ವಿಧಾನಸಭೆ: ವಿಧಾನಸಭೆ, ವಿಧಾನ ಪರಿಷತ್ತಿಗೆ ನೂತನವಾದ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ಬಜೆಟ್ ಮಂಡನೆ ಸಂದರ್ಭದಲ್ಲಿ ಚಿತ್ರದುರ್ಗ ತಿಪ್ಪೇರುದ್ರಪ್ಪ ಎಂಬುವರು ತಾವು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಎಂದು ಹೇಳಿಕೊಂಡು ವಿಧಾನಸಭೆಗೆ ಪ್ರವೇಶ ಮಾಡಿ ಕೆಲ ಹೊತ್ತು ಕಳೆದ ವಿಚಾರವನ್ನು ಪ್ರಸ್ತಾಪಿಸಿದ ಅವರು, ಪ್ರಕರಣಕ್ಕೆ ಸಂಬಂಧಪಟ್ಟಂತೆ ತಿಪ್ಪೇರುದ್ರಪ್ಪ ಅವರನ್ನು ಬಂಧಿಸಲಾಗಿದೆ. ಯಾವ ಕಾರಣಕ್ಕೆ ಅವರು ಈ ರೀತಿ ಮಾಡಿದರು ಎಂಬುದನ್ನು ಪರಿಶೀಲಿಸಲಾಗುತ್ತಿದೆ.
ಭವಿಷ್ಯದಲ್ಲಿ ಇನ್ನು ಮುಂದೆ ಇಂಥ ಘಟನೆ ಮರುಕಳಿಸದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಹೀಗಾಗಿ ಶಾಸಕರು ಹಾಗೂ ಮಾಧ್ಯಮ ಮಿತ್ರರು ಭದ್ರತಾ ಸಿಬ್ಬಂದಿಯ ಜತೆಗೆ ಸಹಕರಿಸಬೇಕು. ಗುರುತಿನ ಪತ್ರ ತೋರಿಸುವಿಕೆಯ ವಿಚಾರದಲ್ಲಿ ಅಹಮ್ಮಿಕೆ ಬೇಡ ಎಂದರು.
ವಿಧಾನಸೌಧಕ್ಕೆ ಹಾಗೂ ಅಧಿವೇಶನ ನಡೆಯುವ ಸಂದರ್ಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ಭದ್ರತಾ ವ್ಯವಸ್ಥೆಯನ್ನು ಸದ್ಯದಲ್ಲೇ ಜಾರಿಗೆ ತರಲಾಗುವುದು ಎಂದು ಹೇಳಿದರು.