Advertisement

ಪಂಪಿಂಗ್‌ ಸ್ಟೇಶನ್‌ಗೆ ನಿರಂತರ ವಿದ್ಯುತ್‌

09:00 AM Mar 22, 2018 | Team Udayavani |

ಉಡುಪಿ: ಸ್ವರ್ಣಾ ನದಿಯಿಂದ ನೀರು ಪೂರೈಕೆಯಾಗುವ ಬಜೆ ಅಣೆಕಟ್ಟು ಬಳಿ ಇರುವ ಪಂಪಿಂಗ್‌ ಸ್ಟೇಶನ್‌ಗೆ ದಿನದ 24 ಗಂಟೆಯೂ ನಿರಂತರ ವಿದ್ಯುತ್‌ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ವಿದ್ಯುತ್‌ ವ್ಯತ್ಯಯ ಆಗಬಾರದು ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಕೆಪಿಟಿಸಿಎಲ್‌ ಮತ್ತು ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಾ. 21ರಂದು ತಾ.ಪಂ. ಸಭಾಂಗಣದಲ್ಲಿ ಮೆಸ್ಕಾಂ ಮತ್ತು ಕೆಪಿಟಿಸಿಎಲ್‌ ಅಧಿಕಾರಿಗಳ ಸಭೆಯಲ್ಲಿ ಮಾತ ನಾಡಿದ ಸಚಿವರು, ‘ಪಂಪಿಂಗ್‌ ಸ್ಟೇಶನ್‌ಗೆ 1 ಗಂಟೆ ವಿದ್ಯುತ್‌ ವ್ಯತ್ಯಯವಾದರೂ ನಗರದಲ್ಲಿ 3-4 ದಿನ ನೀರಿನ ಸಮಸ್ಯೆ ಉಂಟಾಗುತ್ತದೆ. ನಿರಂತರ ವಿದ್ಯುತ್‌ ಪೂರೈಕೆ ಯಾಗ ಬೇಕೆಂಬ ಉದ್ದೇಶದಿಂದ ಮಣಿಪಾಲ ಪವರ್‌ ಸ್ಟೇಶನ್‌ ನಿಂದ ಬಜೆವರೆಗೆ ಎಕ್ಸ್‌ಪ್ರೆಸ್‌ ಕಾರಿಡಾರ್‌ ನಿರ್ಮಿಸಲಾಗಿದೆ. ಹಾಗಾಗಿ ಹಿರಿಯಡಕ ಮತ್ತು ಮಣಿಪಾಲದ ಲೈನ್‌ಗಳೆರಡರ ಪೈಕಿ ಒಂದನ್ನು ಪರ್ಯಾಯವಾಗಿ ಬಳಸಿಕೊಳ್ಳಬೇಕು. ಒಂದು ವೇಳೆ ನೆಲದಡಿ ಕೇಬಲ್‌ (ಯುಜಿ ಕೇಬಲ್‌) ಹಾಕಬೇಕಾದರೆ ಅದಕ್ಕೆ ಕೂಡಲೇ ಅಂದಾಜು ಪಟ್ಟಿ ಸಿದ್ಧ ಮಾಡಿಕೊಡಿ. ಅನುದಾನ ಒದಗಿಸುತ್ತೇನೆ’ ಎಂದು ಹೇಳಿದರು.

Advertisement

ಸಮನ್ವಯಕ್ಕೆ ಸೂಚನೆ: “ಮೆಸ್ಕಾಂ, ಕೆಪಿ ಟಿಸಿಎಲ್‌ ಮತ್ತು ನಗರಸಭೆ ಸಮನ್ವಯದಿಂದ ಕಾರ್ಯ ನಿರ್ವಹಿಸ ಬೇಕು. ಸಮಸ್ಯೆಗಳೇನಿದ್ದರೆ ನನ್ನ ಗಮನಕ್ಕೂ ತರಬೇಕು’ ಎಂದು ಸಚಿವರು ತಿಳಿಸಿದರು. ಕಾಂಕ್ರೀಟ್‌ ಕಾಮಗಾರಿ ನಡೆಯಬೇಕಾಗಿರುವ ರಸ್ತೆಗಳಲ್ಲಿ ಕಂಬಗಳ ತೆರವು ಬಾಕಿ ಇದ್ದರೆ ಅದನ್ನು ಕೂಡಲೇ ಪೂರ್ಣಗೊಳಿಸಬೇಕು ಎಂದು ಸಚಿವರು ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು. ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಪೌರಾ ಯುಕ್ತ ಮಂಜುನಾಥಯ್ಯ, ಮೆಸ್ಕಾಂ ಸೂಪರಿಂಟೆಂಡೆಂಟ್‌ ಶರತ್‌ಚಂದ್ರ ಪಾಲ್‌ ಉಪಸ್ಥಿತರಿದ್ದರು.

ರಾಜರು ಅಂದುಕೊಂಡಿದ್ದೀರಾ…?
ಕೆಪಿಟಿಸಿಎಲ್‌ ಅಧಿಕಾರಿಗಳ ಕೆಲವು ಉತ್ತರಗಳಿಂದ ತೀವ್ರ ಅಸಮಾಧಾನಗೊಂಡ ಸಚಿವ ಪ್ರಮೋದ್‌ ಅವರು ‘ನಿಮ್ಮ ನಡುವೆ ಸಮನ್ವಯತೆ ಇಲ್ಲ. ನೀವು ಜನರ ಮುಂದೆ ಹೋಗುವುದಿಲ್ಲ. ಮೀಟಿಂಗ್‌ಗಳಿಗೂ ಬರುವುದಿಲ್ಲ. ನಿಮ್ಮನ್ನು ನೀವು ರಾಜರು ಅಂದುಕೊಂಡಿದ್ದೀರಾ?’ ಎಂದು ಪ್ರಶ್ನಿಸಿದರು. ಕೆಪಿಟಿಸಿಎಲ್‌ನ ಕಾರ್ಯಪಾಲಕ ಎಂಜಿನಿಯರ್‌ ಓರ್ವರ ಬದಲು ಸಹಾಯಕ ಎಂಜಿನಿಯರ್‌ ಸಭೆಗೆ ಹಾಜರಾಗಿದ್ದುದನ್ನು ಗಮನಿಸಿದ ಸಚಿವರು ಆ ಅಧಿಕಾರಿಯನ್ನು ಕೂಡ ತರಾಟೆಗೆ ತೆಗೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next