Advertisement

Modi 3.0: ಲೋಕಸಭೆ ಅಧಿವೇಶನ ಇಂದು ಆರಂಭ: ಏನೇನು ನಡೆಯಲಿದೆ?

01:41 AM Jun 24, 2024 | Team Udayavani |

ಹೊಸದಿಲ್ಲಿ: ನೂತನ ಲೋಕ ಸಭೆಯ ಮೊದಲ ಅಧಿವೇಶನ ಸೋಮ ವಾರ ಆರಂಭವಾಗಲಿದ್ದು, ಮೋದಿ 3.0 ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕದ ಮೊದಲ ಅಧಿವೇಶನ ಇದಾಗಲಿದೆ.

Advertisement

ಹಂಗಾಮಿ ಸ್ಪೀಕರ್‌ ಆಗಿ ಭರ್ತೃಹರಿ ಮಹತಾಬ್‌ ಆಯ್ಕೆಗೆ ಈಗಾಗಲೇ ವಿಪಕ್ಷಗಳಿಂದ ಆಕ್ರೋಶ ವ್ಯಕ್ತವಾಗಿದ್ದು, ಈ ವಿಷಯ ಅಧಿವೇಶನದಲ್ಲಿ ಸದ್ದು ಮಾಡುವ ಸಾಧ್ಯತೆಯಿದೆ. ಜತೆಗೆ ನೀಟ್‌-ನೆಟ್‌ ಅಕ್ರಮವನ್ನು ಮುಂದಿಟ್ಟುಕೊಂಡು ಕೇಂದ್ರ ಸರಕಾರದ ವಿರುದ್ಧ ವಾಗ್ಬಾಣ ಹೂಡಲು ವಿಪಕ್ಷಗಳು ಸಜ್ಜಾಗಿದ್ದು, ಅಧಿವೇಶನದಲ್ಲಿ ಗದ್ದಲವೆಬ್ಬಿಸುವ ಸಾಧ್ಯತೆ ಇದೆ.

ಸೋಮವಾರ ಆರಂಭವಾಗಲಿರುವ ಅಧಿವೇಶನ ಜು. 3ರ ವರೆಗೆ ನಡೆಯಲಿದೆ. ರಾಜ್ಯಸಭೆಯ ಅಧಿವೇಶನ ಜೂ. 27ರಿಂದ ಜು. 3ರ ವರೆಗೆ ನಡೆಯಲಿದೆ. ಮೊದಲ ದಿನ ಹಂಗಾಮಿ ಸ್ಪೀಕರ್‌ ಆಗಿ ನೇಮಕಗೊಂಡಿರುವ ಬಿಜೆಪಿಯ ಭತೃì ಹರಿ ಮಹತಾಬ್‌ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಒಟ್ಟು 543 ಲೋಕಸಭಾ ಸದಸ್ಯರ ಪೈಕಿ ಮೊದಲ ದಿನವಾಗಿರುವ ಸೋಮವಾರ 280 ಮಂದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮೊದಲಿಗೆ ಪ್ರಧಾನಿ ಮೋದಿ ಲೋಕ ಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸ ಲಿದ್ದಾರೆ. ಅನಂತರ ಸಂಪುಟದ ಸದಸ್ಯರು, ಇತರ ಚುನಾಯಿತ ಸದಸ್ಯರು ಪ್ರಮಾಣ ಸ್ವೀಕರಿಸಲಿದ್ದಾರೆ. ಜೂ. 25ರಂದು ಮಿಕ್ಕುಳಿದ 264 ಮಂದಿ ಸದಸ್ಯರು ಪ್ರಮಾಣ ಸ್ವೀಕರಿಸಲಿದ್ದಾರೆ.

