Advertisement

ಮೋಚಾ ಭೀತಿ: ಪ.ಬಂಗಾಳದಲ್ಲಿ ಹೈಅಲರ್ಟ್‌! 

10:41 PM May 14, 2023 | Team Udayavani |

ಕೋಲ್ಕತ: ಬಾಂಗ್ಲಾದೇಶ-ಮಾಯೆನ್ಮಾರ್‌ ಕರಾವಳಿಯಲ್ಲಿ ಮೋಚಾ ಚಂಡಮಾರುತದ ತೀವ್ರತೆ ಹೆಚ್ಚಿರುವ ಹಿನ್ನೆಲೆ ಪಶ್ಚಿಮ ಬಂಗಾಳದ ಕರಾವಳಿ ಭಾಗದಲ್ಲಿ ಹೈಅಲರ್ಟ್‌ ಘೋಷಿಸಲಾಗಿದೆ. ಅಲ್ಲದೇ, ಯಾವುದೇ ಸಂಭಾವ್ಯ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವನ್ನು ನಿಯೋಜಿಸಿ ಸಜ್ಜುಗೊಳಿಸಲಾಗಿದೆ.
ಈಗಾಗಲೇ ಬಾಂಗ್ಲಾ-ಮಾಯೆನ್ಮಾರ್‌ ಕರಾವಳಿ ಭಾಗದಲ್ಲಿ ಗಂಟೆಗೆ 195 ಕಿ.ಮೀ. ವೇಗದಲ್ಲಿ ಗಾಳಿ ಮಳೆಯಾಗುತ್ತಿದ್ದು, ಕರಾವಳಿ ಭಾಗದ ಜನರನ್ನು ಸ್ಥಳಾಂತರಿಸಲಾಗಿದೆ. ಅಲ್ಲದೇ, ಕಾಕ್ಸ್‌ ಬಜಾರ್‌ನಿಂದ 250 ಕಿ.ಮೀ. ವ್ಯಾಪ್ತಿಯಲ್ಲಿ ಚಂಡಮಾರುತ ವ್ಯಾಪಿಸಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.

Advertisement

ಈ ಹಿನ್ನೆಲೆ ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆ ಹಾಗೂ ಕರಾವಳಿ ಭಾಗಗಳಾದ ಪುರ್ಬಾ ಮೇದಿನಿಪುರ ಪ್ರದೇಶಗಳಲ್ಲಿ ಎನ್‌ಡಿಆರ್‌ಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದಿಘಾ ಹಾಗೂ ಮಂದಾರಮಣಿ ಕರಾವಳಿ ಪ್ರದೇಶದಲ್ಲಿ ಎನ್‌ಡಿಆರ್‌ಎಫ್ನ 7 ತಂಡಗಳು ಹಾಗೂ ಚಾಲಕರನ್ನು ರಕ್ಷಣೆಗಾಗಿ ನಿಯೋಜಿಸಲಾಗಿದೆ. ಇದರ ಜತಗೆ ರಾಜ್ಯ ವಿಪತ್ತು ನಿರ್ವಹಣಾ ತಂಡದ 100 ಅಧಿಕ ಸಿಬ್ಬಂದಿಯನ್ನು ನಿಯೋಜಿಸಿ ಸ್ಥಳೀಯರು ಹಾಗೂ ಪ್ರವಾಸಿಗರು ಸಮುದ್ರದ ಬಳಿ ತೆರಳದಂತೆ ಎಚ್ಚರಿಕೆ ವಹಿಸಲಾಗಿದೆ.
ಇದಲ್ಲದೇ, ಯಾವುದೇ ಪರಿಸ್ಥಿತಿಯಲ್ಲಿ ಜನರನ್ನು ಸ್ಥಳಾಂತರಿಸುವ ಅಗತ್ಯಬಂದರೆ ಅದಕ್ಕೆ ಪೂರಕವಾಗಿರುವ ವ್ಯವಸ್ಥೆಗಳನ್ನೂ ಮಾಡಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಆಶ್ರಯ ಶಿಬಿರಗಳನ್ನೂ ನಿರ್ಮಿಸಲು ಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಪಶ್ಚಿಮ ಬಂಗಾಳದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದ್ದು, ಯಾವುದೇ ಸಂದರ್ಭದಲ್ಲೂ ಚಂಡಮಾರುತ ಬಾಂಗ್ಲಾ-ಮಾಯೆನ್ಮಾರ್‌ ಗಡಿದಾಟುವ ಸಾಧ್ಯತೆ ಇದೆ ಎಂದು ಐಎಂಡಿ ಎಚ್ಚರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next