ನವದೆಹಲಿ: ಭಾರತ ವನಿತಾ ನಾಯಕಿ ಮಿಥಾಲಿ ರಾಜ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಗಳಿಗೆ ಬುಧವಾರ (ಜೂನ್ 8) ನಿವೃತ್ತಿ ಘೋಷಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ ಮಿಥಾಲಿ, “ಇಂದು ನಾನು ಎಲ್ಲಾ ರೀತಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ದಿನ” ಎಂದು ಬರೆದಿದ್ದಾರೆ.
39 ರ ಹರೆಯದ ಭಾರತೀಯ ಟೆಸ್ಟ್ ಮತ್ತು ಏಕದಿನ ತಂಡದ ನಾಯಕಿ ಮಿಥಾಲಿ 1999 ರಲ್ಲಿ ಪಾದಾರ್ಪಣೆ ಮಾಡಿದ್ದರು. 23 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಅಂತಾಷ್ಟ್ರೀಯ ವೃತ್ತಿಜೀವನದಲ್ಲಿ 232 ಏಕದಿನ , 89 ಟಿ 20 ಮತ್ತು 12 ಟೆಸ್ಟ್‌ಗಳಲ್ಲಿ ಆಡಿದ್ದಾರೆ.
ಇಷ್ಟು ವರ್ಷ ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು! ನಿಮ್ಮ ಆಶೀರ್ವಾದ ಮತ್ತು ಬೆಂಬಲದೊಂದಿಗೆ ನನ್ನ 2ನೇ ಇನ್ನಿಂಗ್ಸ್‌ಗಾಗಿ ಎದುರು ನೋಡುತ್ತಿದ್ದೇನೆ . ಭಾರತ ತಂಡವು ಕೆಲವು ಪ್ರತಿಭಾವಂತ ಯುವ ಆಟಗಾರರ ಸಮರ್ಥ ಕೈಯಲ್ಲಿದೆ ಮತ್ತು ಭಾರತೀಯ ಕ್ರಿಕೆಟ್‌ನ ಭವಿಷ್ಯವು ಉಜ್ವಲವಾಗಿದೆ. ನನ್ನ ವೃತ್ತಿಜೀವನಕ್ಕೆ ತೆರೆ ಎಳೆಯಲು ಇದು ಸೂಕ್ತ ಸಮಯ ಎಂದು ನಾನು ಭಾವಿಸುತ್ತೇನೆ.ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ.
ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಏಕದಿನ ಪಂದ್ಯಗಳಲ್ಲಿ 7 ಶತಕಗಳು ಮತ್ತು 64 ಅರ್ಧಶತಕಗಳೊಂದಿಗೆ 7805 ರನ್‌ಗಳನ್ನು,ಟಿ 20 ಯಲ್ಲಿ 17 ಅರ್ಧಶತಕಗಳೊಂದಿಗೆ 2,364 ರನ್‌ಗಳು ಮತ್ತು ಟೆಸ್ಟ್ ನಲ್ಲಿ 699 ರನ್‌ಗಳನ್ನು ಗಳಿಸಿದ್ದಾರೆ.
ಮಿಥಾಲಿ ರಾಜ್ 3 ಡಿಸೆಂಬರ್ 1982 ರಂದು ರಾಜಸ್ಥಾನದ ಜೋಧ್‌ಪುರದಲ್ಲಿ ತಮಿಳು ಕುಟುಂಬದಲ್ಲಿ ಜನಿಸಿದ್ದರು. ಅವರ ತಂದೆ ದೊರೈ ರಾಜ್ ಭಾರತೀಯ ವಾಯುಪಡೆಯಲ್ಲಿ ವಾರೆಂಟ್ ಅಧಿಕಾರಿಯಾಗಿದ್ದರು, ತಾಯಿ ಲೀಲಾ ರಾಜ್. 10 ನೇ ವಯಸ್ಸಿನಲ್ಲಿ ಆಟವನ್ನು ಆಡಲು ಪ್ರಾರಂಭಿಸಿ ವನಿತಾ ಕ್ರಿಕೆಟ್ ನ ಸಾಧಕಿಯರಲ್ಲಿ ಒಬ್ಬರಾಗಿದ್ದಾರೆ. ಪದ್ಮಶ್ರೀ, ಅರ್ಜುನ ಮೊದಲಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಹೊಸ ಬಾಳಿಗೆ ಕಾಲಿರಸಲಿದ್ದಾರೆಯೇ ಮಿಥಾಲಿ?
ಅವಿವಾಹಿತೆಯಾಗಿರುವ ಮಿಥಾಲಿ ರಾಜ್, ಎರಡನೇ ಇನ್ನಿಂಗ್ಸ್ ಆರಂಭಿಸುವ ಕುರಿತು ಹೇಳಿಕೊಂಡಿದ್ದು, ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆಯೇ ಎನ್ನುವ ಕುರಿತು ಪ್ರಶ್ನೆಗಳು ಮೂಡಿವೆ. ನೀವು ಮದುವೆಯ ಬಗ್ಗೆ ಯೋಚಿಸಲಿಲ್ಲವೇ ಎಂದು ಹಿಂದೊಮ್ಮೆ ಮಿಥಾಲಿಯನ್ನು ಕೇಳಿದಾಗ, ನಗುತ್ತಾ ಉತ್ತರಿಸಿದ್ದ ಅವರು, ನಾನು ಚಿಕ್ಕವಳಿದ್ದಾಗ ಅದು ನೆನಪಿಗೆ ಬಂದಿತ್ತು. ಆದರೆ ಈಗ ಮದುವೆಯಾದವರನ್ನು ಕಂಡರೆ ನನಗೆ ಮದುವೆಯಾಗಲು ಮನಸ್ಸಾಗುತ್ತಿಲ್ಲ ಎಂದಿದ್ದರು.