Advertisement

ಯಲಬುರ್ಗಾ ಕ್ಷೇತ್ರದ ಜನರ ಋಣ ತೀರಿಸುವೆ: ಹಾಲಪ್ಪ 

05:32 PM Jun 17, 2018 | Team Udayavani |

ಯಲಬುರ್ಗಾ: ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ತಮ್ಮ ಸೇವೆ ಮಾಡುವ ಅವಕಾಶ ಕಲ್ಪಿಸಿರುವ ಕ್ಷೇತ್ರದ ಜನತೆಗೆ ಕೃತಜ್ಞನಾಗಿದ್ದು, ಮುಂದಿನ ದಿನಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಜನತೆಯ ಋಣ ತೀರಿಸುವೆ ಎಂದು ಶಾಸಕ ಹಾಲಪ್ಪ ಆಚಾರ್‌ ಹೇಳಿದರು. ಪಟ್ಟಣದಲಿ ಶಾಸಕರ ಕಚೇರಿ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಕ್ಷೇತ್ರದ ಜನತೆ ತಮ್ಮ ಸಮಸ್ಯೆಗಳನ್ನು ತೆಗೆದುಕೊಂಡು ಅಲೆದಾಡಬೇಡಿ. ಅದಕ್ಕೆ ಸಮಸ್ಯೆಗಳ ಪರಿಹಾರಕ್ಕೆ ಜನಸಂಪರ್ಕ ಕಾರ್ಯಕ್ರಮ ಹಾಕಿಕೊಂಡು ಅಧಿಕಾರಿಗಳ ಸಮೇತ ಗ್ರಾಮಕ್ಕೆ ಭೇಟಿ ಕೊಟ್ಟು ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವೆ ಎಂದರು. ತಾಲೂಕಿನಾದ್ಯಂತ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಶಾಲಾ-ಕಾಲೇಜು ನಿರ್ಮಾಣ, ವಿವಿಧ ಗ್ರಾಮಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಈಗಾಗಲೇ ಸಮಸ್ಯಾತ್ಮಕ ಗ್ರಾಮಗಳ ಪಟ್ಟಿಯೊಂದನ್ನು ತಯಾರಿಸಿದ್ದು, ಹಂತ ಹಂತವಾಗಿ ಸೌಲಭ್ಯ ಒದಗಿಸಲು ಬದ್ಧನಾಗಿದ್ದೇನೆ ಎಂದು ಹೇಳಿದರು. 

ತಾಲೂಕಿನ ಪ್ರತಿ ಗ್ರಾಮಗಳ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ತಂದು ಮೂಲಭೂತ ಸೌಕರ್ಯ ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಪಾರ ಜನಬೆಂಬಲದೊಂದಿಗೆ ಚುನಾವಣೆಯಲ್ಲಿ ವಿಜೇತನಾಗಿದ್ದು ಜನತೆಯ ವಿಶ್ವಾಸಕ್ಕೆ ಚ್ಯುತಿ ಬರದಂತೆ ಕರ್ತವ್ಯ ನಿರ್ವಹಿಸುತ್ತೇನೆ ಎಂದು ತಿಳಿಸಿದರು.

ಪ್ರಸ್ತುತವಾಗಿ ತಾಲೂಕಿನಾದ್ಯಂತ ಮುಂಗಾರು ಮಳೆ ಉತ್ತಮವಾಗಿ ಸುರಿದಿದ್ದು, ಕೃಷಿ ಕಾರ್ಯ ಭರದಿಂದ ಸಾಗಿದೆ. ಮುಂದೆಯೂ ವರುಣ ಇದೇ ರೀತಿ ಭೂಮಿಗೆ ಸುರಿದು ರೈತರ ಸಂಕಷ್ಟಗಳು ದೂರವಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಯಲಬುರ್ಗಾದ ಕೆಂಪು ಕೆರೆಗೆ 7 ಕೋಟಿ ರೂ. ಅನುದಾನ ಮಂಜೂರಾಗಿದೆ. ಆದರೆ, ಸಕಾಲದಲ್ಲಿ ಅಭಿವೃದ್ಧಿಯಾಗದೇ ಇರುವುದಕ್ಕೆ  ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ಹಿಂದಿನ ಶಾಸಕ ಬಸವರಾಜ ರಾಯರಡ್ಡಿಯೇ ನೇರ ಕಾರಣವಾಗಿದ್ದಾರೆ. ಕೆಂಪು ಕೆರೆಗೆ ಬಳಕೆ ಮಾಡಿದ ಅನುದಾನದ ಇತಿಹಾಸವನ್ನು ಕೆದಕಿದರೆ ವಿಷಾದವಾಗುತ್ತದೆ ಎಂದರು.

