ಚಿತ್ರದುರ್ಗ: ತುರುವನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಳಾಂತರ ವಿರೋಧಿಸಿ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಧರಣಿ ಆರಂಭಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರ ಕ್ಷೇತ್ರ ನಿಪ್ಪಾಣಿಗೆ ತುರುವನೂರು ಪ್ರಥಮ ದರ್ಜೆ ಕಾಲೇಜನ್ನು ಸ್ಥಳಾಂತರ ಮಾಡಲಾಗಿದೆ.
ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತುರುವನೂರು ಗ್ರಾಮದ ಪ್ರಥಮ ದರ್ಜೆ ಕಾಲೇಜಿಗೆ ಬಹುತೇಕ ವಿದ್ಯಾರ್ಥಿನಿಯರೇ ಸೇರುತ್ತಿದ್ದು, ಮೂರು ವರ್ಷದ ಹಿಂದಷ್ಟೇ ಕಾಲೇಜು ಮಂಜೂರಾಗಿತ್ತು. ಆದರೆ 100 ವಿದ್ಯಾರ್ಥಿಗಳಿಗಿಂತ ಕಡಿಮೆ ಇರುವ ನೆಪವೊಡ್ಡಿ ಸರ್ಕಾರ ಕಾಲೇಜು ಸ್ಥಳಾಂತರಕ್ಕೆ ಆದೇಶ ಮಾಡಿದೆ.
ಸರ್ಕಾರದ ತೀರ್ಮಾನ ಖಂಡಿಸಿರುವ ಶಾಸಕರು ಜಿಟಿಜಿಟಿ ಮಳೆಯ ನಡುವೆಯೂ ಧರಣಿ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಕುಳಿತಿರುವ ಶಾಸಕರು ಪ್ರತಿ ದಿನ ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆವರೆಗೆ ಸರ್ಕಾರದ ನಿರ್ಧಾರ ಹಿಂಪಡೆಯುವವರೆಗೆ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ನ್ಯಾಯಾಲಯದ ಮೊರೆ ಕೂಡಾ ಹೋಗುತ್ತಿದ್ದು, ಎಲ್ಲಿಯೂ ನ್ಯಾಯ ಸಿಗದಿದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದ್ದಾರೆ.
ಶಾಸಕರ ಜತೆಗೆ ಕಾಲೇಜಿನ ವಿದ್ಯಾರ್ಥಿಗಳು, ರೈತಪರ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ನೀಡಿವೆ. ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ತುರುವನೂರು ಗ್ರಾಮದಿಂದ ಚಿತ್ರದುರ್ಗಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ.