ಮಂಗಳೂರು: ಕುಟುಂಬವೊಂದು ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ ಊಹಾಪೋಹಗಳಿಗೆ ಪೊಲೀಸರು ತೆರೆ ಎಳೆದಿದ್ದಾರೆ. ಇದು ಆಹಾರ ವಿಷಪೂರಿತ ಪ್ರಕರಣವಾಗಿದ್ದು, ಇದು ಆತ್ಮಹತ್ಯೆಯ ಪ್ರಯತ್ನ ಎಂದು ತಪ್ಪಾಗಿ ವರದಿಯಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಜೆಪ್ಪು ಬಪ್ಪಲ್ ನ ಅರವಿಂದ ರಾವ್ (52), ಪ್ರಭಾವತಿ (45), ಸೌರಭ್ (20) ಮತ್ತು ಪ್ರತೀಕ್ (18) ಅವರು ಮನೆಯಲ್ಲಿ ತೀವ್ರ ವಾಂತಿಭೇದಿ ಕಾಣಿಸಿಕೊಂಡು ತೀವ್ರ ಅಸ್ವಸ್ಥರಾಗಿದ್ದರು. ಕುಟುಂಬ ಸದಸ್ಯರನ್ನು ರಕ್ಷಿಸಲು ಸಂಬಂಧಿಕರು ಮನೆಯ ಬಾಗಿಲು ಒಡೆದಿದ್ದರು. ಅವರ ಆರೋಗ್ಯ ತೀರಾ ಗಂಭೀರವಾಗಿದ್ದು, ಅವರನ್ನು ಐಸಿಯುಗೆ ದಾಖಲಿಸಲಾಗಿತ್ತು. ಉದ್ದೇಶಪೂರ್ವಕವಾಗಿ ವಿಷ ಸೇವಿಸಿದ ಪ್ರಕರಣ ಎಂದು ಭಾವಿಸಲಾಗಿತ್ತು.
ಕುಟುಂಬವು ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದೆ ಎಂಬ ವದಂತಿಗಳು ಶೀಘ್ರದಲ್ಲೇ ಹರಡಲು ಪ್ರಾರಂಭಿಸಿ ಕೆಲ ಮಾಧ್ಯಮಗಳಲ್ಲೂ ವರದಿಯಾಗಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ‘ಕುಟುಂಬಕ್ಕೆ ವಿಷಾಹಾರ ಸೇವನೆಯಿಂದ ತೀವ್ರ ತೊಂದರೆಯಾಗಿತ್ತು. ಕುಟುಂಬದ ನಾಲ್ವರು ಐಸ್ ಕ್ರೀಂ ಮತ್ತು ಸೊಪ್ಪಿನಿಂದ ತಯಾರಿಸಿದ ಸಿಹಿತಿಂಡಿ ಸೇವಿಸಿದ್ದು ಅದು ಫುಡ್ ಪಾಯಿಸನ್ ಆಗಿರಬಹುದು’ ಎಂದು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ನಾಲ್ವರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿರುವುದಾಗಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.