Advertisement

ರಸ್ತೆ ಗುಂಡಿ ಮುಚ್ಚಿಸಲು ಶಾಸಕರ ತಾಕೀತು

05:11 PM Jul 20, 2021 | Team Udayavani |

ಕುಂದಗೋಳ: ಮಳೆ ಪರಿಣಾಮ ಅನೇಕ ರಸ್ತೆಗಳಲ್ಲಿ ತಗ್ಗು ಗುಂಡಿಗಳು ಬಿದ್ದಿದ್ದು, ಅಧಿಕಾರಿಗಳು ಗುಂಡಿಗಳನ್ನು ಮುಚ್ಚಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕೆಂದು ಜಿಪಂ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಶಾಸಕಿ ಕುಸುಮಾವತಿ ಶಿವಳ್ಳಿ ತಾಕೀತು ಮಾಡಿದರು. ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಬಹುತೇಕ ರಸ್ತೆಗಳ ಮಧ್ಯೆ
ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ ಎಂದು ಜನರು ದೂರುತ್ತಿದ್ದಾರೆ. ಇಲಾಖೆಯಲ್ಲಿ ಕುಳಿತುಕೊಂಡು ಕಾಲಹರಣ ಮಾಡಬೇಡಿ. ಮೊದಲು ಎಲ್ಲ ರಸ್ತೆಗಳ ಗುಂಡಿ ಮುಚ್ಚಿ ಜನರಿಗೆ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸೂಚಿಸಿದರು.

Advertisement

ಲೋಕೋಪಯೋಗಿ ಇಲಾಖೆ ಅಧಿಕಾರಿ ವರದಿ ಮಂಡಿಸುವಾಗ ಶಾಸಕಿ ಮಧ್ಯೆ ಪ್ರವೇಶಿಸಿ, ಶಿರೂರ ಬಳಿ ಇರುವ ರೈಲ್ವೆ ಸೇತುವೆ ಶಿಥಿಲಗೊಂಡು 6 ತಿಂಗಳು ಗತಿಸಿದರೂ ಇದುವರೆಗೂ ದುರಸ್ತಿ ಕಾರ್ಯ ಆರಂಭಿಸಿಲ್ಲ ಎಂದು ತರಾಟೆ ತೆಗೆದುಕೊಂಡರು. ಕೂಡಲೇ ದುರಸ್ತಿ ಕಾರ್ಯ ಆರಂಭಿಸಬೇಕೆಂದು ಎಚ್ಚರಿಸಿದರು. ಕೃಷಿ ಇಲಾಖೆ ಅಧಿಕಾರಿ ಸದಾಶಿವ ಕಾನೋಜಿ ವರದಿ ಮಂಡಿಸಿ, ವಿವಿಧ ಮುಂಗಾರು ಬೆಳೆಗಳಿಗೆ ರೋಗ ಬಾಧೆ ಕಂಡುಬಂದಿದೆ. ಹತೋಟಿಗೆ ಔಷಧಗಳನ್ನು ಸಿಂಪಡಿಸಲು ರೈತರಿಗೆ ವಾಟ್ಸ್‌ ಆ್ಯಪ್‌ ಗ್ರುಪಿನಲ್ಲಿ ಮಾಹಿತಿ ರವಾನಿಸುತ್ತಿದ್ದೇವೆ ಎಂದು ಹೇಳಿದಾಗ ಶಾಸಕಿ ಗ್ರಾಮದಲ್ಲಿ ಪ್ರಚಾರ ವಾಹನ ಮೂಲಕ ಅರಿವು ಮೂಡಿಸಬೇಕೆಂದು ಹೇಳಿದರು.

ಲ್ಯಾಂಡ್‌ ಆರ್ಮಿ ಇಲಾಖೆ ಅಧಿಕಾರಿಗಳು ಬರದೇ ಕೆಳ ಅಧಿಕಾರಿಗಳನ್ನು ಕಳಿಸಿದ್ದರಿಂದ ಸಭೆಗೆ ಸಮರ್ಪಕ ಉತ್ತರ ಹೇಳಲು ತಡವರಿಸಿದರು. ಅಬಕಾರಿ ಇಲಾಖೆ ಅಧಿಕಾರಿ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳು ಸಭೆಗೆ ಬಾರದೆ ತಮ್ಮ ಕೆಳಗಿನ ಅಧಿ ಕಾರಿಗಳನ್ನು ಕಳಿಸಿದ್ದರಿಂದ ಶಾಸಕರು ಸಿಡಿಮಿಡಿಗೊಂಡು ಅವರ ಜೊತೆಗೆ ಮುಖ್ಯವಾದ ವಿಷಯಗಳನ್ನು ಚರ್ಚಿಸಬೇಕಾಗಿತ್ತು. ಕೂಡಲೇ ಅವರನ್ನು ಸಭೆಗೆ ಬರುವಂತೆ ತಾಕೀತು ಮಾಡಿದರು.

