ಹೈದರಾಬಾದ್: ಖ್ಯಾತ ನಟ ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಚಿತ್ರ ಹಲವು ವಿವಾದಾತ್ಮಕ ವಿಚಾರಗಳಿಗಾಗಿ ಭಾರಿ ಸುದಿಯಾಗುತ್ತಿದ್ದು, ಚಿತ್ರಕ್ಕೆ ಸಂಗೀತ ನೀಡಿರುವ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರ ಹೇಳಿಕೆ ವಿವಾದಕ್ಕೆ ಸಿಲುಕಿ ಆಕ್ರೋಶಕ್ಕೆ ಕಾರಣವಾಗಿದೆ.
ದೇವಿಶ್ರೀ ಪ್ರಸಾದ್, ‘ಐಟಂ ಸಾಂಗ್ ನನಗೆ ಭಕ್ತಿ ಗೀತೆ ಇದ್ದ ಹಾಗೆ, ಐಟಂ ಸಾಂಗ್ಗಳು ಒಂದು ರೀತಿಯ ಧ್ಯಾನವೂ ಕೂಡ ಹೌದು’ಎಂದು ಹೇಳಿಕೆ ನೀಡಿದ್ದರು. ಹೇಳಿಕೆ ವಿವಾದಕ್ಕೆ ಗುರಿಯಾಗಿದ್ದು, ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್ ಹೇಳಿಕೆಯನ್ನು ವಿರೋಧಿಸಿ ಕಿಡಿ ಕಾರಿದ್ದಾರೆ.
ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವ ದೇವಿ ಶ್ರೀ ಪ್ರಸಾದ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೋಶಮಹಲ್ ಶಾಸಕ ರಾಜಾ ಸಿಂಗ್ ಹೈದರಾಬಾದ್‌ನ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ದೇವಿಶ್ರೀ, ಐಟಂ ಸಾಂಗ್ಗೆ ಭಕ್ತಿ ಗೀತೆಯನ್ನು ಹೇಗೆ ಹೋಲಿಸುತ್ತಾರೆ? ಅನಗತ್ಯವಾಗಿ ಹಿಂದೂ ಭಕ್ತಿ ಗೀತೆಗಳ ವಿರುದ್ಧ ಅರ್ಥವಿಲ್ಲದ ಹೇಳಿಕೆ ನೀಡಿದ್ದಾರೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದು, ಕೂಡಲೇ ಬೇಷರತ್ ಕ್ಷಮೆಯಾಚಿಸಬೇಕೆಂದಿದ್ದಾರೆ. ಕ್ಷಮೆಯಾಚಿಸದಿದ್ದರೆ, ಹಿಂದೂ ಸಮುದಾಯದಿಂದ ತೀವ್ರ ವಿರೋಧ ಎದುರಿಸಬೇಕಾಗುತ್ತದೆ ಎಂದು ಕಿಡಿ ಕಾರಿದ್ದಾರೆ.
ಕ್ಷಮೆಯಾಚಿಸದಿದ್ದರೆ, ದೇವಿಶ್ರೀ ಅವರನ್ನು ತೆಲಂಗಾಣದಲ್ಲಿ ಸ್ವತಂತ್ರವಾಗಿ ತಿರುಗಾಡಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.