Advertisement

ಶಾಸಕರ ಅನರ್ಹತೆ ಆಪ್‌ಗೆ ಮರ್ಮಾಘಾತ

09:49 AM Jan 20, 2018 | Team Udayavani |

ಲಾಭದಾಯಕ ಹುದ್ದೆ ಹೊಂದಿದ ಆರೋಪ ಹೊತ್ತುಕೊಂಡಿರುವ ದಿಲ್ಲಿಯ 20 ಶಾಸಕರನ್ನು ಅನರ್ಹಗೊಳಿಸಲು ಚುನಾವಣಾ ಆಯೋಗ ರಾಷ್ಟ್ರಪತಿಗೆ ಶಿಫಾರಸು ಮಾಡಿರುವುದು ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಾರ್ಟಿ ಪಾಲಿಗೆ ಮರ್ಮಾಘಾತ ನೀಡುವ ಬೆಳವಣಿಗೆ. ರಾಷ್ಟ್ರಪತಿ ಅಂಕಿತ ಬಿದ್ದ ಕ್ಷಣವೇ ಎಲ್ಲ 20 ಮಂದಿ ಶಾಸಕ ಸ್ಥಾನ ಕಳೆದುಕೊಳ್ಳಲಿದ್ದಾರೆ. ಇದರಿಂದಾಗಿ ಆಪ್‌ ಸರಕಾರದ ಸ್ಥಿರತೆಗೇನೂ ಅಪಾಯವಿಲ್ಲ. 70 ಸದಸ್ಯ ಬಲದ ದಿಲ್ಲಿ ವಿಧಾನಸಭೆಯಲ್ಲಿ ಆಪ್‌ 66 ಶಾಸಕರನ್ನು ಹೊಂದಿದೆ. ಬಹುಮತಕ್ಕೆ ಅಗತ್ಯವಿರುವುದು 36 ಶಾಸಕರು. 20 ಮಂದಿ ಅನರ್ಹ ಗೊಂಡರೂ ಆಪ್‌ 46 ಶಾಸಕ ಬಲವನ್ನು ಹೊಂದಿರುತ್ತದೆ ಹಾಗೂ ಸರಕಾರ ಮುಂದುವರಿಯಬಹುದು. ಆದರೆ ಈ ಬೆಳವಣಿಗೆಯಿಂದ ಆಪ್‌ನ ವರ್ಚಸ್ಸಿಗೆ ಆಗಲಿರುವ ಹಾನಿ ಮಾತ್ರ ಅಪಾರ. ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ ಅಭೂತಪೂರ್ವ ಬಹುಮತದಿಂದ ಅಧಿಕಾರಕ್ಕೇರಿದ ಪಕ್ಷವೊಂದು ಮೂರೇ ವರ್ಷದಲ್ಲಿ ಅದೇ ಭ್ರಷ್ಟಾಚಾರದಿಂದ ಕಳಂಕಿತಗೊಳ್ಳುವುದು ತೀರಾ ಕಳವಳಕಾರಿ ಸಂಗತಿ. ಆಪ್‌ ನಾಯಕರ ನೈತಿಕ ಸ್ಥೈರ್ಯವೇ ಉಡುಗಿ ಹೋಗುವ ಬೆಳವಣಿಗೆಯಿದು.  

Advertisement

ಒಂದು ವೇಳೆ ಶಾಸಕರು ಅನರ್ಹಗೊಂಡರೆ ಎಲ್ಲ 20 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಸಬೇಕಾಗುತ್ತದೆ. ಇದು ಆಪ್‌ ಪಾಲಿಗೆ ಅಗ್ನಿ ಪರೀಕ್ಷೆಯಾಗುವುದರಲ್ಲಿ ಸಂಶಯವಿಲ್ಲ. ಕಳೆದ ವರ್ಷ ನಡೆದ ದಿಲ್ಲಿ ನಗರಪಾಲಿಕೆ ಚುನಾವಣೆಯಲ್ಲಿ ಆಪ್‌ ಹೀನಾಯವಾಗಿ ಸೋತಿದೆ. ಕೆಲ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲೂ ಆಪ್‌ ಸೋಲುಂಡಿದೆ. ದಿಲ್ಲಿಯನ್ನು ಗೆದ್ದ ಬಳಿಕ ಆಪ್‌ಗೆ ಗಮನಾರ್ಹವಾದ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಇದಕ್ಕೂ ಮಿಗಿಲಾಗಿ ಆಪ್‌ ಕುರಿತು ಜನರಿಗಿದ್ದ ಭ್ರಮೆಗಳೆಲ್ಲ ಕಳಚಿವೆ. ಇದರ ಜತೆಗೆ ಒಳ ಜಗಳವೂ ಆಪ್‌ನ್ನು ಹೈರಾಣಾಗಿಸಿದೆ. ಎಲ್ಲ ಕಡೆಗಳಿಂದಲೂ ಸಮಸ್ಯೆಯ ಸರಮಾಲೆಯನ್ನೇ ಎದುರಿಸುತ್ತಿರುವ ಆಪ್‌ಗೆ ಚುನಾವಣಾ ಆಯೋಗದ ನಡೆ ಭಾರೀ ಹೊಡೆತ ನೀಡಿದೆ.  

