Advertisement

ಲಸಿಕೆ ಮಿಶ್ರ ಪ್ರಯೋಗ ಶೀಘ್ರ: ದೇಶದಲ್ಲಿ ಪ್ರಯೋಗದ ಬಗ್ಗೆ ಎನ್‌ಟಿಜಿಎ ಅಧ್ಯಕ್ಷ ಅರೋರಾ ಸುಳಿವು

03:09 AM Jun 01, 2021 | Team Udayavani |

ಹೊಸದಿಲ್ಲಿ: ಒಬ್ಬ ವ್ಯಕ್ತಿಗೆ ಭಿನ್ನ ಲಸಿಕೆಗಳ ಡೋಸ್‌ ಗಳನ್ನು ನೀಡಿದರೆ, ಅದು ಪರಿಣಾಮಕಾರಿ ಆಗಲಿದೆಯೇ ಎಂಬ ಬಗ್ಗೆ ಭಾರತದಲ್ಲೂ ಸದ್ಯದಲ್ಲೇ ಅಧ್ಯಯನ ಆರಂಭವಾಗಲಿದೆ.

Advertisement

ಇತ್ತೀಚೆಗಷ್ಟೇ ಸ್ಪೇನ್‌ನಲ್ಲಿ ವ್ಯಕ್ತಿಗಳಿಗೆ ಒಂದು ಡೋಸ್‌ ಆಸ್ಟ್ರಾಜೆನೆಕಾ ಲಸಿಕೆ, ಮತ್ತೂಂದು ಡೋಸ್‌ ಫೈಜರ್‌ ಲಸಿಕೆಗಳನ್ನು ನೀಡಿ ಪ್ರಯೋಗ ಮಾಡಲಾಗಿತ್ತು. ಅದರಿಂದ ಧನಾತ್ಮಕ ಫ‌ಲಿತಾಂಶ ಬಂದಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲೂ ಇದೇ ಮಾದರಿಯಲ್ಲಿ ಭಿನ್ನ ಲಸಿಕೆಗಳ ಮಿಶ್ರ ಪ್ರಯೋಗ (ವಾಕ್ಸಿನ್‌ ಕಾಕ್‌ಟೈಲ್‌) ಮಾಸಾಂತ್ಯಕ್ಕೆ ಶುರುವಾಗಲಿದೆ ಎಂದು ಲಸಿಕೆ ವಿತರಣೆಗೆ ಸಂಬಂಧಿಸಿದ ರಾಷ್ಟ್ರೀಯ ತಾಂತ್ರಿಕ ಸಮಿತಿ (ಎನ್‌ಟಿಜಿಎ)ಯ ಅಧ್ಯಕ್ಷ ಡಾ| ಕೆ.ಎನ್‌.ಅರೋರಾ ಹೇಳಿದ್ದಾರೆ.

ಅದರಂತೆ 8 ಲಸಿಕೆಗಳನ್ನು ಸೇರಿಸಿ ಪ್ರಯೋಗ ಮಾಡಲಾಗುತ್ತದೆ. ಸದ್ಯ ನೀಡಲಾಗುತ್ತಿರುವ ಕೊವಿಶೀಲ್ಡ್‌, ಕೊವ್ಯಾಕ್ಸಿನ್‌ ಮತ್ತು ಸ್ಪುಟ್ನಿಕ್‌- ವಿ ಮತ್ತು ಶೀಘ್ರವೇ ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ಐದು ಲಸಿಕೆ ಗಳನ್ನೂ ಪ್ರಯೋಗದಲ್ಲಿ ಬಳಸಲಾಗುತ್ತದೆ ಎಂದು ಹೇಳಿದ್ದಾರೆ.

ಹಲವರ ಜತೆ ಸಹಭಾಗಿತ್ವ: ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ, ಆಯಾ ಲಸಿಕೆಗಳನ್ನು ಸಂಶೋಧಿಸಿದ ಕಂಪೆನಿಗಳ ಜತೆಗೂಡಿ ಲಸಿಕೆಗಳ ಮಿಶ್ರಣದ ಪ್ರಯೋಗ ನಡೆಸಲಿದೆ. ಯಾವ ಹಂತದಲ್ಲಿ ಯಾವ ಲಸಿಕೆ ಕೊಡಬೇಕು ಎಂಬ ಬಗ್ಗೆಯೂ ಪರಿಶೀಲಿಸಲಾಗುತ್ತದೆ. ಇಂಥ ಪ್ರಯೋಗದಿಂದ ಜನರಿಗೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆಯೇ ಎಂಬುದನ್ನೂ ಕಂಡುಕೊಳ್ಳಲಾಗುತ್ತದೆ ಎಂದು ಅರೋರಾ ತಿಳಿಸಿದ್ದಾರೆ. ಇದೇ ವೇಳೆ, ಲಸಿಕೆಗಳು ಭಿನ್ನ ಪರಿಸರದಲ್ಲಿ ಸಂಶೋಧನೆಗೊಂಡು ಉತ್ಪಾದನೆಗೊಳ್ಳುವ ಕಾರಣ, ಎಲ್ಲವನ್ನೂ ಪ್ರಯೋಗಕ್ಕೆ ಒಳಪಡಿಸಲು ಸಾಧ್ಯವಿಲ್ಲ ಎಂದೂ ಅವರು ಹೇಳಿದ್ದಾರೆ.

