Advertisement

ಮಿಟ್ಸುಬಿಷಿ ಕಂಪನಿ ಬಂದ್‌: ಕಾರ್ಮಿಕರು ಕಂಗಾಲು

04:16 PM Nov 08, 2022 | Team Udayavani |

ರಾಮನಗರ: ಕಾರ್ಮಿಕರಿಗೆ ಯಾವುದೇ ಮುನ್ಸೂಚನೆ ನೀಡದೆ, ಏಕಾಏಕಿ ಮಿಟ್ಸುಬಿಷಿ ಕಂಪನಿಯನ್ನು ಬಂದ್‌ ಮಾಡಲಾಗಿದ್ದು, ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

Advertisement

ತಾಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವಮಿಟ್ಸುಬಿಷಿ ಎಲೆಕ್ಟ್ರಿಕ್‌ ಇಂಡಿಯಾ ಪ್ರೈ. ಲಿಮಿಟೆಡ್‌ ಕಂಪನಿ ಏಕಾಏಕಿ ಲಾಕ್‌ಔಟ್‌ ಮಾಡಿದ್ದು, ಕಾರ್ಮಿಕರನ್ನು ಅಂತಂತ್ರಗೊಳಿಸಿದ್ದಾರೆ. ಇಲ್ಲಿಂದ ಬೆಮೆಲ್‌, ಮೆಟ್ರೋಗೆ ಅಗತ್ಯವಾದ ಕೆಲ ಎಲೆಕ್ಟ್ರಾನಿಕ್‌ ವಸ್ತುಗಳನ್ನ ಸರಬರಾಜು ಮಾಡುವ ಕಂಪನಿ ಇದಾಗಿತ್ತು. ಪ್ರತಿ ದಿನದಂತೆ ಶುಕ್ರವಾರ 54 ಕಾಯಂ ಕಾರ್ಮಿಕರು ಕೆಲಸ ಮುಗಿಸಿ, ಸಂಜೆ ಮನೆಗೆ ತೆರಳಿದ್ದಾರೆ. ಶನಿವಾರ 54 ಕಾರ್ಮಿಕರ ಬ್ಯಾಂಕ್‌ ಖಾತೆಗೆ ತಲಾ 4 ಲಕ್ಷ ರೂ. ಹಣ ಕಂಪನಿ ಕಡೆಯಿಂದ ಜಮಾವಣೆಯಾಗಿದೆ. ಯಾವಉದ್ದೇಶಕ್ಕಾಗಿ ಹಣ ಬಂದಿದೆ ಎಂದು ವಿಚಾರಿಸಲು ಕಂಪನಿಯ ಎಚ್‌.ಆರ್‌ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೆ, ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಎನ್ನುತ್ತಾರೆ ಉದ್ಯೋಗಿಗಳು.

ಜೊತೆಗೆ ಸೋಮವಾರ ಕಾರ್ಮಿಕರನ್ನು ಪಿಕಪ್‌ ಮಾಡಲು ಕಂಪನಿಯಿಂದ ಕ್ಯಾಬ್‌ ಕೂಡ ಬಂದಿರಲಿಲ್ಲ. ಅದಕ್ಕಾಗಿ ಎಲ್ಲರೂ ತಮ್ಮ ತಮ್ಮ ವಾಹನಗಳಲ್ಲೇ ಕಂಪನಿಗೆ ಆಗಮಿಸಿದ್ದಾರೆ. ಆದರೆ, ಕಾರ್ಮಿಕರು ಒಳ ಬರುತ್ತಿದ್ದಂತೆ ಗೇಟ್‌ನಿಂದ ಒಳಗೆ ಬಿಡದ ಭದ್ರತಾಸಿಬ್ಬಂದಿ, ಗೇಟ್‌ ಲಾಕ್‌ ಮಾಡಿ, ಎಲ್ಲರನ್ನೂ ಹೊರಗೆ ಕಳುಹಿಸಿದ್ದಾರೆ ಎನ್ನಲಾಗಿದೆ.

ಕಾರ್ಮಿಕರು ಕಂಗಾಲು: ನಮ್ಮ ಪೂರ್ವಾನುಮತಿಯಿಲ್ಲದೆ ಯಾವುದೇ ವ್ಯಕ್ತಿಗಳು ಕಂಪನಿಯ ಆವರಣಕ್ಕೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ ಎಂಬುದಾಗಿ ಗೇಟ್‌ ಬಳಿ ಕಂಪನಿ ವತಿಯಿಂದ ನೋಟಿಸ್‌ ಅಂಟಿಸಲಾಗಿದೆ. ಇದನ್ನು ಕಂಡ ಕಾರ್ಮಿಕರು ಕಂಗಾಲಾಗಿದ್ದು, ದಿಕ್ಕುಕಾಣದಂತಾಗಿದೆ. ಇದು ಪ್ರತಿಷ್ಠಿತ ಕಂಪನಿಗಳಲ್ಲೊಂದಾಗಿದ್ದು, ಈ ಕಂಪನಿಯಲ್ಲಿ ಬೆಳಗಾವಿ, ಬಿಜಾಪುರ, ಮಂಡ್ಯ, ಹಾಸನ ಸೇರಿ ಹಲವು ಹೊರ ಜಿಲ್ಲೆಗಳಿಂದ ಬಂದು ಕೆಲಸಕ್ಕೆ ಸೇರಿದ್ದ ಕಾರ್ಮಿಕರು ದುಡಿಯುತ್ತಿದ್ದರು.

ಆದರೆ, ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಲಾಕ್‌ಔಟ್‌ ಮಾಡಿರುವುದನ್ನ ನೋಡಿ ಕಾರ್ಮಿಕರಿಗೆ ಆಘಾತವಾಗಿದೆ. ಸೋಮವಾರ ಸಂಜೆ ವೇಳೆಗೆ ಕಂಪನಿಪರವಾಗಿ ಅಧಿಕಾರಿಗಳು ಬಂದು ಮಾತನಾಡುವುದಾಗಿ ಕಾರ್ಮಿಕರಿಗೆ ಸೂಚಿಸಲಾಗಿತ್ತು. ಆದರೂ, ಮಾತುಕತೆಗೆ ಯಾವೊಬ್ಬ ಅಧಿಕಾರಿಗಳು ಬಂದಿಲ್ಲ ಎಂದು ತಿಳಿದು ಬಂದಿದೆ.

Advertisement

ಯಾವುದೇ ಮುನ್ಸೂಚನೆ ನೀಡಿಲ್ಲ:  ನಮ್ಮ ಬದುಕು ಕಟ್ಟಿಕೊಳ್ಳಬೇಕೆಂಬ ಮಹದಾಸೆಯಿಂದ ಕಂಪನಿಯಲ್ಲಿ ಸೇರಿದ್ದೆವು. ಆದರೆ, ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಬಂದ್‌ ಮಾಡಿ, ನಮ್ಮ ಹೊಟ್ಟೆ ಮೇಲೆ ಹೊಡೆಯುವ ಹುನ್ನಾರ ನಡೆಸಿದ್ದಾರೆ. ಕಂಪನಿಯಲಾಕ್‌ಔಟ್‌ ನಿರ್ಧಾರಕ್ಕೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಅದೇನೇ ಇದ್ದರೂ,ನಮಗೆ ನ್ಯಾಯ ಸಿಗಬೇಕು. ಕಂಪನಿಯಲ್ಲಿ ಕೆಲಸ ಬೇಕು ಎಂದು ಕಂಪನಿಯ ನೊಂದ ಕಾರ್ಮಿಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next