ಮಹಾನಗರ : ತುಳುನಾಡಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸಲು ಸಾಂಪ್ರದಾಯಕ ಹಾಗೂ ಆಧುನಿಕ ತಂತ್ರಜ್ಞಾನ ಬಳಕೆಯಾಗಬೇಕು ಎಂದು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ| ಸದಾನಂದ
ಪೆರ್ಲ ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತುಳುಭವನದ ಕಟ್ಟಡದ ಸಿರಿಚಾವಡಿಯಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಎಲ್.ಸಿ.ಡಿ. ಪ್ರಾಜೆಕ್ಟರ್‌ನ್ನು ಅನಾವರಣಗೊಳಿಸಿ ಮಾತನಾಡಿದರು.
ತುಳು ಭಾಷೆಗೆ ಭವ್ಯವಾದ ಇತಿಹಾಸವಿದೆ. ಮೌಲಿಕವಾದ ಸಾಹಿತ್ಯ ಪರಂಪರೆ ಇದೆ. ತುಳುವರಲ್ಲಿ ಹೋರಾಟದ ಕಿಚ್ಚು ಇದೆ. ಪ್ರಾಮಾಣಿಕತೆ, ನಿಷ್ಠೆ ತುಳುವರ ಮೂಲ ಗುಣ ಆಗಿದೆ. ಆದರೂ ತುಳು ಭಾಷೆಗೆ ಸಂವಿಧಾನದ ಮಾನ್ಯತೆ ದೊರಕಿಲ್ಲ. 8ನೇ ಪರಿಚ್ಛೇದಕ್ಕೆ ತುಳುಭಾಷೆ ಸೇರಬೇಕು ಎನ್ನುವುದು ತುಳುವರ ಒಕ್ಕೊರಲ ಬೇಡಿಕೆ ಆಗಿದೆ. ಈ ಗುರಿಯನ್ನು ಸಾಧಿಸಲು ಎಲ್ಲ ರೀತಿಯ ಪ್ರಯತ್ನಗಳು ಇಂದಿನ ದಿನಗಳಲ್ಲಿ ಆಗುತ್ತಿದೆ. ಅಕಾಡೆಮಿ ವತಿಯಿಂದ ತುಳುವನ್ನು ಜಾಗತಿಕ ಮಟ್ಟಕ್ಕೆ ಏರಿಸುವ ಪ್ರಯತ್ನ ನಡೆಯುತ್ತಿರುವುದು ಶ್ಲಾಘನಾರ್ಹ ಎಂದರು.
ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಅಧ್ಯಕ್ಷತೆ ವಹಿಸಿ, ತುಳು ಭಾಷೆಯ ಕೃತಿಗಳನ್ನು ಅನ್ಯ ಭಾಷೆಗೆ ಅನುವಾದಿಸಿ ತುಳುವನ್ನು ಇತರ ಭಾಷೆಯವರಿಗೆ ತಿಳಿಸುವ ಕೆಲಸ ಆಗುತ್ತಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ತುಳು ಭಾಷೆಯನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ. ಜತೆಯಲ್ಲಿ ಅಕಾಡೆಮಿಯಲ್ಲಿ ಸುಸಜ್ಜಿತ ಸಭಾಂಗಣ ವಸ್ತು ಸಂಗ್ರಹಾಲಯದ ನಿರ್ಮಾಣ ಆಗ ಬೇಕಾಗಿದೆ ಎಂದರು.
ಅಕಾಡೆಮಿ ಸದಸ್ಯ ಶಿವಾನಂದ ಕರ್ಕೇರ, ಬೆನೆಟ್ ಅಮ್ಮಣ್ಣ, ಡಾ| ವಾಸುದೇವ ಬೆಳ್ಳೆ, ಪ್ರಭಾಕರ ನೀರುಮಾರ್ಗ ಪ್ರಮುಖರಾದ ಯೋಗೀಶ್ ಶೆಟ್ಟಿ ಜೆಪ್ಪು, ಡಾ| ಕಿಶೋರ್ ಕುಮಾರ್ ಶೇಣಿ, ನಂದಳಿಕೆ ಬಾಲಚಂದ್ರ ರಾವ್, ಮೋಹನ್ ಕೊಪ್ಪಲ ಕದ್ರಿ, ಡಿ.ಎಂ. ಕುಲಾಲ್, ರಂಗ ಕಲಾವಿದ ತಮ್ಮ ಲಕ್ಷ್ಮಣ ಮೊದಲಾದವರು ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯ ತಾರಾನಾಥ ಗಟ್ಟಿ ಕಾಪಿಕಾಡ್ ಸ್ವಾಗತಿಸಿ ನಿರೂಪಿಸಿದರು. ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ವಂದಿಸಿದರು.