ರಾಣಿಬೆನ್ನೂರ: ತಾಲೂಕಿನ ಕೂನಬೇವು ಗ್ರಾಮದ ಜಮೀನುಗಳಿಗೆ ಭೇಟಿ ನೀಡಿದ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡ, ಕಳೆದ ವಾರ ಗುಡುಗು, ಸಿಡಿಲು ಸಹಿತ ಮಳೆಯಾದ ಕುರಿತು ರೈತರೊಂದಿಗೆ ಚರ್ಚೆ ನಡೆಸಿತು.
ಈ ವೇಳೆ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ| ಅಶೋಕ ಪಿ. ಮಾತನಾಡಿ, ಮಳೆಗಾಲದಲ್ಲಿ ಮಿಂಚು ಬಗ್ಗೆ ಮುಂಗಡವಾಗಿ ಮಾಹಿತಿಯನ್ನು ತಿಳಿಯಲು ದೇಶದ 150 ಜಿಲ್ಲೆಗಳಲ್ಲಿ ಹಾವೇರಿ ಜಿಲ್ಲೆಯಲ್ಲಿ ಕೂಡ ಜಿಲ್ಲಾ ಕೃಷಿ ಹವಾಮಾನ ಘಟಕ ಆರಂಭಿಸಲಾಗಿದೆ. ಸ್ಥಳೀಯ ಹವಾಮಾನ ಮುನ್ಸೂಚನೆ ಮತ್ತು ಕೃಷಿ ಆಧಾರಿತ ಸಲಹೆಗಳನ್ನು ಪ್ರಾದೇಶಿಕ ಭಾಷೆಯಲ್ಲಿ ರೈತರಿಗೆ ಮುಟ್ಟಿಸಲು ಸಂದೇಶಗಳ ಮೂಲಕ ರೈತರಿಗೆ ಮನೆ ಬಾಗಿಲಿಗೆ ಮುಟ್ಟಿಸುತ್ತಿದೆ ಎಂದರು.
ದೇಶದಲ್ಲಿ ಹವಾಮಾನ ವೈಪರೀತ್ಯಗಳಾದ ಪ್ರವಾಹ, ಅನಾವೃಷ್ಟಿ, ಮಿಂಚು, ಭಾರಿ ಮಳೆ ಮತ್ತು ಶಾಖದ ಅಲೆಗಳು ಮೇಲಿಂದ ಮೇಲೆ ಸಂಭವಿಸುತ್ತವೆ. ಅದರಲ್ಲಿ “ಮಿಂಚು’ ಇದು ಒಂದು ವಿದ್ಯಮಾನವಾಗಿದೆ. ಪ್ರತಿ ಸೆಂಕೆಂಡ್‌ಗೆ ಸುಮಾರು 50ರಿಂದ 100 ಮಿಂಚಿನ ಹೊಡೆತಗಳು ಭೂಮಿಯ ಮೇಲೆ ಸಂಭವಿಸುತ್ತವೆ ಎಂದರು. ಈ ಘಟನೆಗಳ ನಿಖರವಾದ ಮುನ್ಸೂಚನೆಯು ಒಂದು ಸವಾಲಾಗಿದೆ. ಭಾರತೀಯ ಉಷ್ಣ ವಲಯದ ಹವಾಮಾನ ಸಂಸ್ಥೆ ಮತ್ತು ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ದಾಮಿನಿ ಎಂಬ ಮೊಬೈಲ್ ಆಧಾರಿತ ಅಪ್ಲಿಕೇಶನ್ ಬಿಡುಗಡೆಗೊಳಿಸಿದೆ. ಒಬ್ಬ ವ್ಯಕ್ತಿಯು ಘಟನೆಯ 20 ಕಿ.ಮೀ ವ್ಯಾಪ್ತಿಯಲ್ಲಿರುವಾಗ, 30 ರಿಂದ 45 ನಿಮಿಷಗಳ ಮೊದಲು ಎಚ್ಚರಿಕೆ ಸಂದೇಶ ಕೊಡುತ್ತದೆ. ಇದು ಜನರು ಸುರಕ್ಷಿತ ಸ್ಥಳಗಳಿಗೆ ಹೋಗಲು ಸಹಾಯ ಮಾಡುತ್ತದೆ ಎಂದರು.
ಈ ಆ್ಯಪ್‌ನ್ನು ಪ್ರತಿಯೊಬ್ಬ ರೈತರು ತಮ್ಮ ಸ್ಮಾರ್ಟ್ ಫೋನ್‌ನ ಪ್ಲೇಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ಬಳಕೆದಾರರು ಹೆಸರು, ದೂರವಾಣಿ ಸಂಖ್ಯೆ, ವಿಳಾಸ, ಪೀನ್‌ಕೋಡ್ ಮತ್ತು ಉದ್ಯೋಗ ನೋಂದಾಯಿಸಬೇಕು. ನಂತರ ನೋಂದಾಯಿತ ಬಳಕೆದಾರರು ಮಿಂಚಿನ ಮನ್ಸೂಚನೆ ಮಾಹಿತಿ ತಿಳಿದುಕೊಳ್ಳಬಹುದು ಎಂದು ಡಾ| ಅಶೋಕ ತಿಳಿಸಿದರು. ಗ್ರಾಮದ ರೈತರಾದ ಶಂಕರಗೌಡ ಪಾಟೀಲ, ಚಂದ್ರಶೇಖರ ಪಾಟೀಲ, ಮಂಜು ಅಣಜಿ, ಮಾಲತೇಶ ಪಾಟೀಲ, ನಿಂಗಪ್ಪ ಸುಂಕಾಪುರ, ಚಂದ್ರಶೇಖರ ನೆಗಳೂರು, ತಮ್ಮಣ್ಣ ಲಮಾಣಿ ಇದ್ದರು.