ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಸಹ ಪ್ರಯಾಣಿಕರ ಮೊಬೈಲ್ ಕಳವು ಮಾಡಿದ್ದ ಆಂಧ್ರಪ್ರದೇಶ ಮೂಲದ ಪೇಂಟರ್‌ನನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ರವಿತೇಜಾ (32) ಬಂಧಿತ.
ಆರೋಪಿ ಯಿಂದ 10 ಲಕ್ಷ ರೂ. ಮೌಲ್ಯದ 60 ಮೊಬೈಲ್ ಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮಾಹಿತಿ ನೀಡಿದರು.
ಇತ್ತೀಚೆಗೆ ದೂರುದಾರರು ಮೆಜೆಸ್ಟಿಕ್‌ನಿಂದ ಅತ್ತಿಬೆಲೆ ಕಡೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸು ತ್ತಿದ್ದರು. ಆಗ ಹೊಸರೋಡ್ ಬಸ್ ನಿಲ್ದಾಣ ಸಮೀಪ ಆರೋಪಿ ದೂರುದಾರರ ಗಮನ ಬೇರೆಡೆ ಸೆಳೆದು ಮೊಬೈಲ್ ಕಳವು ಮಾಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದರು.
ಮಫ್ತಿಯಲ್ಲಿ ಕಾರ್ಯಾಚರಣೆ: ಠಾಣೆ ವ್ಯಾಪ್ತಿಯಲ್ಲಿ ಸಂಚರಿಸುವ ಬಿಎಂಟಿಸಿ ಬಸ್‌ಗಳಲ್ಲಿ ಮೊಬೈಲ್ ಕಳವು ಪ್ರಕರಣಗಳು ಹೆಚ್ಚಾಗಿತ್ತು. ಅದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಮಫ್ತಿಯಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುತ್ತಿದ್ದರು. ಈ ಮಧ್ಯೆ ಆ.26ರಂದು ಕೋನಪ್ಪನ ಅಗ್ರಹಾರ ಬಸ್ ನಿಲ್ದಾಣದಲ್ಲಿದ್ದ ಬಸ್‌ನಲ್ಲಿ ಆರೋಪಿಯನ್ನು ಅನುಮಾನದ ಮೇರೆಗೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಬಟ್ಟೆ ತುಂಬುವ ಬ್ಯಾಗ್‌ನಲ್ಲಿ 60 ಮೊಬೈಲ್‌ಗಳು ಪತ್ತೆಯಾಗಿವೆ. ಬಳಿಕ ಠಾಣೆಗೆ ಕರೆ ದೊಯ್ದು ವಿಚಾರಣೆ ನಡೆಸಿದಾಗ ಆಂಧ್ರ ಪ್ರದೇಶದಿಂದ ಬೆಂಗಳೂರಿಗೆ ಬಸ್‌ನಲ್ಲಿ ಬಂದು, ಮೊಬೈಲ್ ಕಳವು ಮಾಡಿ ಆಂಧ್ರಪ್ರದೇಶಕ್ಕೆ ಪರಾರಿ ಆಗುತ್ತಿದ್ದ ವಿಚಾರ ಬಾಯಿಬಿಟ್ಟಿದ್ದಾನೆ. ಆಂಧ್ರಪ್ರದೇಶದಲ್ಲಿ ಪೇಂಟರ್ ಕೆಲಸ ಮಾಡುವ ಆರೋಪಿ, ಆಗಾಗ್ಗೆ ಬಸ್‌ನಲ್ಲಿ ಬೆಂಗಳೂರಿಗೆ ಬಂದು ಕೃತ್ಯವೆಸಗುತ್ತಿದ್ದ ಎಂದರು.
ಐಫೋನ್ ಬಿಡಿ ಭಾಗ ಪ್ರತ್ಯೇಕಗೊಳಿಸಿ ಮಾರಾಟ : ಆರೋಪಿಯ ವಿಚಾರಣೆಯಲ್ಲಿ ಸಾಮಾನ್ಯ ಆ್ಯಂಡ್ರಾಯ್ಡ ಮೊಬೈಲ್‌ಗಳನ್ನು ಫ್ಲಾಷ್ ಮಾಡಿಸಿ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದ. ಆದರೆ, ಐಫೋನ್‌ಗಳ ಆನ್ ಮಾಡಿದಾಗ ಸಿಕ್ಕಿ ಬೀಳುವ ಸಾಧ್ಯತೆಯಿಂದಾಗಿ, ಅವುಗಳ ಬಿಡಿ ಭಾಗಗಳನ್ನು ಪ್ರತ್ಯೇಕಗೊಳಿಸಿ ಮಾರಾಟ ಮಾಡುತ್ತಿರುವುದಾಗಿ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸ್ ಆಯುಕ್ತರು ಹೇಳಿದರು.