Advertisement

ಮನೆಯವರಿಗೆ ಜ್ಯೂಸ್‌ನಲ್ಲಿ ಅಮಲು ಪದಾರ್ಥ ಬೆರೆಸಿದಳೇಕೆ  ಆ “ಜಾಣೆ’

10:17 AM Dec 11, 2017 | Team Udayavani |

ಮೂಡಬಿದಿರೆ: ಎಲ್ಲವೂ ಸುಗಮವಾಗಿ ನಡೆಯುತ್ತಿದ್ದರೆ ದರೆಗುಡ್ಡೆಯ ಪ್ರಿಯಾಂಕಾಳ ವಿವಾಹ ಅಳಿಯೂರಿನಲ್ಲಿ ಸೋಮವಾರ ನಡೆಯುತ್ತಿತ್ತೇನೋ. ಆದರೆ ಅದರ ಮೊದಲೇ ಅಂದರೆ  ಮೆಹೆಂದಿ ಕಾರ್ಯಕ್ರಮ ನಡೆದಿದ್ದ  ಶುಕ್ರವಾರ ತಡರಾತ್ರಿ ಆಕೆ ಮನೆ ಬಿಟ್ಟು “ಓಡಿ’ ಹೋದದ್ದು  ಎಲ್ಲ  ಗೊಂದಲಗಳಿಗೆ ಕಾರಣವಾಗಿದೆ.  ಇಷ್ಟಕ್ಕೂ ಅವಳನ್ನು ಹಾರಿಸಿಕೊಂಡು ಹೋಗಲಾಗಿದೆಯೇ ಅಥವಾ ವ್ಯವಸ್ಥಿತವಾಗಿ ಆಕೆ ಓಡಿ ಹೋದದ್ದೇ ಎಂಬುದು ಸ್ಪಷ್ಟವಾಗುತ್ತಿಲ್ಲ. ಮೇಲ್ನೋಟಕ್ಕೆ ಆಕೆ ಅನ್ಯಕೋಮಿನ ವ್ಯಕ್ತಿ ಜತೆ ಪರಾರಿಯಾಗಿದ್ದಾಳೆಯೇ ಎಂಬ ಶಂಕೆ ಮೂಡುತ್ತಿದೆ.

Advertisement

ಪೂರ್ವಾಪರ
ಪ್ರಿಯಾಂಕಾ ತಂದೆ ದಿವಂಗತ ಐತಪ್ಪ ಭಂಡಾರಿ. ಅಕ್ಕನಿಗೆ ಮದುವೆಯಾಗಿದೆ. ತಾಯಿ  ಇದ್ದಾರೆ. ಸಹೋದರ ಮುಂಬಯಿಯಲ್ಲಿ ಕೆಲಸದಲ್ಲಿದ್ದಾರೆ. ಈ  ಮನೆಯವರು ಮೊದಲು ಬಂಟ್ವಾಳದ ಫ‌‌ರಂಗಿಪೇಟೆ ಯಲ್ಲಿದ್ದರು. ಅಲ್ಲಿ ದ್ದಾಗ  ಇನೋಳಿಯ ಅನ್ಯಕೋಮಿನ ಹುಡುಗನೊಂದಿಗೆ ಆಕೆಗೆ ಪ್ರೇಮವೆನ್ನಬಹುದಾದ ಸಂಪರ್ಕ ಇತ್ತೆನ್ನಲಾಗಿದ್ದು  ಮನೆಯವರು ಪ್ರಯತ್ನ ಪೂರ್ವಕ ಈ ಸಂಬಂಧದಿಂದ ಆಕೆಯನ್ನು ಬಿಡಿಸುವಲ್ಲಿ ಯಶಸ್ವಿಯಾಗಿದ್ದರೆನ್ನಲಾಗಿದೆ. ಕೆಲವು ವರ್ಷಗಳ ಹಿಂದೆ ಈ ಕುಟುಂಬ ದರೆಗುಡ್ಡೆ  ಬಳಿ ನೆಲೆಸಿತ್ತು. ಪ್ರಿಯಾಂಕಾಳಿಗೆ ಯೋಗ್ಯ ವರನನ್ನು ಹುಡುಕಿ ಕೊನೆಗೆ ವಿದೇಶದಲ್ಲಿ ಕೆಲಸದಲ್ಲಿರುವ, ಶಿರೂರು ಮೂಲದ  ಹುಡುಗ ಸಿಕ್ಕಿದ. ಹೀಗೆ ಕಳೆದ ಐದಾರು ವರ್ಷದ ಸಂಪರ್ಕದಲ್ಲಿದ್ದು ಇತ್ತೀಚೆಗೆ ನಿಶ್ಚಿತಾರ್ಥವೂ ಆಗಿತ್ತು. ಇಷ್ಟೆಲ್ಲ ಆಗಿ ಆಕೆ ಆತನೊಂದಿಗೆ ಮದುವೆಯಾಗಬಹುದಿತ್ತು. ಆದರೆ ನಡೆದದ್ದೇ ಬೇರೆ.

ಜ್ಯೂಸ್‌ ಏಕೆ ಕಹಿಯಾಗಿತ್ತು?
ಮೆಹೆಂದಿ ನಡೆವ ಹಿಂದಿನ ದಿನ (ಶುಕ್ರವಾರ) ರಾತ್ರಿ ಆಕೆ ಮನೆಯವರಿಗೆಲ್ಲ ಜ್ಯೂಸ್‌ ನೀಡಿದ್ದಳಂತೆ. ಆ ಜ್ಯೂಸ್‌ ಕೊಂಚ ಕಹಿಯಾಗಿತ್ತಂತೆ. ಇದೇನು ಕಹಿ ಎಂದು ಕೆಲವರು ಕೇಳಿ ಹಾಗೆಯೇ ಬಿಟ್ಟುಬಿಟ್ಟಿದ್ದರಂತೆ. ಇದಾದ ಬಳಿಕ ನಿಧಾನವಾಗಿ ಅಮಲೇರಿಸಿಕೊಂಡಂತಾಗಿ ಅವರೆಲ್ಲ ನಿದ್ರೆಗೆ ಜಾರಿದ್ದರೆನ್ನಲಾಗಿದೆ. ಮತ್ತೆ ನಡೆದದ್ದೇ ಆಕೆಯ ನಾಪತ್ತೆ ಪ್ರಕರಣ. ಈ ಜ್ಯೂಸ್‌ ಸ್ಯಾಂಪಲ್‌ ಮನೆಯಲ್ಲಿ ಉಳಿದಿದ್ದು ಅದರ ಪರೀಕ್ಷೆ ನಡೆಯಬೇಕಾಗಿದೆ.

ಖಾತೆಗೆ ಹಣ ಬೀಳುತ್ತಿತ್ತಂತೆ
ಶನಿವಾರ ಪ್ರಿಯಾಂಕಾ ಕಾಣೆಯಾದದ್ದು ಗೊತ್ತಾದ  ಬಳಿಕ ನಡೆದ ವಿಚಾರಣೆಯಲ್ಲಿ ಆಕೆಗೆ ಪ್ರತ್ಯೇಕ  ಬ್ಯಾಂಕ್‌ ಅಕೌಂಟ್‌ ಇತ್ತೆಂದೂ ಅದರಲ್ಲಿ ಆಗಾಗ ಅನಾಮಿಕವಾಗಿ ಒಂದಷ್ಟು ಮೊತ್ತ ಜಮೆಯಾಗು ತ್ತಿತ್ತೆಂಬುದು ಗೊತ್ತಾಗಿದೆ. ಈ ಮೊತ್ತ ಸುಮಾರು  1 ಲಕ್ಷ ರೂ. ಗಳಷ್ಟಿದೆ ಎನ್ನಲಾಗುತ್ತಿದೆ. ಈ ಹಣ ಹಾಕಿದವರಾರು? ಮದುವೆಗಾಗಿ ಮನೆಯವರು ಸಾಲ ಮಾಡಿ 10 ಪವನ್‌ ಚಿನ್ನಾಭರಣ ಮಾಡಿಸಿ ಆಕೆಗೆಂದು ಹಾಕಿದ್ದರೆನ್ನಲಾಗಿದ್ದು  ಆಕೆ ಬಂಗಾರದೊಂದಿಗೆ ಪರಾರಿಯಾಗಿದ್ದಾಳೆ. ಬ್ಯಾಂಕ್‌ನಲ್ಲಿದ್ದ ದುಡ್ಡು ಏನಾಗಿದೆ ಎಂಬುದು ಇನ್ನೂ ಗೊತ್ತಾಗಿಲ್ಲ. ಇನೋಳಿಯ ಶಂಕಿತ ವ್ಯಕ್ತಿಯನ್ನು ಪತ್ತೆ ಹಚ್ಚುವ ಬಗ್ಗೆ  ಕಾರ್ಯಾಚರಣೆ ನಡೆಯುತ್ತಿದೆ ಎನ್ನಲಾಗಿದೆ.

ಇದು ಲವ್‌ ಜೆಹಾದ್‌-ಗ್ರಾಮ ಮಟ್ಟಕ್ಕೂ ಇಳಿಯುತ್ತಿದೆ ಐಸಿಸ್‌: ಜಗದೀಶ ಅಧಿಕಾರಿ 
ಇದು ಬರೇ ಲವ್‌ ಅಲ್ಲ ಲವ್‌ ಜೆಹಾದ್‌ ಪ್ರಕರಣ. ಮೇಲ್ನೋಟಕ್ಕೆ ಆಕೆ ಮುಗ್ಧ ಹುಡುಗಿ ಎಂದು ಕಾಣಿಸುತ್ತದೆ. ವ್ಯವಸ್ಥಿತವಾಗಿ ಮದುವೆ ಆಗಲು ಎಲ್ಲ ಸಿದ್ಧತೆ ನಡೆಯುತ್ತಿರುವಾಗ ಇಂಥದ್ದೊಂದು ಪ್ರಕರಣ ಆಗಿಹೋಗಿದೆ ಎಂದರೆ ಇದು ಬರೇ ಲವ್‌ ಅಲ್ಲ ಲವ್‌ ಜೆಹಾದ್‌ ಎಂಬ ಶಂಕೆ ಮೂಡುತ್ತಿದೆ. ಐಸಿಸ್‌ ಗ್ರಾಮ ಮಟ್ಟಕ್ಕೂ ಇಳಿಯುತ್ತಿದೆಯೇ ಎಂಬ ಗುಮಾನಿ ಮೂಡುತ್ತಿದೆ. ಇದರ ಬಗ್ಗೆ  ಸರಿಯಾದ ತನಿಖೆ ನಡೆಯಬೇಕಾಗಿದೆ. ಸತ್ಯ ಹೊರಬರಬೇಕಾಗಿದೆ’ ಎಂದು ದರೆಗುಡ್ಡೆ ಯವರೇ ಆದ ದ.ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ  ಕೆ.ಪಿ. ಜಗದೀಶ ಅಧಿಕಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next