ಬೆಂಗಳೂರು: ಪೌರತ್ವ ತಿದ್ದುಪಡಿ ಕುರಿತು ಕಾಂಗ್ರೆಸ್ ತಪ್ಪು ಮಾಹಿತಿ ನೀಡಿ ಗಲಭೆ ಸೃಷ್ಟಿಸುತ್ತಿದ್ದು ಈ ಕುರಿತು ಜನರಿಗೆ ಸತ್ಯ ಸಂಗತಿ ತಿಳಿಸಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷರಾದ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು. ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ರಾಜ್ಯ ಮಟ್ಟದ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕಗ್ಗೊಲೆ: ಕಾಂಗ್ರೆಸ್ ಯಾವಾಗೆಲ್ಲಾ ಅಧಿಕಾರಕ್ಕೆ ಬರುತ್ತದೆಯೋ ಆಗೆಲ್ಲಾ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದೆ. 1947ರಲ್ಲಿ ಸ್ವಾತಂತ್ರ್ಯ ಬಂದಾಗ ವಿಭಜನೆ ಶುರುವಾಯಿತು. ಮೊದಲಿಗೆ ವಂದೇ ಮಾತರಂ ಗೀತೆ ವಿಭಜಿಸಲಾಯಿತು. ಪಾಕಿಸ್ತಾನವನ್ನು ಭಾರತದಿಂದ ಇಬ್ಭಾಗ ಮಾಡಿ ದೇಶವನ್ನು ತುಂಡು ಮಾಡಿದ್ದೇ ಈ ರೀತಿಯ ಬೆಳವಣಿಗೆಯಾಗಲು ಹಾಗೂ ಕಾಯ್ದೆಗೆ ತಿದ್ದುಪಡಿ ತರಲು ಕಾರಣ ಎಂದು ಹೇಳಿದರು.
ವಿರೋಧವೇಕೆ: ಸ್ವಾತಂತ್ರ್ಯ ನಂತರ ದೇಶ ಇಬ್ಭಾಗಕ್ಕೂ ಕಾಂಗ್ರೆಸ್ ಕಾರಣ. ಸ್ವಾತಂತ್ರ್ಯ ನಂತರ ನೆಹರು ಕೈಗೊಂಡಿರುವ ತೀರ್ಮಾನ ದೇಶವನ್ನು ಜಾತ್ಯತೀತ ರಾಷ್ಟ್ರವೆಂದು ಮಾಡಿವೆ. ಪಾಕಿಸ್ತಾನ ಮುಸ್ಲಿಂ ರಾಷ್ಟ್ರವೆಂದು ಘೋಷಿಸಿಕೊಂಡಿದೆ. ದೇಶದಲ್ಲಿನ ಅಲ್ಪಸಂಖ್ಯಾತರಿಗೆ ಎಲ್ಲಾ ಸ್ಥಾನಮಾನ ನೀಡಲಾಗಿದೆ. ದೇಶದ ಅತ್ಯುನ್ನತ ರಾಷ್ಟ್ರಪತಿ ಸ್ಥಾನ ಸೇರಿದಂತೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ, ಸ್ಪೀಕರ್, ಮುಖ್ಯಮಂತ್ರಿ ಸ್ಥಾನ ನೀಡಿದ್ದು, ಯಾವ ಬಹುಸಂಖ್ಯಾತರೂ ಇದಕ್ಕೆ ವಿರೋಧ ಮಾಡಿಲ್ಲ. ಹೀಗಿರುವಾಗ ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರಿಗೆ ಭಾರತದಲ್ಲಿ ಪೌರತ್ವ ನೀಡಿದರೆ ವಿರೋಧವೇಕೆ ಎಂಬ ಪ್ರಶ್ನೆ ಕೇಳಬೇಕಾಗುತ್ತದೆ ಎಂದು ತಿಳಿಸಿದರು.
ನಂಬಿ ಬಂದವರು, ಆಶ್ರಯ ಬಯಸಿ ಬಂದವರಿಗೆ ರಕ್ಷಣೆ ನೀಡಿದ ರಾಷ್ಟ್ರ ಭಾರತ. ಹೀಗಾಗಿ ಭಾರತದ ಬಂಧುಗಳೇ ಆಗಿರುವ ಪಾಕಿಸ್ತಾನ, ಬಾಂಗ್ಲಾದಲ್ಲಿ ದಾಳಿಗೆ ಗುರಿಯಾಗಿ ದೇಶಕ್ಕೆ ಬಂದವರಿಗೆ ಪೌರತ್ವ ನೀಡುವುದರಲ್ಲಿ ತಪ್ಪೇನು. ಇದನ್ನು ವಿರೋಧಿಸಿ ನಡೆಯುತ್ತಿರುವ ಗಲಭೆಗೆ ರಾಜಕಾರಣ ಮನಸ್ಸು ಕಾರಣವೆಂದರು. ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ರದ್ಧತಿ, ಅಯೋಧ್ಯೆ ವಿವಾದವನ್ನು ಸುಪ್ರೀಂ ಕೋರ್ಟ್ ತೀರ್ಪಿನಿಂದಲೇ ಪರಿಹರಿಸಿಕೊಳ್ಳುವ ಕಾರ್ಯವನ್ನು ಕೇಂದ್ರ ಮಾಡಿದೆ.
ಅಲ್ಲದೇ, ಪೌರತ್ವ ತಿದ್ದುಪಡಿ ಕಾಯ್ದೆಗೆ ಮತ ಹಾಕಿ ಅನುಮೋದನೆಯಾದ ಬಗ್ಗೆ ಹೆಮ್ಮೆ ಇದೆ. ತನ್ನ ಹಿಂದಿನ 2 ಅವಧಿಗಿಂತ 3ನೇ ