Advertisement

ಶಾಸಕ ಮಾನೆ ಗ್ರಾಮ ಸಂಚಾರ: ಸಮಸ್ಯೆಗಳಿಗೆ ಸ್ಪಂದನೆ

03:04 PM Aug 21, 2022 | Team Udayavani |

ಹಾನಗಲ್ಲ: ತಾಲೂಕಿನ ನಿಸ್ಸೀಮ ಆಲದಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇನಾಂದ್ಯಾಮನಕೊಪ್ಪ ಮತ್ತು ರಾಮಾಪೂರ ಗ್ರಾಮಗಳಲ್ಲಿ ಅವೃಷ್ಟಿಯಿಂದಾಗಿ ಸಾಕಷ್ಟು ಮನೆಗಳು ನೆಲಕಚ್ಚಿವೆ. ಮನೆ ಹಾನಿ ಸಮೀಕ್ಷೆಯನ್ನು ಸಮರ್ಪಕವಾಗಿ ಕೈಗೊಂಡು ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕೆಂದು ಗ್ರಾಮಸ್ಥರು ಶಾಸಕ ಶ್ರೀನಿವಾಸ ಮಾನೆ ಅವರಿಗೆ ಮನವಿ ಮಾಡಿದರು.

Advertisement

ಇನಾಂದ್ಯಾಮನಕೊಪ್ಪ ಮತ್ತು ರಾಮಾಪುರ ಗ್ರಾಮಗಳಲ್ಲಿ ಶಾಸಕ ಮಾನೆ ಅವರು ಗ್ರಾಮ ಸಂಚಾರ ಕೈಗೊಂಡ ಸಂದರ್ಭದಲ್ಲಿ ಅತಿವೃಷ್ಟಿಯಿಂದಾದ ಅನಾಹುತಗಳ ಕುರಿತು ಗ್ರಾಮಸ್ಥರು ಎಳೆಎಳೆಯಾಗಿ ಬಿಚ್ಚಿಟ್ಟರು. ಎರಡೂ ಗ್ರಾಮಗಳ ವ್ಯಾಪ್ತಿಯಲ್ಲಿ 15 ಕ್ಕೂ ಹೆಚ್ಚು ಮನೆಗಳು ನೆಲಕ್ಕುರುಳಿವೆ. ಮನೆ ಹಾನಿ ಸಮೀಕ್ಷೆ ಸರಿಯಾಗಿ ಕೈಗೊಳ್ಳಬೇಕು. ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿರುವ ಕುಟುಂಬಗಳೇ ಹೆಚ್ಚಾಗಿ ಮನೆ ಕಳೆದುಕೊಂಡಿವೆ. ಈ ಎಲ್ಲ ಕುಟುಂಬಗಳಿಗೂ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ಕೋರಿದರು.

ಈ ವೇಳೆ ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಹಿಂದೆಂದಿಗಿಂತಲೂ ಈ ಬಾರಿ ಹಾನಗಲ್ಲ ತಾಲೂಕಿನಲ್ಲಿ ಅತಿವೃಷ್ಟಿ ಅವಾಂತರ ಸೃಷ್ಟಿಸಿದೆ. ಪ್ರತಿ ಗ್ರಾಮಗಳಲ್ಲೂ ಮನೆಗಳು ಬಿದ್ದಿವೆ. ಯಾವೊಬ್ಬ ಸಂತ್ರಸ್ತರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ಅರ್ಹರಿಗೆಲ್ಲರಿಗೂ ಮಾನವೀಯ ನೆಲೆಗಟ್ಟಿನಲ್ಲಿ ಸ್ಪಂದಿಸಿ, ಸರ್ಕಾರದ ಪರಿಹಾರ ದೊರಕಿಸುವಂತೆ ಈಗಾಗಲೇ ತಾಲೂಕು ಮಟ್ಟದಅಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಲಾಗಿದೆ ಎಂದರು.

ಯಾವುದೇ ಕಾರಣಕ್ಕೂ ಪರಿಹಾರ ವಿತರಣೆಯಲ್ಲಿ ತಾರತಮ್ಯವಾಗಲು ಅವಕಾಶ ನೀಡುವುದಿಲ್ಲ. ನಿರಂತರವಾಗಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಪ್ರತಿ ಗ್ರಾಮದ ಹಾನಿ ವಿವರದ ಕುರಿತು ಸಂಪೂರ್ಣ ಮಾಹಿತಿ ಪಡೆಯಲಾಗುತ್ತಿದೆ. ಆದಷ್ಟು ಬೇಗ ಸರ್ಕಾರದಿಂದ ನ್ಯಾಯ ದೊರಕಿಸಲಾಗುವುದು. ಆತ್ಮಸ್ಥೈರ್ಯ ಕಳೆದುಕೊಳ್ಳದಿರಿ ಎಂದು ಶ್ರೀನಿವಾಸ ಮಾನೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಶಿವಾನಂದ ಬೇವಿನಹಳ್ಳಿ, ಯಲ್ಲಪ್ಪ ನಿಂಬಣ್ಣನವರ, ರಾಮಣ್ಣ ಶಿಡ್ಲಾಪೂರ, ರಾಜೂ ಕಡಗದ, ಸಾಕ ರಾಮಾಪೂರ, ಫಕ್ಕೀರಪ್ಪ ಆರೇರ, ಪರಸಪ್ಪ ಬಣಜಿಗೇರ, ವಿರೂಪಾಕ್ಷಯ್ಯ ಹಿರೇಮಠ, ನಿಂಗಪ್ಪ ಮ್ಯಾಕಲವರ ಸೇರಿದಂತೆ ಗ್ರಾಪಂ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next