Advertisement

ಸಂಚಾರಿ ಪಶು ಚಿಕಿತ್ಸಾಲಯ : ರಾಜ್ಯ ಸರಕಾರದ ಮಾದರಿ ನಡೆ

12:10 AM May 09, 2022 | Team Udayavani |

ದೇಶದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಸರಕಾರ ಸಂಚಾರಿ ಪಶು ಚಿಕಿತ್ಸಾಲಯವನ್ನು ಆರಂಭಿಸುವ ಮೂಲಕ ಮಾದರಿ ಹೆಜ್ಜೆ ಇರಿಸಿದೆ. ಈ ವ್ಯವಸ್ಥೆಯಡಿಯಲ್ಲಿ ಪ್ರತ್ಯೇಕ ಕಾಲ್‌ ಸೆಂಟರ್‌ ತೆರೆಯಲಾಗಿದೆ. ತಮ್ಮ ಜಾನುವಾರುಗಳು ಅನಾರೋಗ್ಯಕ್ಕೀಡಾದಾಗ ರೈತರು ಟ್ರೋಲ್‌ ಫ್ರೀ ಸಂಖ್ಯೆ 1962ಕ್ಕೆ ಕರೆ ಮಾಡಿದಲ್ಲಿ ಈ ಸಂಚಾರಿ ಪಶು ಚಿಕಿತ್ಸಾಲಯ ವಾಹನ ರೈತರ ಮನೆಬಾಗಿಲಿಗೆ ತೆರಳಿ ಜಾನುವಾರುಗಳಿಗೆ ತುರ್ತು ಚಿಕಿತ್ಸೆ ನೀಡಲಿದೆ. ಈ ವಾಹನದಲ್ಲಿ ಪಶು ವೈದ್ಯರು, ಪಶು ವೈದ್ಯ ಸಹಾಯಕರಿರಲಿದ್ದಾರೆ. ಇದರಿಂದ ರೈತರು ಸಾಕುವ ದನ, ಎಮ್ಮೆ, ಕುರಿ, ಮೇಕೆ, ಹಂದಿ ಸಹಿತ ಇತರ ಜಾನುವಾರುಗಳಿಗೆ ಅನಾರೋಗ್ಯ ಕಾಡಿದಾಗ ತ್ವರಿತಗತಿಯಲ್ಲಿ ಚಿಕಿತ್ಸೆ ಕೊಡಿಸಲು ಸಾಧ್ಯವಾಗಲಿದೆ.

Advertisement

ಈ ಯೋಜನೆಯಡಿ ರಾಜ್ಯಾದ್ಯಂತ 275 ಪಶು ಸಂಚಾರಿ ಚಿಕಿತ್ಸಾಲಯಗಳನ್ನು ಒದಗಿಸಲು ನಿರ್ಧರಿಸಲಾಗಿದ್ದು ಮೊದಲ ಹಂತದಲ್ಲಿ 70 ವಾಹನಗಳಿಗೆ ಚಾಲನೆ ನೀಡಲಾಗಿದೆ.

