ಯಾದಗಿರಿ: ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ಭಾರತೀಯ ಜನತಾ ಪಕ್ಷ ಸೋಮವಾರ ಕರೆ ನೀಡಿದ್ದ ಕರ್ನಾಟಕ
ಬಂದ್‌ಗೆ ಜಿಲ್ಲೆಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕರ್ನಾಟಕ ಬಂದ್ ಕರೆ ಹಿನ್ನೆಲೆಯಲ್ಲಿ ಯಾದಗಿರಿ ನಗರದಲ್ಲಿ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ಸ್ವತಃ
ತಾವೇ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುವಲ್ಲಿ ನಿರತರಾಗಿದ್ದು ಕಂಡು ಬಂತು.
ಬೆಳಗ್ಗೆಯಿಂದಲೇ ಕಾರ್ಯಕರ್ತರೊಂದಿಗೆ ಸೇರಿ ನಗರದಲ್ಲಿರುವ ಅಂಗಡಿಗಳನ್ನು ಬಲವಂತವಾಗಿ ಬಂದ್ ಮಾಡಿಸಿದರು. ನಗರದ ಖಾಸಗಿ ಹೊಟೇಲ್‌ನಲ್ಲಿ ಬಾಗಿಲು ಹಾಕಿಕೊಂಡು ಒಳಗೆ ಗ್ರಾಹಕರಿಗೆ ತಿಂಡಿ ನೀಡಲಾಗುತ್ತಿತ್ತು. ಈ ವಿಚಾರ ಅರಿತ ಶಾಸಕರು ಹೊಟೇಲ್ ಬಾಗಿಲು ತೆಗೆಸಿ ಒಳಗೆ ಹೋಗಿ ಗ್ರಾಹಕರನ್ನು ಹೊರಗೆ ಕಳುಹಿಸಿ ಬಂದ್ ಮಾಡುವಂತೆ ಹೊಟೇಲ್ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಗ್ರಾಹಕರೊಬ್ಬರು ಬಂದ್ ಮಾಡಲು ನೀವು ಯಾರು ಎಂದಾಗ ನಾನು ಶಾಸಕನಾಗಿದ್ದು, ಬಂದ್ ಮಾಡಬೇಕು ಎಂದು ವಾಗ್ವಾದ ನಡೆಸಿದ ಘಟನೆಯೂ ನಡೆಯಿತು. ನೂರಾರು ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬೈಕ್ ರ್ಯಾಲಿ ನಡೆಸಿ ಅಂಗಡಿಗಳನ್ನು ಬಂದ್ ಮಾಡುವಲ್ಲಿ ನಿರತರಾಗಿದ್ದರು. ಒಟ್ಟಾರೆಯಾಗಿ ಜಿಲ್ಲೆಯಾದ್ಯಂತ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬೆಳಗ್ಗೆ ಕೆಲವರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿದರೆ, ಇನ್ನೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಒತ್ತಾಯ ಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುತ್ತಿರುವುದು ಕಂಡು ಬಂದಿತು. ಎಂದಿನಂತೆ ಆಟೋ ಸೇರಿದಂತೆ ಖಾಸಗಿ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆ ಆಗಲಿಲ್ಲ.
ಇದರಿಂದ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಆಸ್ಪತ್ರೆಗಳು, ಮೆಡಿಕಲ್ ಶಾಪ್‌ಗ್ಳು ಶಾಲಾ
ಕಾಲೇಜುಗಳು, ಬ್ಯಾಂಕ್‌ಗಳು ಹಾಗೂ ಸರಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದ್ದರಿಂದ ಜನರಿಗೆ ಬಂದ್‌ನ ಯಾವುದೇ ಪರಿಣಾಮ ಬೀರಲಿಲ್ಲ. ಬಿಜೆಪಿ ಕರ್ನಾಟಕ ಬಂದ್‌ಗೆ ಕರವೇ ಹಾಗೂ ರೈತ ಸಂಘಗಳು ಬೆಂಬಲ ನೀಡಿರಲಿಲ್ಲ.
ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ತಮ್ಮ ಊರುಗಳಿಗೆ ಹೋಗಬೇಕಾಗಿದ್ದ ಪ್ರಯಾಣಿಕರು ಪರದಾಡಿದರು. ಯಾದಗಿರಿ, ಶಹಾಪುರ, ಸುರಪುರ, ಗುರುಮಠಕಲ್, ವಡಗೇರಾ, ಹುಣಸಗಿ ತಾಲೂಕುಗಳಲ್ಲಿ ಸಹ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.