ಶಾಸಕರಾಗಿರುವಾಗಲೇ ಸಂಸದೀಯ ಕಾರ್ಯದರ್ಶಿಗಳಾಗಿ ವೇತನ, ಕಾರು, ಕಚೇರಿ ಇನ್ನಿತರ ಸೌಲಭ್ಯಗಳನ್ನು ಪಡೆದುಕೊಂಡ ಆರೋಪ 21 ಶಾಸಕರ ಮೇಲಿತ್ತು. ಈ ಪೈಕಿ ಜರ್ನೈಲ್‌ ಸಿಂಗ್‌ ಪಂಜಾಬ್‌ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ರಾಜೀನಾಮೆ ನೀಡಿರುವುದರಿಂದ 20 ಮಂದಿಯ ತಲೆ ಮೇಲೆ ಅನರ್ಹತೆಯ ತೂಗುಗತ್ತಿ ನೇತಾಡುತ್ತಿದೆ. 2016ರಲ್ಲಿ ಕಾಂಗ್ರೆಸ್‌ ಈ ಶಾಸಕರ ವಿರುದ್ಧ ದೂರು ನೀಡಿತ್ತು. ಆಗ ಕೇಜ್ರಿವಾಲ್‌ ಸರಕಾರ ಶಾಸಕರನ್ನು ರಕ್ಷಿಸುವ ಸಲುವಾಗಿ ಸಂಸದೀಯ ಕಾರ್ಯದರ್ಶಿ ಹುದ್ದೆಯನ್ನು ಲಾಭದಾಯಕ ಹುದ್ದೆ ಕಾನೂನಿನ ವ್ಯಾಪ್ತಿಯಿಂದ ಹೊರಗಿಡುವ ಮಸೂದೆ ರಚಿಸಿತು. ಆದರೆ ಹಿಂದಿನ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಈ ಮಸೂದೆಯನ್ನು ತಿರಸ್ಕರಿಸಿ ಪ್ರಕರಣವನ್ನು ಚುನಾವಣಾ ಆಯೋಗಕ್ಕೆ ಹಿಂದಿರುಗಿಸಿದರು. ಇದೇ ವೇಳೆ ದಿಲ್ಲಿ ಹೈಕೋರ್ಟ್‌ ಸಂಸದೀಯ ಕಾರ್ಯದರ್ಶಿ ಹುದ್ದೆಯನ್ನೇ ರದ್ದುಪಡಿಸಿ ತೀರ್ಪು ನೀಡಿತು. ಈ ತೀರ್ಪಿನ ಆಧಾರದಲ್ಲಿ ಶಾಸಕರು ತಾವು ಹುದ್ದೆಯೇ ಹೊಂದಿಲ್ಲದ ಕಾರಣ ಅನರ್ಹಗೊಳಿಸುವುದು ಸರಿಯಲ್ಲ ಎಂದು ವಾದಿಸುತ್ತಿದ್ದಾರೆ.  ಗೆದ್ದು ಬಂದ ಎಲ್ಲ ಶಾಸಕರನ್ನು ಮಂತ್ರಿ ಮಾಡಲು ಸಾಧ್ಯವಾಗುವುದಿಲ್ಲ. ಸಹಜವಾಗಿ ಆಗ ಗೆದ್ದವರಲ್ಲಿ ಅತೃಪ್ತಿ ಕಾಣಿಸಿ ಕೊಳ್ಳುತ್ತದೆ. ಇಂತವರನ್ನು ಸಮಾಧಾನ ಮಾಡಲು ಹುಟ್ಟಿಕೊಂಡದ್ದೇ ಸಂಸದೀಯ ಕಾರ್ಯದರ್ಶಿ ಎಂಬ ಹುದ್ದೆ. ಸಚಿವರಿಗೆ ಸಹಾಯಕ ಆಗಿರುವುದು ಎಂಬ ವ್ಯಾಖ್ಯಾನ ಈ ಹುದ್ದೆಗಿದ್ದರೂ ಸಚಿವ ಸ್ಥಾನಕ್ಕೆ ಸಮವಾಗಿರುವ ಎಲ್ಲ ಸೌಲಭ್ಯಗಳನ್ನು ಹೊಂದಿದೆ. ಸಂಸದೀಯ ಕಾರ್ಯದರ್ಶಿ ಆದವರು ಸಚಿವರಷ್ಟೇ ಪ್ರಭಾವಶಾಲಿಯಾಗಿರುತ್ತಾರೆ. ಹೀಗಾಗಿ ಈ ಹುದ್ದೆಯನ್ನು ಲಾಭದಾಯಕ ಹುದ್ದೆಗಳ ಸಾಲಿಗೆ ಸೇರಿಸಲಾಗಿದೆ. ಸಂಸದೀಯ ಕಾರ್ಯದರ್ಶಿ ಎಂದಲ್ಲ ನೂರಾರು ಲೆಕ್ಕದಲ್ಲಿರುವ ನಿಗಮ, ಮಂಡಳಿ, ಅಕಾಡೆಮಿಗಳು ಕೂಡ ಇಂತಹ ಅತೃಪ್ತರಿಗೆ ಪುನರ್ವಸತಿ ಕಲ್ಪಿಸುವ ವ್ಯವಸ್ಥೆಯೇ. ಸರಕಾರಿ ಬಿಳಿಯಾನೆಗಳನ್ನು ಸಾಕುವ ಈ ವ್ಯವಸ್ಥೆಯಿಂದ ಜನರಿಗಾಗುವ ಪ್ರಯೋಜನ ಅಷ್ಟಕ್ಕಷ್ಟೆ. ಸಂಸದೀಯ ಕಾರ್ಯದರ್ಶಿ ಹುದ್ದೆಯಂತೆಯೇ ಇವುಗಳನ್ನೂ ಲಾಭದಾಯಕ ಹುದ್ದೆಗಳೆಂದು ಪರಿಗಣಿಸಿದರೆ ಈ ಹುದ್ದೆಗಳಿಗಾಗಿ ಹಾತೊರೆಯುವವರ ಸಂಖ್ಯೆ ಕಡಿಮೆಯಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next