Advertisement

ರೈತರಿಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಫಸಲಾ ಬಿಮಾ ಯೋಜನೆ ವಿಮಾ ಹಣ ಯಾವ ಕಾರಣಕ್ಕೆ ವಿಳಂಬವಾಗಿದೆ ಎನ್ನುವ ಮಾಹಿತಿಯನ್ನು ಸಂಬಂಧಿಸಿದ ಅಧಿಕಾರಿಗಳಲ್ಲಿ ಮಾಹಿತಿಯನ್ನು ಕೇಳಲಾಗಿದೆ. ಮಾಹಿತಿ ಬಂದ ನಂತರದಲ್ಲಿ ಮುಂದೆ ಅನುಸರಿಸಬಹುದಾದ ಕ್ರಮಗಳ ಬಗ್ಗೆ ಚಿಂತನೆ ನಡೆಸಿದ್ದೇನೆ. ಶಾಸಕರ ಭವನವನ್ನು ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಾರಂಭ ಮಾಡಲಾಗಿದೆ. ಸಾರ್ವಜನಿಕರು ನೇರವಾಗಿ ಬಂದು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಸಿಬ್ಬಂದಿಗಳೊಂದಿಗೆ ಚರ್ಚಿಸಿ ಪರಿಹಾರ ಮಾಡಿಕೊಳ್ಳಬಹುದು. ನಾನಿರುವುದೇ ಜನಸೇವೆಗಾಗಿ ನಾನು ಮಾಡುವ ಕೆಲಸದಲ್ಲಿ ಸ್ಪಷ್ಟತೆ, ಪ್ರಾಮಾಣಿಕತೆ ನಿಷ್ಟುರತೆ ಇದ್ದೇ ಇರುತ್ತದೆ. ಪ್ರಾಮಾಣಿಕ ಅಧಿಕಾರಿಗಳಿಗೆ ನನ್ನ ಸಹಕಾರ ಇದ್ದೇ ಇರುತ್ತದೆ ಈ ಬಗ್ಗೆ ಯಾರು ಸಂಶಯ ಪಟ್ಟುಕೊಳ್ಳುವ ಅಗತ್ಯ ಇಲ್ಲ ಎಂದು ಹೇಳಿದರು.

ತಾಲೂಕು ಬಿಜೆಪಿ ಅಧ್ಯಕ್ಷ ರತನ್‌ ದೇಸಾಯಿ, ಬಸವಲಿಂಗಪ್ಪ ಭೂತೆ, ವಕ್ತಾರ ವೀರಣ್ಣ ಹುಬ್ಬಳ್ಳಿ, ಮುಖಂಡರಾದ ನವೀನಕುಮಾರ ಗುಳಗಣ್ಣನವರ ,ಸಿ.ಎಚ್‌ ಪೊಲೀಸ್‌ ಪಾಟೀಲ, ಈರಪ್ಪ ಕುಡಗುಂಟಿ, ಪಪಂ ಸದಸ್ಯ ಸಿದ್ದರಾಮೇಶ ಬೇಲೆರಿ, ಯಲಪ್ಪ ಹಡಗಲಿ, ಸುರೇಶಗೌಡ ಶಿವನಗೌಡರ, ಅಡಿವೆಪ್ಪ ಭಾವಿಮನಿ, ಶಿವಕುಮಾರ ನಾಗಲಾಪುರಮಠ, ಶರಣಪ್ಪ ಬಣ್ಣದಭಾವಿ, ಶಿವನಗೌಡ ಬನ್ನಪ್ಪಗೌಡರ, ರಸೂಲಸಾಬ ದಮ್ಮೂರ, ಶರಣಪ್ಪ ಹೊಸಕೇರಿ, ವಿಜಯ ತಾಳಕೇರಿ, ನಾಗನಗೌಡ ಮಾಟಲದಿನ್ನಿ, ರವಿ ಗುರಡ್ಡಿ, ಮಂಜುನಾಥ ಗಟ್ಟೆಪ್ಪನವರ ಇತರರು ಉಪಸ್ಥಿತರಿದ್ದರು.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಹಾಗೂ ಕುಷ್ಟಗಿ ತಾಲೂಕುಗಳಿಗೆ ನೀರಾವರಿ ಸೌಲಭ್ಯ ಒದಗಿಸಿಕೊಡುವ ವಿಚಾರದಲ್ಲಿ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ನಾಪುರ ಅಸಹಾಯಕತೆ ವ್ಯಕ್ತಪಡಿಸಿದ್ದು ಸರಿಯಲ್ಲ. ಯೋಜನೆಯನ್ನು ಜಾರಿ ಮಾಡುವ ವಿಷಯದಲ್ಲಿ ಇರುವ ವಾಸ್ತವಿಕ ಸತ್ಯ ಸಂಗತಿಗಳನ್ನು ತಿಳಿದುಕೊಂಡು ಮಾತನಾಡದೇ ಯೋಜನೆ ಜಾರಿ ಅಸಾಧ್ಯ ಎಂದು ಹೇಳುವುದು ನೋವಿನ ಸಂಗತಿಯಾಗಿದೆ ಎಂದು ಶಾಸಕ ಹಾಲಪ್ಪ ಆಚಾರ್‌ ವಿಷಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next