್ಲಿ : ಕೇಂದ್ರ ಸಚಿವ ಸಂಪುಟ ದೇಶದ ರೈತರಿಗೆ 2017-18ರ ಸಾಲಿಗೆ ಬಡ್ಡಿ ಸಹಾಯಧನ ಸಾಲ ಯೋಜನೆ (ಐಎಸ್‌ಎಸ್)ಗೆ ಅನುಮೋದನೆ ನೀಡಿದೆ. ಇದರಡಿ ರೈತರು ಒಂದು ವರ್ಷದ ಅವಧಿಗೆ ಕೇವಲ ಶೇ.4ರ ಬಡ್ಡಿದರದಲ್ಲಿ ಮೂರು ಲಕ್ಷ ರೂ. ವರೆಗೆ ಸಾಲ ಪಡೆಯಬಹುದಾಗಿದೆ.
ರೈತರ ಬಡ್ಡಿ ಸಹಾಯಧನ ಸಾಲ ಯೋಜನೆಗೆ ಕೇಂದ್ರ ಸರಕಾರ 20,339 ಕೋಟಿ ರೂ.ಗಳನ್ನು ತೆಗೆದಿರಿಸಿದೆ.
ಬಡ್ಡಿ ಸಹಾಯಧನವನ್ನು ಕೇಂದ್ರ ಸರಕಾರವು ಸ್ವಂತ ನಿಧಿಯನ್ನು ಬಳಸುವ ಸಾರ್ವಜನಿಕ ರಂಗದ ಬ್ಯಾಂಕುಗಳಿಗೆ, ಖಾಸಗಿ ವಲಯದ ಬ್ಯಾಂಕುಗಳಿಗೆ, ಸಹಕಾರಿ ಬ್ಯಾಂಕುಗಳಿಗೆ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಗೆ ನೀಡಲಿದೆ. ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಗೆ ಮತ್ತು ಸಹಕಾರಿ ಬ್ಯಾಂಕುಗಳಿಗೆ ಮರು ಹಣಕಾಸು ಒದಗಿಸುವ ನಬಾರ್ಡ್‌ಗೆ ಕೂಡ ಐಎಸ್‌ಎಸ್ ಯೋಜನೆಯಡಿ ಕೇಂದ್ರ ಸರಕಾರ ಹಣ ಒದಗಿಸಲಿದೆ.
ಒಂದು ವರ್ಷದ ವರೆಗೆ ಮುಂದುವರಿಯುವ ಐಎಸ್‌ಎಸ್ ಯೋಜನೆಯನ್ನು ನಬಾರ್ಡ್ ಮತ್ತು ಆರ್‌ಬಿಐ ಅನುಷ್ಠಾನಗೊಳಿಸಲಿವೆ.
ಈ ಯೋಜನೆಯ ಮೂಲ ಉದ್ದೇಶವೇನೆಂದರೆ ರೈತರಿಗೆ ತಳ ಮಟ್ಟದಲ್ಲಿ ಕಿರು ಅವಧಿಯ ಬೆಳೆ ಸಾಲವನ್ನು ಕಡಿಮೆ ಬಡ್ಡಿದರದಲ್ಲಿ ನೀಡುವುದೇ ಆಗಿದೆ. ಇದರಿಂದ ಕೃಷಿ ಉತ್ಪಾದನೆಗೆ ವಿಶೇಷ ಉತ್ತೇಜನ ದೊರಕಲಿದೆ.