ಬೆಂಗಳೂರು: ಬಿಜೆಪಿಯವರು ನಾವು ತಂದ ಮೊಬೈಲ್‌ನಿಂದಲೇ ನಮ್ಮನ್ನು ಸೋಲಿಸಿದರು ಎಂದು ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 75 ನೇ ಜನ್ಮ ದಿನಾಚರಣೆ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಮಾಜಿಕ ಜಾಲ ತಾಣಗಳ ಮೂಲಕ ಮೋದಿ ಸುಳ್ಳುಗಳನ್ನು ಪ್ರಚಾರ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಕಾಂಗ್ರೆಸ್ ಸಾಮಾಜಿಕ ಜಾಲತಾಣ ಪ್ರಬಲವಾಗಿಲ್ಲ. ಹೆಚ್ಚು ಜನರ ಜತೆ ಬೆರೆಯಬೇಕು. ಜನರಿಂದ ಜನರ ಬಾಯಿಗೆ ಕಾಂಗ್ರೆಸ್ ಯೋಜನೆಗಳು ತಲುಪುವಂತಾಗಬೇಕು ಎಂದರು.
ಮೋದಿ ಮೊದಲ ಬಾರಿ ಪ್ರಧಾನಿಯಾಗಿದ್ದಾಗ ಸಂಸತ್ತಿಗೆ ತಲೆಬಾಗಿ ನಮಸ್ಕರಿಸಿದ್ದರು. ಈ ಬಾರಿ ಸಂವಿಧಾನಕ್ಕೆ ನಮಸ್ಕರಿಸಿದ್ದಾರೆ. ಅವರು ಸಂದರ್ಭಕ್ಕೆ ತಕ್ಕಂತೆ ನಾಟಕವಾಡುತ್ತಾರೆ. ಮೋದಿಯವರು ಏನು ಸಾಧನೆ ಮಾಡಿದ್ದಾರೆ ತೋರಿಸಲಿ, ದೇಶದಲ್ಲಿ ಅಲ್ಪ ಸಂಖ್ಯಾತರು, ದಲಿತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಕಾಂಗ್ರೆಸ್ ಅದನ್ನು ಎದುರಿಸಲು ಬಿಜೆಪಿ ವಿರುದ್ಧ ಹೋರಾಟ ನಡೆಸಬೇಕು ಎಂದು ಹೇಳಿದರು.
ಪಕ್ಷ ತೊರೆದರೆ ಎಂತಹ ದೊಡ್ಡ ವ್ಯಕ್ತಿಗೂ ಪೆಟ್ಟು ಬೀಳುತ್ತದೆ ಎನ್ನುವುದಕ್ಕೆ ದೇವರಾಜ್ ಅರಸು ಅವರೇ ಸಾಕ್ಷಿ. ಕಾಂಗ್ರೆಸ್‌ನಲ್ಲಿ ಎರಡು ಬಾರಿ ಮುಖ್ಯಮಂತ್ರಿ ಆದವರು, ಅಧ್ಯಕ್ಷರಾಗಿದ್ದವರು ಪಕ್ಷ ಬಿಟ್ಟು ಹೋಗಿದ್ದಾರೆ. ಕಾಂಗ್ರೆಸ್ ಬಿಟ್ಟ ಮೇಲೆ ಅವರಿಗೆ ಯಾವ ಗೌರವ ಇದೆ ಎನ್ನುವುದು ಈಗ ಸ್ಪಷ್ಟವಾಗುತ್ತಿದೆ ಎಂದು ಹೇಳಿದರು.
ಅರಸು ಅವರು ಜನಪರ ಕೆಲಸಗಳನ್ನು ನೀಡುವ ಮೂಲಕ ಪಕ್ಷ ಕಟ್ಟಿದರು. ಮುಖ್ಯಮಂತ್ರಿಯಾಗಿ ಭೂಸುಧಾರಣೆ ಕಾರ್ಯಕ್ರಮ ಜಾರಿಗೊಳಿಸಿದರು. 20 ಅಂಶಗಳ ಕಾರ್ಯಕ್ರಮಗಳನ್ನು ಅರಸು ಮಂತ್ರಿಮಂಡಲ ಬಹಳ ನಿಷ್ಠೆಯಿಂದ ಜಾರಿಗೊಳಿಸಿದ ಪರಿಣಾಮ ಪಕ್ಷ ಬಲವಾಗಲು ಕಾರಣವಾಯಿತು ಎಂದು ಖರ್ಗೆ ಅಭಿಪ್ರಾಯಪಟ್ಟರು.
ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ: ಅಧಿಕಾರದಲ್ಲಿರುವ ವ್ಯಕ್ತಿ ಪಕ್ಷದ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಪಕ್ಷದಲ್ಲಿ ಒಗ್ಗಟ್ಟು ಮುಖ್ಯ. ಆಂತರಿಕ ಶತೃತ್ವವಿದ್ದರೆ ಪಕ್ಷ ಬೆಳೆಯಲು ಸಾಧ್ಯವಿಲ್ಲ ಎಂದರು. ಅಲ್ಲದೇ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ನಾಯಕರು ಕೆಲಸ ಮಾಡಿದರೂ ಸೋತರೆ ಬೇಸರವಿಲ್ಲ. ಆದರೆ, ನಮ್ಮವರೇ ವಿರೋಧಿಸಿದರೆ, ಗೆಲ್ಲುವುದು ಹೇಗೆ ಎಂದು ಕಾಂಗ್ರೆಸ್‌ನಲ್ಲಿನ ಗುಂಪುಗಾರಿಕೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ 370 ಕಾಯ್ದೆಯನ್ನು ರದ್ದು ಮಾಡಿರುವುದನ್ನು ಕೆಲವು ಕಾಂಗ್ರೆಸ್ ನಾಯಕರು ಸ್ವಾಗತಿಸಿದ್ದಾರೆ. ಅವರಿಗೆ ಇತಿಹಾಸ ಗೊತ್ತಿಲ್ಲ. 370ನೇ ವಿಧಿ ರದ್ದು ಮಾಡಿರುವುದು ದೇಶ ಪ್ರೇಮಕ್ಕಲ್ಲಾ. ಕಾಶ್ಮೀರವನ್ನು ಒಡೆದು ಕೋಮುವಾದದ ಭೀತಿ ಬಿತ್ತುವುದೇ ಅವರ ಅಜಂಡಾವಾಗಿದೆ.
-ಎಂ.ವೀರಪ್ಪ ಮೊಯಿಲಿ, ಮಾಜಿ ಮುಖ್ಯಮಂತ್ರಿ