Advertisement

ಮಿಶ್ರಬೆಳೆ ಪದ್ಧತಿ; ಸರಕಾರಿ ನೌಕರಿಯಿಂದ ನಿವೃತ್ತಿ ಬಳಿಕ ಶಿವಪ್ಪ ಸ್ವಯಂ “ಕೃಷಿ’

06:29 PM May 18, 2023 | Team Udayavani |

ಬೈಲಹೊಂಗಲ: ಇರುವುದು 20 ಎಕರೆ ಜಮೀನು, ಎರಡು ಬಾವಿ, ಅದರಲ್ಲಿ ಬಳ್ಳೊಳ್ಳಿ, ಪಾಮ್‌ ಗಿಡ,  ಮಾವಿನ ಗಿಡ, ನಿರಲ ಗಿಡ, ತೆಂಗಿನ ಗಿಡ, ನಿಂಬೆ ಗಿಡ, ಕಬ್ಬು ಹೀಗೆ ಹತ್ತಾರು ಬೆಳೆಗಳನ್ನು ಬೆಳೆದು ಆದಾಯದ ದಾರಿ ಕಂಡು ಕೊಂಡಿದ್ದಾರೆ ತಾಲೂಕಿನ ಮುರಕೀಭಾವಿ ಗ್ರಾಮದ ನಿವೃತ್ತ ಸರಕಾರಿ ನೌಕರ ಶಿವಪ್ಪ ಬಸಪ್ಪ ಉಳವಿ.

Advertisement

ಶಿವಪ್ಪ ಮುರಕೀಭಾವಿ ಗ್ರಾಮದ ಬಳಿ ಮಿಶ್ರ ಬೆಳೆ ಬೆಳೆದು ವರ್ಷ ಪೂರ್ತಿ ಆದಾಯ ಕಂಡು ಕೊಂಡಿದ್ದಾರೆ. 2014 ರಲ್ಲಿ ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆಯಿಂದ ನಿವೃತ್ತಿಗೊಂಡ ನಂತರ ಮನೆಯಲ್ಲಿ ಸುಮ್ಮನೆ ಕುಳಿತಕೊಳ್ಳುವುದಕ್ಕೆ ಮನಸ್ಸು ಬಾರದೆ ತಮ್ಮ ಇಳಿ ವಯಸ್ಸಿನಲ್ಲಿ ಕೃಷಿಯತ್ತ ವಾಲಿದರು. 2015 ರಲ್ಲಿ ಒಂದೂವರೆ ಎಕರೆ ಪಾಮ್‌ ಗಿಡ ಬೆಳೆಸಿದ್ದು, ಅದರೊಂದಿಗೆ 1 ಎಕರೆಯಲ್ಲಿ ಮಾವಿನ ಗಿಡ, ಬಳ್ಳೊಳ್ಳಿ ಅರ್ಧ ಎಕರೆ, 7 ಎಕರೆ ಜೋಳ, 6 ಎಕರೆ ಕಡಲೆ, 1 ಎಕರೆ ಸೋಯಾಬೀನ್‌, 3 ಎಕರೆ ಕಬ್ಬು ಬೆಳೆ ಬೆಳೆದಿದ್ದಾರೆ.

ಪಾಮ್‌ ಗಿಡದಿಂದ ಅಡುಗೆ ಮಾಡಲು ಎಣ್ಣೆ ತಯಾರಾಗುತ್ತದೆ. ಪಾಮ್‌ ಗಿಡ ಹಚ್ಚಿದ 30 ವರ್ಷಗಳ ವರೆಗೆ ಬೆಳೆ ಬರುತ್ತದೆ. ಆರಂಭಿಕವಾಗಿ ತಾವು 20,000 ರೂ. ಖರ್ಚು ಮಾಡಿದ್ದು, 15 ದಿನಕ್ಕೊಮ್ಮೆ ಪಾಮ್‌ ಕಟಾವು ಮಾಡುತ್ತೇವೆ. 15 ರೂ. ಗೆ ಒಂದು ಕೆ.ಜಿ ಖರೀದಿ ಮಾಡುತ್ತಾರೆ. ತಿಂಗಳಿಗೆ 10,000 ರೂ. ವರೆಗೆ ಆದಾಯ ಬರುತ್ತಿದೆ. ಗಂಗಾವತಿ ಮೂಲದ ಕಂಪನಿಯವರು ತಮ್ಮ ಹೊಲಕ್ಕೆ ಬಂದು ಪಾಮ್‌ ಹಣ್ಣನ್ನು ಖರೀದಿಸುತ್ತಾರೆಂದು ರೈತ ಶಿವಪ್ಪ ಉಳವಿ ತಿಳಿಸಿದರು.

ಈ ಹಿಂದೆ ರಾಸಾಯನಿಕ ಬಳಕೆಯೊಂದಿಗೆ ಕೃಷಿಯಲ್ಲಿ ಕೈ ಸುಟ್ಟುಕೊಂಡೆನು. ಈಗ ಸಾವಯವ ಮೂಲಕ ಕೃಷಿ ಕೈಗೊಂಡಿದ್ದರಿಂದ ಆದಾಯವೂ ದ್ವಿಗುಣವಾಗುತ್ತಿದೆ. ವರ್ಷದಲ್ಲಿ ಎರಡು ಬೆಳೆ ಕೈಗೊಳ್ಳುವುದರಿಂದ ಆದಾಯ ಅಷ್ಟಕ್ಕಷ್ಟೇ ಬರುತ್ತದೆ. ಅದರೊಂದಿಗೆ ಪಾಮ್‌ನೊಂದಿಗೆ ಮಾವು ಬೆಳೆಯುವದರಿಂದ ನನಗೆ ಆದಾಯ ಕೈಗೆಟುಕುತ್ತಿದೆ. ಬಂದ ಬೆಳೆಯನ್ನು ಸರಾಗವಾಗಿ ಮಾರಾಟ ಮಾಡಬಹುದು ಎನ್ನುತ್ತಾರೆ ಅವರು.

