Advertisement

ಗ್ರೀನ್‌ ಮಂಗಳೂರು ಪರಿಕಲ್ಪನೆಯಡಿ ಮಿಯಾವಾಕಿ ಅರಣ್ಯ: ವೇದವ್ಯಾಸ ಕಾಮತ್‌

12:22 PM May 24, 2022 | Team Udayavani |

ಪಡೀಲ್‌: ಮಂಗಳೂರು ನಗರದಲ್ಲಿ ಹಸುರೀಕರಣಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಗ್ರೀನ್‌ ಮಂಗಳೂರು ಪರಿಕಲ್ಪನೆಯಡಿ ಮಿಯಾವಾಕಿ ಮಾದರಿಯಲ್ಲಿ ಅರಣ್ಯ ಬೆಳೆಸಲು ನಿರ್ಧರಿಸಲಾಗಿದೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ಡಿ. ವೇದವ್ಯಾಸ ಕಾಮತ್‌ ಅವರು ಹೇಳಿದರು.

Advertisement

ಅರಣ್ಯ ಇಲಾಖೆಯ ವತಿಯಿಂದ ಪಡೀಲ್‌ನ ಅರಣ್ಯ ಸಸ್ಯಪಾಲನಾಲಯ ದಲ್ಲಿ ನಿರ್ಮಾಣವಾಗಲಿರುವ ಅರಣ್ಯ ಇಲಾಖಾ ಅಧಿಕಾರಿ ಮತ್ತು ಸಿಬಂದಿ ವಸತಿ ಸಂಕೀರ್ಣದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದ ಅವರು, ನಗರದಲ್ಲಿ ಹಸುರು ಮಾಯವಾಗುತ್ತಿದೆ. ಸದ್ಯ ನಗರ ಪ್ರದೇಶದಲ್ಲಿ ಶೇ.1ರಿಂದ ಶೇ.2ರಷ್ಟು ಮಾತ್ರ ಅರಣ್ಯ ಇದ್ದು, ಕುದ್ರೋಳಿ, ಬಂದರು ವಾರ್ಡ್‌ನಲ್ಲಿ ಶೇ.1ಕ್ಕಿಂತಲೂ ಕಡಿಮೆ ಹಸುರು ಇದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ, ಪಾಲಿಕೆ ಮತ್ತು ರಾಮಕೃಷ್ಣ ಆಶ್ರಮದ ಸಹಯೋಗದಲ್ಲಿ ನಗರದ ಪ್ರಮುಖ ಪ್ರದೇಶಗಳಲ್ಲಿ ಮಿಯಾವಾಕಿ ಅರಣ್ಯ ಬೆಳೆಸಲು ನಿರ್ಧರಿಸಲಾಗಿದೆ. ಕೆಲವೇ ದಿನಗಳಲ್ಲಿ ಈ ಕೆಲಸ ಆರಂಭಗೊಳ್ಳಲಿದೆ ಎಂದರು.

ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬಂದಿಗೆ ವಸತಿ ಸಂಕೀರ್ಣ ನಿರ್ಮಾಣ ಮಾಡುವ ಯೋಜನೆ ಈ ಹಿಂದೆ ಇರಲಿಲ್ಲ. ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಈ ಯೋಜನೆಗೆ ಚಾಲನೆ ಸಿಗುತ್ತಿದೆ. ಇಲ್ಲಿನ ಅರಣ್ಯ ಇಲಾಖೆಯಲ್ಲಿ ವಿವಿಧ ಜಿಲ್ಲೆಗಳ ಸಿಬಂದಿ ಕಾರ್ಯನಿರ್ವಹಿಸುತ್ತಾರೆ. ಆದರೆ ಅವರಿಗೆ ಸ್ವಂತ ಸೂರು ಇರುವುದಿಲ್ಲ. ಇದನ್ನು ಮನಗಂಡು ಸರಕಾರ ಕ್ಲಸ್ಟರ್‌ ಮಾದರಿಯಲ್ಲಿ ಫ್ಲಾಟ್‌ ನಿರ್ಮಾಣ ಮಾಡುತ್ತಿದೆ. ಸದ್ಯ ಒಂದು ಕೋ.ರೂ. ಬಿಡುಗಡೆಗೊಂಡಿದ್ದು, ಹಂತ ಹಂತವಾಗಿ ಅನುದಾನ ಹೊಂದಿಸಲಾಗುವುದು ಎಂದರು.

