ಬನಹಟ್ಟಿ: ಗ್ರಾಮೀಣ ಭಾಗಗಳಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರೋಗ ನಿಯಂತ್ರಣ ಹಾಗೂ ಜಾಗೃತಿಗಾಗಿ ರೂಪಿಸಿರುವ ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಕುಲಹಳ್ಳಿಯಲ್ಲಿ ಶಾಸಕ ಸಿದ್ದು ಸವದಿ ಚಾಲನೆ ನೀಡಿದರು.
ತಾಲೂಕಿನ ಕುಲಹಳ್ಳಿ ಗ್ರಾಮದ ಶಿವಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ಸಭೆಯಲ್ಲಿ ಶಾಸಕ ಸಿದ್ದು ಸವದಿ ಮಾತನಾಡಿ, ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಹಾಸಿಗೆ, ಉಚಿತ ಊಟದ ವ್ಯವಸ್ಥೆ, ಬಿಸಿ ನೀರು, ಪ್ರತ್ಯೇಕ ಶೌಚಾಲಯ ಸೇರಿ ವಿಶೇಷ ಕಾಳಜಿಯಿಂದ ಹಾಗೂ ಮಕ್ಕಳ ರೀತಿಯಲ್ಲಿ ಆರೈಕೆ ಮಾಡಲು ವೈದ್ಯರು ಹಾಗೂ ಶುಶ್ರೂಷಕರು ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ. ಹಾಗಾಗಿ ಕೋವಿಡ್ ಸೋಂಕು ದೃಢಪಟ್ಟಲ್ಲಿ ಹೋಂ ಐಸೋಲೇಶನ್ ಬದಲಾಗಿ ಕೆಲವು ದಿನಗಳ ಕಾಲ ಚಿಕಿತ್ಸೆ ಪಡೆದು ಗುಣಮುಖರಾಗಿ ಎಂದರು.
ಗ್ರಾಮದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಸೋಂಕು ತಡೆಗಟ್ಟುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕೋವಿಡ್ ಲಕ್ಷಣಗಳಿರುವವರು ತಕ್ಷಣ ಪರೀಕ್ಷೆ ಮಾಡಿಸಬೇಕೆಂದರು.
ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಂಡು, ಸೋಂಕಿನ ಪ್ರಸರಣದ ಸರಪಳಿ ತುಂಡರಿಸುವುದು ಹಾಗೂ ಜನರನ್ನು ಪರೀಕ್ಷೆಗೆ ಒಳಪಡಿಸಿ ಸೂಕ್ತ ಚಿಕಿತ್ಸೆ “ವೈದ್ಯರ ನಡೆ ಹಳ್ಳಿ ಕಡೆ’ಯ ಉದ್ದೇಶವಾಗಿದೆ ಎಂದರು.
ತಹಶೀಲ್ದಾರ್ ಸಂಜಯ ಇಂಗಳೆ, ವೈದ್ಯಾಧಿ ಕಾರಿ ಡಾ| ಗೈಬುಸಾಬ ಗಲಗಲಿ, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.