ಮಾವಿನ ಹಣ್ಣಿನ ಮಾರಾಟದಲ್ಲಿ ಉತ್ತಮ ಆದಾಯ ಬರುತ್ತದೆ. ಒಮ್ಮೆ ಗಿಡ ಹಚ್ಚಿ ಜೋಪಾನ ಮಾಡಿದರೆ ಸಾಕು. ವರ್ಷಕ್ಕೊಮ್ಮೆ ಫಲ ಬಿಟ್ಟಾಗ ಹಣ್ಣುಗಳನ್ನು ಮಾರಾಟ ಮಾಡಿ ಆರ್ಥಿಕವಾಗಿ ಸದೃಢವಾಗಬಹುದು. 2021ರಲ್ಲಿ ಬ್ಯಾಡಗಿ ಮೆಣಶಿನಕಾಯಿ ಬೆಳೆ ಬೆಳೆದಿದ್ದು, ಹವಾಮಾನ ವೈಪರೀತ್ಯದಿಂದ ನಷ್ಟವಾಯಿತು. ಆದರೆ ಎದೆಗುಂದದೆ ಕೃಷಿ ಮುಂದುವರೆಸಿದೆ ಎನ್ನುತ್ತಾರೆ ಅವರು.

Advertisement

2022 ರಲ್ಲಿ ಸೋಯಾಬಿನ್‌ ಬೆಳೆಯನ್ನು 7 ಎಕರೆಯಲ್ಲಿ ಬೆಳೆದಿದ್ದೆನು. ಸುಮಾರು 200 ಚೀಲ ಸೋಯಾಬಿನ್‌ ಬಂದಿತ್ತು. ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ 5400 ರೂ. ದರವಿದ್ದು, ಹೆಚ್ಚಿನ ದರ ಸಿಗಲೆಂದು ಸೊಯಾಬಿನ್‌ ಮಾರಾಟ ಮಾಡಿಲ್ಲ
ಎಂದರು.

ರೈತರು ಒಂದೇ ಬೆಳೆಗೆ ಸೀಮಿತವಾಗಬಾರದು. ಆದಾಯ ತರುವ ವಿವಿಧ ಬೆಳೆಗಳನ್ನು ಬೆಳೆದಾಗ ಯಾವುದಾದರೂ ಒಂದರಲ್ಲಿ ಆದಾಯ ಗಳಿಸಬಹುದು. ನಷ್ಟವಾಗುವುದು ಕಡಿಮೆ. ಹೀಗಾಗಿ ಮಿಶ್ರ ಬೆಳೆ ಬೆಳೆಯುವುದು ಉತ್ತಮ. ಹೊಲಕ್ಕೆ ರಾಸಾಯನಿಕ ಅತಿಯಾಗಿ ಬಳಸುವುದರಿಂದ ಭೂಮಿಯ ಫಲವತ್ತತೆ ಹಾಳಾಗುತ್ತದೆ. ಹೀಗಾಗಿ ಕಳೆದ 7 ವರ್ಷಗಳಿಂದ ಸಾವಯವ ಕೃಷಿ ಮಾಡುತ್ತಿದ್ದೇನೆ. ಎರೆಹುಳು ಗೊಬ್ಬರ, ಜೀವಾಮೃತ ತಯಾರಿಸಿ ಬಳಕೆ ಮಾಡುವುದರಿಂದ ಕಡಿಮೆ ಖರ್ಚಿನಲ್ಲಿ ಸಾಕಷ್ಟು ಇಳುವರಿ, ಆದಾಯ ಗಳಿಸಬಹುದೆಂದು ಶಿವಪ್ಪ ಉಳವಿ ತಿಳಿಸಿದರು. ಅವರನ್ನು ಮೊ.9886842335 ಮೂಲಕ ಸಂಪರ್ಕಿಸಬಹುದು.

ಕೃಷಿಯನ್ನು ನಂಬಿ ಬದುಕಿದರೆ ಆರ್ಥಿಕವಾಗಿ ಸದೃಢವಾಗಬಹುದು. ರಾಸಾಯನಿಕ ಬಳಕೆ ಮಾಡದೆ ಸಾವಯವ ಕೃಷಿಗೆ ಹೆಚ್ಚಿನ ಒಲವು ಕೊಡಬೇಕು. ಯುವಕರು ಸರಕಾರಿ ನೌಕರಿ ಸಿಗಲಿಲ್ಲ ಎಂದು ಕೊರಗದೆ ಕೃಷಿಯಲ್ಲಿ ತೊಡಗಿ ಪಾಲಕರಿಗೆ ಸಹಕಾರಿಯಾಬೇಕಿದೆ.
∙ಶಿವಪ್ಪ ಉಳವಿ,
ಮುರಕೀಭಾವಿ ಪ್ರಗತಿಪರ ರೈತ

*ಸಿ.ವೈ.ಮೆಣಶಿನಕಾಯಿ

Advertisement

Udayavani is now on Telegram. Click here to join our channel and stay updated with the latest news.

Next