ಬೆಂಗಳೂರು: “ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತ್ಯಾಜ್ಯ ಸಂಸ್ಕರಣಾ ಘಟಕಗಳ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿಗೆ ಬಿಡುಗಡೆಯಾದ 98.20 ಕೋಟಿ ರೂ. ವಿಶೇಷ ಅನುದಾನದ ಬಹುಪಾಲು ಹಣವನ್ನು ಶಾಸಕ ಎಸ್.ಟಿ ಸೋಮಶೇಖರ್ ಅವರು ತಾವು ಅಭಿವೃದ್ಧಿಪಡಿಸಿರುವ ನಿವೇಶನಗಳ ಮೌಲ್ಯ ಹೆಚ್ಚಿಸಿಕೊಳ್ಳುವ ಕಾಮಗಾರಿಗಳಿಗೆ ಬಳಿಸಿಕೊಂಡಿದ್ದಾರೆ,’ ಎಂದು ಬಿಜೆಪಿ ನಗರ ಜಿಲ್ಲೆ ವಕ್ತಾರ ಎನ್.ಆರ್.ರಮೇಶ್ ದೂರಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಯಶವಂತಪುರ ಕ್ಷೇತ್ರ ವ್ಯಾಪ್ತಿಯಲ್ಲಿನ ಕನ್ನಹಳ್ಳಿ, ಸೀಗೇಹಳ್ಳಿ, ಸುಬ್ಬರಾಯನಪಾಳ್ಯ ಹಾಗೂ ಲಿಂಗಧೀರನಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕಗಳ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿಗೆ 2015-16 ಹಾಗೂ 2016-17ನೇ ಸಾಲಿನಲ್ಲಿ 98.20 ಕೋಟಿ ರೂ. ಬಿಡುಗಡೆಯಾಗಿದೆ. ಇದರಲ್ಲಿ ಶೇ.90ರಷ್ಟು ಅನುದಾನವು ಬೇರೆ ಪ್ರದೇಶಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಈ ಮೂಲಕ ಶಾಸಕರು ಅಕ್ರಮ ನಡೆಸಿದ್ದಾರೆ,’ ಎಂದು ದೂರಿದರು.
“ಸರ್ಕಾರ ಬಿಡುಗಡೆ ಮಾಡಿದ ಅನುದಾನವನ್ನು ತಾವು ಅಭಿವೃದ್ಧಿಪಡಿಸಿರುವ ಬಡಾವಣೆಗಳಲ್ಲಿನ ನಿವೇಶನಗಳ ಮೌಲ್ಯ ಹೆಚ್ಚಿಸಿಕೊಳ್ಳುವ ಸಲುವಾಗಿ ಸೋಮಶೇಖರ್ ದುರ್ಬಳಕೆ ಮಾಡಿಕೊಂಡಿದ್ದಾರೆ,’ ಎಂದು ಹೇಳಿದರು. “ತಾವೇ ನಿರ್ಮಿಸಿರುವ ಖಾಸಗಿ ಬಡಾವಣೆಗಳ ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿಗೆ ಸರ್ಕಾದ ಅನುದಾನ ಬಳಸಿ ದುರ್ಬಳಕೆ ಮಾಡಿಕೊಳ್ಳುವ ಜತೆಗೆ ತಮ್ಮ ಸಂಬಂಧಿಗಳು ಹಾಗೂ ಹಿಂಬಾಲಕರಿಗೆ ಕೆಆರ್‌ಐಡಿಎಲ್‌ನಿಂದ ಉಪಗುತ್ತಿಗೆಯನ್ನೂ ಕೊಡಿಸಿದ್ದಾರೆ.
ಈಗಾಗಲೇ ಕೆಆರ್‌ಐಡಿಎಲ್ ಸಂಸ್ಥೆಯಿಂದ 38 ಕೋಟಿ ರೂ. ಬಿಡುಗಡೆಯಾಗಿದೆ. ಹಾಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ದುರ್ಬಳಕೆ ಸಂಬಂಧ ಶಾಸಕ ಎಸ್.ಟಿ.ಸೋಮಶೇಖರ್, ಕೆಲ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕೆಲ ನ್ಯಾಯಾಲಯಗಳಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ,’ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಯಾರಾದರೂ ಬ್ಲಾಕ್ ಮೇಲರ್ ಇದ್ದರೆ ಅದು ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಮಾತ್ರ. ಅವರ ಆರೋಪದಂತೆ ನನ್ನ ಕ್ಷೇತ್ರದಲ್ಲಿ ಕಾನೂನು ವ್ಯಾಪ್ತಿ ಮೀರಿ ಕಾಮಗಾರಿಗಳನ್ನು ಕೈಗೊಂಡಿರುವುದು ಸಾಬೀತಾದರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಈ ಮೂಲಕ ಬಹಿರಂಗ ಪಂಥಾಹ್ವಾನ ನೀಡುತ್ತಿದ್ದೇನೆ. ಯಾವುದೇ ಅಕ್ರಮಗಳ ಬಗ್ಗೆ ದಾಖಲೆಗಳು ಇದ್ದರೆ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ಹಿಟ್ ಅಂಡ್ ರನ್ ಬೇಡ. ಸುಳ್ಳು ಸುದ್ದಿಗಳನ್ನು ಹಬ್ಬಿಸುವುದನ್ನು ರಮೇಶ್ ತಕ್ಷಣವೇ ನಿಲ್ಲಿಸಲಿ
-ಎಸ್.ಟಿ.ಸೋಮಶೇಖರ್, ಯಶವಂತಪುರ ಶಾಸಕ