ಜಾನುವಾರುಗಳ ಆರೋಗ್ಯ ರಕ್ಷಣೆಗೆ ಅತ್ಯಗತ್ಯವಾಗಿರುವ ಔಷಧಗಳು, ಸಾಧನ, ಸಲಕರಣೆಗಳಲ್ಲದೆ ಶಸ್ತ್ರಚಿಕಿತ್ಸಾ ವಾಹನಗಳನ್ನು ಒಳಗೊಂಡ “ಪಶು ಸಂಜೀವಿನಿ’ ಯೋಜನೆಯ ಮುಂದುವರಿದ ಭಾಗವಾಗಿ ರಾಜ್ಯ ಸರಕಾರ ಈ ಸಂಚಾರಿ ಪಶು ಚಿಕಿತ್ಸಾಲಯ ಯೋಜನೆಯನ್ನು ಜಾರಿಗೊಳಿಸಿದೆ. ಕೇಂದ್ರ ಪಶು ಸಂಗೋಪನೆ ಸಚಿವ ಪುರುಷೋತ್ತಮ್‌ ರೂಪಾಲ್‌ ಅವರು ರಾಜ್ಯ ಸರಕಾರದ ಈ ಯೋಜನೆಗೆ ಮುಕ್ತ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೊಂದು ಮಾದರಿ ಯೋಜನೆಯಾಗಿದ್ದು ಮುಂದಿನ ದಿನಗಳಲ್ಲಿ ಇದನ್ನು ದೇಶಾದ್ಯಂತ ವಿಸ್ತರಿಸಲು ತೀರ್ಮಾನಿಸಿದ್ದು ಅದರಂತೆ 4,000 ಸಂಚಾರಿ ಪಶು ಚಿಕಿತ್ಸಾಲಯಗಳಿಗೆ ಚಾಲನೆ ನೀಡಲಾಗುವುದು ಎಂದು ಇದೇ ವೇಳೆ ಘೋಷಿಸಿದ್ದಾರೆ. ಅಷ್ಟು ಮಾತ್ರವಲ್ಲದೆ ರಾಜ್ಯದಲ್ಲಿ ಜಾನುವಾರುಗಳ ವೀರ್ಯ ಅಭಿವೃದ್ಧಿ ಬ್ಯಾಂಕ್‌ ಸ್ಥಾಪನೆ ಸಂಬಂಧ ರಾಜ್ಯ ಸರಕಾರ ಕಳುಹಿಸಿರುವ ಪ್ರಸ್ತಾವನೆಗೆ ಶೀಘ್ರದಲ್ಲಿಯೇ ಒಪ್ಪಿಗೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಸರಕಾರ ಯೋಜನೆಯನ್ನು ಆರಂಭಿಸಲು ತೋರಿದಷ್ಟೇ ಆಸಕ್ತಿಯನ್ನು ಅದು ಸಮರ್ಪಕವಾಗಿ ಮುಂದುವರಿಯುವುದಕ್ಕೂ ತೋರುವುದು ಅಗತ್ಯವಾಗಿದೆ. ಇಂದಿಗೂ ಕೆಲವು ಪಶು ಆಸ್ಪತ್ರೆಗಳಲ್ಲಿ ಸರಿಯಾಗಿ ಪಶುವೈದ್ಯರಿಲ್ಲ. ಇನ್ನು ಕೆಲವು ಆಸ್ಪತ್ರೆಗಳು ಹೆಸರಿಗೆ ಮಾತ್ರ ಎಂಬಂತಿವೆ. ಅಲ್ಲಿ ರೈತರಿಗೆ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಇದರ ನಡುವೆ ಸಂಚಾರಿ ಪಶು ಚಿಕಿತ್ಸಾಲಯ ಯೋಜನೆ ಉತ್ತಮವೇ ಆಗಿದ್ದರೂ ಅದರ ಕಾರ್ಯನಿರ್ವಹಣೆ ಮೇಲೆ ನಿಗಾ ಇರಿಸುವ ವ್ಯವಸ್ಥೆಯೂ ಅಗತ್ಯ. ಮುಖ್ಯವಾಗಿ ತೀರಾ ಗ್ರಾಮಾಂತರ ಪ್ರದೇಶಗಳ ಜಾನುವಾರು ಸಾಕಾಣಿಕೆದಾರರಿಗೆ ಇದರ ಸೌಲಭ್ಯ ಸಿಗಬೇಕಿದೆ.

ಇತ್ತೀಚೆಗೆ ರಾಜ್ಯ ಸರಕಾರ ಗೋವುಗಳ ಅದರಲ್ಲೂ ಅನಾಥ ದನಕರುಗಳ ರಕ್ಷಣೆ, ಪಾಲನೆಗೆ ವಿಶೇಷ ಒತ್ತು ನೀಡಿದೆ. ಜಿಲ್ಲೆಗೊಂದು ಗೋಶಾಲೆ ನಿರ್ಮಾಣ, ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪನೆ, ಪ್ರಾಣಿ ಕಲ್ಯಾಣ ಸಹಾಯವಾಣಿ ಕೇಂದ್ರ, ಜಾನುವಾರು ಲಸಿಕಾ ಅಭಿಯಾನ ಸಹಿತ ವಿವಿಧ ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಪಶು ಸಂಗೋಪನೆ ಇಲಾಖೆಯ ಈ ಎಲ್ಲ ಯೋಜನೆಗಳು ವ್ಯವಸ್ಥಿತ ಮತ್ತು ಸಮರ್ಪಕವಾಗಿ ಕಾರ್ಯರೂಪಕ್ಕೆ ಬಂದದ್ದೇ ಆದಲ್ಲಿ ಹೈನುಗಾರಿಕೆ ಕ್ಷೇತ್ರದಲ್ಲಿ ರಾಜ್ಯ ದೇಶದಲ್ಲಿಯೇ ಮುಂಚೂಣಿಗೆ ಬರಲಿದೆ. ಈ ಎಲ್ಲ ಯೋಜನೆಗಳ ಫ‌ಲ ಹೈನುಗಾರರು ಮತ್ತು ಜಾನುವಾರು ಸಾಕಾಣಿಕೆದಾರರಿಗೆ ಲಭಿಸಿದಲ್ಲಿ ಸರಕಾರದ ಉದ್ದೇಶ ಈಡೇರಲಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next