ಬೆಂಗಳೂರು: ಡೆಲಿವರಿ ಬಾಯ್‌ಗಳನ್ನೇ ಗುರಿಯಾಗಿಸಿಕೊಂಡು ಮೊಬೈಲ್ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಒಡಿಶಾ ಮೂಲದ ದೀಪಕ್ ಮಲ್ಲಿಕ್(30), ಅಸ್ಸಾಂ ರಾಕೇಶ್ ಪಾಸ್ವನ್(27) ಹಾಗೂ ತನುಕುಮಾರ್ (26) ಬಂಧಿತರು. ಆರೋಪಿಗಳಿಂದ ಲಕ್ಷಾಂತರ ರೂ. ಮೌಲ್ಯದ 25 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ನಗರದ ವಿವಿಧೆಡೆ ಸೆಕ್ಯೂರಿಟಿ ಗಾರ್ಡ್‌ಗಳಾಗಿ ಕೆಲಸ ಮಾಡುತ್ತಿರುವ ಆರೋಪಿಗಳು, ಹಣದಾಸೆಗಾಗಿ ಕೃತ್ಯದಲ್ಲಿ ತೊಡಗಿದ್ದಾರೆ. ಮನೆ ಮತ್ತು ಅಪಾರ್ಟ್‌ಮೆಂಟ್‌ಗಳ ಬಳಿ ಫುಡ್ ಡೆಲವರಿ ಅಥವಾ ಬೇರೆ ವಸ್ತುಗಳ ಡೆಲಿವರಿ ಮಾಡುವ ಯುವಕರನ್ನೇ ಗುರಿಯಾಗಿಸಿಕೊಂಡು ಅಡ್ಡಗಟ್ಟಿ, ಹಲ್ಲೆ ನಡೆಸಿ ಸುಲಿಗೆ ಮಾಡುತ್ತಿದ್ದರು. ಎಲೆಕ್ಟ್ರಿಕ್ ವಾಹನಗಳ ಬಳಸುವ ಡೆಲಿವರಿ ಬಾಯ್‌ಗಳನ್ನು ಟಾರ್ಗೆಟ್ ಮಾಡುತ್ತಿದ್ದು, ವಿಳಾಸ ಪತ್ತೆಗಾಗಿ ಬೈಕ್‌ಗಳಿಗೆ ಕ್ಲಿಪ್‌ಗ್ಳನ್ನು ಹಾಕಿಕೊಂಡು ಮೊಬೈಲ್ ಸಿಕ್ಕಿಸುತ್ತಾರೆ. ಅಂತಹ ಮೊಬೈಲ್‌ಗಳನ್ನು ಕಸಿದು ಪರಾರಿಯಾಗುತ್ತಿದ್ದರು.
ಒಂದು ವೇಳೆ ಪ್ರತಿರೋಧ ವ್ಯಕ್ತಪಡಿಸಿದರೆ, ವಾಹನದಿಂದ ಕೆಳಕ್ಕೆ ಬೀಳಿಸಿ ಕಸಿದು ಪರಾರಿಯಾಗುತ್ತಿದ್ದರು. ಜುಲೈನಲ್ಲಿ ಡೆಲಿವರಿ ಬಾಯ್ ಒಬ್ಬ ತನ್ನ ಮೊಬೈಲ್ ರಕ್ಷಿಸಿಕೊಳ್ಳಲು ಮುಂದಾಗಿದ್ದ ವೇಳೆ ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದ. ಆತ ದೂರು ನೀಡಿದ ಮೇರೆಗೆ ವಿಶೇಷ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳ ವಿಚಾರಣೆ ವೇಳೆ 32 ಮೊಬೈಲ್ ಸುಲಿಗೆ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.