ಆರೋಗ್ಯ ಇಲಾಖೆ ಅಧಿಕಾರಿ ಭಾಗೀರಥಿ ಮಡ್ಲೆರಿ ಇಲಾಖೆ ವರದಿ ಮಂಡಿಸಿ, ಇದುವರೆಗೂ ತಾಲೂಕಿನಲ್ಲಿ 45,545 ಕೋವಿಡ್‌ ಲಸಿಕೆ ನೀಡಲಾಗಿದ್ದು 3ನೇ ಅಲೆಯ ಮುನ್ನೆಚ್ಚರಿಕೆವಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮಕ್ಕಳಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ನೀರಿನ ಘಟಕಗಳು ಸ್ಥಗಿತ
ಜಿಪಂ ಸಹಾಯಕ ಅಧಿಕಾರಿ ಎಸ್‌.ಆರ್‌. ವೀರಕರ ತಮ್ಮ ಇಲಾಖೆ ವರದಿಯನ್ನು ಮಂಡಿಸುವಾಗ ಶಾಸಕಿ ಕುಸುಮಾವತಿ ಶಿವಳ್ಳಿ ಮಧ್ಯಪ್ರವೇಶಿಸಿ, ಅನೇಕ
ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳು ಸ್ಥಗಿತವಾಗಿವೆ ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಸಂಬಂಧಿಸಿದಂತೆ ಬೇರೆ ಅಧಿ ಕಾರಿಗಳು ಆಗಮಿಸಿದ್ದಾರೆ ಎಂದು ವೀರಕರ ಹೇಳಿದಾಗ ಸಿಡಿಮಡಿಗೊಂಡ ಶಾಸಕರು, ಇಷ್ಟು ದಿನ ತಾವೇ ಈ ಇಲಾಖೆ ಪ್ರಭಾರಿಗಳಾಗಿದ್ದೀರಿ ಏನು ಮಾಡಿದ್ದೀರಿ. ಎಷ್ಟು ಘಟಕಗಳಿವೆ ಎಂದು ಕೇಳಿದರು. 79 ಘಟಕಗಳಿದ್ದು, ಇವುಗಳನ್ನು ಆಯಾ ಗ್ರಾಪಂನವರೇ ನಿರ್ವಹಣೆ ಮಾಡಬೇಕು. ಪ್ರತಿ ತಿಂಗಳು ಮೂರು ಸಾವಿರ ರೂ. ನಿರ್ವಹಣೆ ವೆಚ್ಚ ನೀಡಲಾಗುತ್ತಿದೆ ಎಂದು ವೀರಕರ ಹೇಳಿದರು. ತಾಪಂ ಇಒ ಡಾ| ಮಹೇಶ ಕುರಿ ಪಿಡಿಒಗಳಿಗೆ ದುರಸ್ತಿ ಮಾಡಲು ಸೂಚಿಸುವುದಾಗಿ ಹೇಳಿದರು.

Advertisement

ಅಸಹಾಯಕತೆ ತೋಡಿಕೊಂಡ ಅಧಿಕಾರಿ ಜಿಪಂ ಸಹಾಯಕ ಅಧಿಕಾರಿ ಎಸ್‌.ಆರ್‌. ವೀರಕರ ಮಾತನಾಡಿ, ನಮ್ಮ ಇಲಾಖೆಯಲ್ಲಿ 9 ಸಹಾಯಕ ಎಂಜಿನಿಯರ್‌ಗಳು ಇರಬೇಕಾಗಿದ್ದು ಇಬ್ಬರೇ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಇನ್ನೊಬ್ಬರು ವರ್ಗಾವಣೆ ಮಾಡಿಕೊಂಡು ಹೋಗುತ್ತಿದ್ದಾರೆ. ಕೆಲಸ ಮಾಡಲು ತುಂಬಾ ತೊಂದರೆ ಆಗುತ್ತಿದೆ. ಸಹಾಯಕ ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಡಬೇಕೆಂದು ಕೇಳಿಕೊಂಡರು. ಆಗ ಪ್ರತಿಕ್ರಿಯಿಸಿದ ಶಾಸಕರು, ಯಾರನ್ನೂ ರಿಲೀವ್‌ ಮಾಡಬೇಡಿ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಸರಕಾರಕ್ಕೆ ಒತ್ತಾಯ ಮಾಡುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next