ಏನೇನು ನಡೆಯಲಿದೆ?
ಜೂ. 24, 25: ಹಂಗಾಮಿ ಸ್ಪೀಕರ್‌ ಪ್ರಮಾಣ, ಮೊದಲ ಹಂತದಲ್ಲಿ 264 ಮಂದಿಯ ಪ್ರಮಾಣ
ಜೂ. 26: ಉಳಿದ 264 ಮಂದಿಯ ಪ್ರಮಾಣ. ಸ್ಪೀಕರ್‌ ಚುನಾವಣೆ
ಜೂ. 27: ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ
ಜೂ. 28: ರಾಷ್ಟ್ರಪತಿ ಭಾಷಣಕ್ಕೆ ಧನ್ಯವಾದ ಸಮರ್ಪಿಸುವ ಗೊತ್ತುವಳಿ ಮೇಲೆ ಚರ್ಚೆ ಆರಂಭ
ಜು. 2 ಅಥವಾ ಜು. 3: ಚರ್ಚೆಗೆ ಪ್ರಧಾನಿ ಉತ್ತರ

Advertisement

ಭರ್ತೃಹರಿ ಮಹತಾಬ್‌ 1998 ರಿಂದ ಕಟಕ್‌ನಿಂದ ನಿರಂತರವಾಗಿ ಗೆಲ್ಲುತ್ತಿದ್ದಾರೆ. ಹೀಗಾಗಿ ಹಂಗಾಮಿ ಸ್ಪೀಕರ್‌ ಸ್ಥಾನಕ್ಕೆ ಆಯ್ಕೆ ಮಾಡಿದ್ದೇವೆ. ಕಾಂಗ್ರೆಸ್‌ನ ಕೆ. ಸುರೇಶ್‌ 1998 ಮತ್ತು 2004ರ ಚುನಾವಣೆಯಲ್ಲಿ ಸೋತಿದ್ದರು.
-ಕಿರಣ್‌ ರಿಜಿಜು, ಸಂಸದೀಯ ವ್ಯವಹಾರ ಸಚಿವ

ಯಾರಾಗಲಿದ್ದಾರೆ ಹೊಸ ಸ್ಪೀಕರ್‌ ?
ಲೋಕಸಭೆ ಸ್ಪೀಕರ್‌ ಆಯ್ಕೆ ಬುಧವಾರ ನಡೆಯಲಿದೆ. ಎನ್‌ಡಿಎ ವತಿಯಿಂದ ಯಾರು ಸ್ಪೀಕರ್‌ ಆಗಲಿದ್ದಾರೆ ಎಂಬ ವಿಚಾರ ಈಗ ಕುತೂಹಲ ಕೆರಳಿಸಿದೆ. ಬಿಜೆಪಿ ಯಾರನ್ನು ಸ್ಪೀಕರ್‌ ಆಗಿ ಆಯ್ಕೆ ಮಾಡುತ್ತದೆಯೊ ಅವರನ್ನು ನಾವು ಬೆಂಬಲಿಸುತ್ತೇವೆ ಎಂದು ಜೆಡಿಯು ಈಗಾಗಲೇ ಹೇಳಿದೆ. ಟಿಡಿಪಿ ಕೂಡ ಸ್ಪೀಕರ್‌ ಆಯ್ಕೆಯಲ್ಲಿ ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದಿದೆ. ಸದ್ಯ ಆಂಧ್ರಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷೆ ದಗ್ಗುಬಾಟಿ ಪುರಂದೇಶ್ವರಿ ಮತ್ತು ಟಿಡಿಪಿ ಯಿಂದ ಮೊದಲ ಬಾರಿಯ ಸಂಸದ ಜಿ.ಎಂ. ಹರೀಶ್‌ ಬಾಲಯೋಗಿ ಅವರ ಹೆಸರು
ಸ್ಪೀಕರ್‌ ಸ್ಥಾನಕ್ಕೆ ಕೇಳಿಬರುತ್ತಿವೆ. ಸ್ಪೀಕರ್‌ ಸ್ಥಾನಕ್ಕೆ ಟಿಡಿಪಿ ತನ್ನ ಸದಸ್ಯನನ್ನು ಕಣಕ್ಕಿಳಿಸಿದರೆ ಐಎನ್‌ಡಿಐಎ ಒಕ್ಕೂಟದ ನಾಯಕರೆಲ್ಲ ಚರ್ಚಿಸಿ ಬೆಂಬಲ ಸೂಚಿಸುತ್ತೇವೆ ಎಂದು ಶಿವಸೇನೆ ಉದ್ಧವ್‌ ಬಣದ ನಾಯಕ ಸಂಜಯ್‌ ರಾವತ್‌ ಹೇಳಿದ್ದಾರೆ. ಜೂ. 26ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next