ಪಾಲಿಕೆ ಮೇಯರ್‌ ಪ್ರೇಮಾನಂದ ಶೆಟ್ಟಿ ಮಾತನಾಡಿ, ರಾಜ್ಯದಲ್ಲೇ ಮೊದಲ ಬಾರಿ ಮಂಗಳೂರಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಸತಿ ಸಂಕೀರ್ಣ ನಿರ್ಮಾಣವಾಗುತ್ತಿದೆ. ಪಾಲಿಕೆಗೂ ಅರಣ್ಯ ಇಲಾಖೆಗೂ ಉತ್ತಮ ಸಂಬಂಧ ಇದ್ದು, ನಗರದ ಹಸುರೀಕರಣಕ್ಕೆ ಪಾಲಿಕೆ ಜತೆ ಅರಣ್ಯ ಇಲಾಖೆಯೂ ಕೈಜೋಡಿಸುತ್ತಿದೆ ಎಂದರು.

ಮಂಗಳೂರು ವಿಭಾಗ ಉಪ ಅರಣ್ಯ ಸಂರಕ್ಷಾಧಿಕಾರಿ ಡಾ| ದಿನೇಶ ಕುಮಾರ್‌ ಪ್ರಸ್ತಾವಿಸಿ, ಅರಣ್ಯ ಇಲಾಖೆಯ ಅಧಿಕಾರಿ, ಸಿಬಂದಿಗೆ ಮೊದಲ ಬಾರಿ ಕ್ಲಸ್ಟರ್‌ ಮಾದರಿಯಲ್ಲಿ ವಸತಿ ಸಂಕೀರ್ಣ ನಿರ್ಮಾಣವಾಗುತ್ತಿದೆ. ಸುಮಾರು 40ರಿಂದ 45 ಫ್ಲ್ಯಾಟ್‌ಗಳು ನಿರ್ಮಾಣ ಗೊಳ್ಳಲಿದೆ ಎಂದರು.

Advertisement

ಮಾಜಿ ಮೇಯರ್‌ ದಿವಾಕರ್‌ ಪಾಂಡೇಶ್ವರ, ಪಾಲಿಕೆ ಸದಸ್ಯೆ ಶೋಭಾ ಪೂಜಾರಿ, ನಾಮನಿರ್ದೇಶಿತ ಸದಸ್ಯ ಭಾಸ್ಕರ ಚಂದ್ರ ಶೆಟ್ಟಿ, ಮಂಗಳೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್‌ ಎಸ್‌. ನಟಲ್‌ಕರ್‌, ಮಂಗಳೂರು ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್‌. ಸುಬ್ರಹ್ಮಣ್ಯ ರಾವ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ಪ್ರಮುಖರಾದ ವಿಜಯಕುಮಾರ್‌ ಶೆಟ್ಟಿ, ರಣದೀಪ್‌ ಕಾಂಚನ್‌, ಪರಿಸರ ಪ್ರೇಮಿ ಮಾಧವ ಉಳ್ಳಾಲ ಮೊದಲಾ ದವರಿದ್ದರು. ಮಂಗಳೂರು ವಲಯ ಅರಣ್ಯಾಧಿಕಾರಿ ಪ್ರಶಾಂತ್‌ ಕುಮಾರ್‌ ಪೈ ಸ್ವಾಗತಿಸಿ, ನಿರೂಪಿಸಿದರು.

ವರ್ಷಾಂತ್ಯಕ್ಕೆ ಶಕ್ತಿನಗರದಲ್ಲಿ ವಸತಿ ಗೃಹ

ಆರ್ಥಿಕವಾಗಿ ಹಿಂದುಳಿದವ ರಿಗೆ ಶಕ್ತಿನಗರದಲ್ಲಿ ನಿರ್ಮಾಣವಾಗ ಬೇಕಿದ್ದ ವಸತಿ ಗೃಹ ಯೋಜನೆ ಕಾಮಗಾರಿಗೆ ಹಲವಾರು ತೊಡಕು ಉಂಟಾಗಿತ್ತು. ಕಾನೂನು ಸಮಸ್ಯೆ, ಡೀಮ್ಡ್ ಫಾರೆಸ್ಟ್‌ ಪ್ರದೇಶ ಸಹಿತ ಅನೇಕ ಅಡೆ ತಡೆ ಇತ್ತು. ಈಗಾಗಲೇ ಕೇಂದ್ರ, ರಾಜ್ಯ ಸರಕಾರದ ಉನ್ನತ ಅಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದೇನೆ. ವಸತಿ ಗೃಹ ನಿರ್ಮಾಣಕ್ಕೆ ಇರುವ ತೊಡಕುಗಳು ನಿವಾರಣೆಗೊಳ್ಳುವ ಲಕ್ಷಣ ಕಾಣುತ್ತಿದೆ. ಕೇಂದ್ರದಿಂದ ಸದ್ಯದಲ್ಲೇ ಗ್ರೀನ್‌ ಸಿಗ್ನಲ್‌ ದೊರಕುವ ನಿರೀಕ್ಷೆ ಇದ್ದು, ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಅನುಮತಿ ಪಡೆದು ಈ ವರ್ಷಾಂತ್ಯದೊಳಗೆ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸುತ್ತೇನೆ ಎಂದು ಶಾಸಕ ಕಾಮತ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next