50 ದಿನಗಳಲ್ಲಿ ಕನಿಷ್ಠ ಸೋಂಕು: ಐವತ್ತು ದಿನಗಳಿಗೆ ಹೋಲಿಕೆ ಮಾಡಿದರೆ, ರವಿವಾರದಿಂದ ಸೋಮವಾರದ ಅವಧಿಯಲ್ಲಿ ದಿನವಹಿ ಸೋಂಕುಗಳ ಸಂಖ್ಯೆ ತಗ್ಗಿದ್ದು, 1,52,734 ಪ್ರಕರಣ ಪತ್ತೆಯಾಗಿವೆ. 3,128 ಮಂದಿ ಕೊನೆಯುಸಿರೆಳೆದಿದ್ದಾರೆ. 24 ಗಂಟೆಗಳಲ್ಲಿ 2,38,022 ಮಂದಿ ಸೋಂಕಿನಿಂದ ಚೇತರಿಸಿ ಕೊಂಡಿದ್ದಾರೆ. ಈ ಮೂಲಕ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 2,56,92,342ಕ್ಕೆ ಏರಿಕೆಯಾಗಿದೆ. ಸಕ್ರಿಯ ಸೋಂಕಿನ ಸಂಖ್ಯೆಗಳೂ ಕೂಡ 20,26,092ಕ್ಕೆ ತಗ್ಗಿದೆ. ದೈನಂದಿನ ಸೋಂಕಿನ ಪಾಸಿಟಿವಿಟಿ ಪ್ರಮಾಣ ಶೇ.9.07ಕ್ಕೆ ಕುಸಿದಿದೆ.

Advertisement

ಗಂಗೆಯಲ್ಲಿ ಮತ್ತೆ 6 ಶವ ಪತ್ತೆ: ಉತ್ತರ ಪ್ರದೇಶದ ಫ‌ತೇಪುರ್‌ ಬಳಿ ಗಂಗಾನದಿಯಲ್ಲಿ ಇನ್ನೂ ಆರು ಶವಗಳು ತೇಲಿ ಬಂದಿದ್ದು, ಅವನ್ನು ಅಧಿಕಾರಿಗಳು ವಶಕ್ಕೆ ಪಡೆದು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಫ‌ತೇಪುರ್‌ ಎಸ್‌ಡಿಎಂ ಪ್ರಮೋದ್‌ ಜಾ, ರವಿವಾರ ಗಂಗಾನದಿಯಲ್ಲಿ ಆರು ಶವಗಳು ತೇಲಿಬರುತ್ತಿತ್ತು. ಅವು ಕೊಳೆತ ಸ್ಥಿತಿಯಲ್ಲಿದ್ದ ಕಾರಣ ಗುರುತಿಸಲಸಾಧ್ಯವಾಗಿತ್ತು. ಹೀಗಾಗಿ ಕೋವಿಡ್‌ ಮಾರ್ಗಸೂಚಿ ಅನ್ವಯ ಭಿಟೋರಾ ಗಂಗಾ ಘಾಟ್‌ನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು ಎಂದಿದ್ದಾರೆ. ಈ ಮಾಸಾರಂಭದಲ್ಲೂ 52 ಶವಗಳು ತೇಲಿ ಬಂದಿದ್ದವು.

ಕೊವಿ ಶೀಲ್ಡ್‌ ಸಿಂಗಲ್‌ ಡೋಸ್‌?
ಕೊವಿಶೀಲ್ಡ್‌ ಲಸಿಕೆಯನ್ನು ಒಂದೇ ಡೋಸ್‌ ನೀಡಿದರೇ ಸಾಕೇ ಎಂಬ ಬಗ್ಗೆಯೂ ಅಧ್ಯಯನ ನಡೆಸಲು ಚಿಂತನೆ ನಡೆದಿದೆ. ಒಂದೇ ಡೋಸ್‌ ಪರಿಣಾಮಕಾರಿ ಎಂಬುದು ಸಾಬೀತಾದರೆ, ಎರಡನೇ ಡೋಸ್‌ ಪಡೆಯುವ ಅಗತ್ಯವಿರುವುದಿಲ್ಲ. ಅಲ್ಲದೆ ದೇಶಾದ್ಯಂತ ಲಸಿಕೆ ವಿತರಣೆ ಪ್ರಕ್ರಿಯೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಲು ಇದು ಸಹಕಾರಿ. ಎರಡರಿಂದ ಎರಡೂವರೆ ತಿಂಗಳಲ್ಲಿ ಮಿಶ್ರ ಲಸಿಕೆಗಳ ನೀಡಿಕೆ ಹಾಗೂ ಈ ಅಧ್ಯಯನ ಮುಕ್ತಾಯವಾಗಲಿದೆ ಎಂದು ನೀತಿ ಆಯೋಗದ ಸದಸ್ಯ ಡಾ| ವಿ.ಕೆ.ಪೌಲ್‌ ತಿಳಿಸಿದ್ದಾರೆ. ಕೇಂದ್ರ ಸರಕಾರ ಈ ಮಾಹಿತಿ ಪರಿಶೀಲಿಸಿ, ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ಪೌಲ್‌ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next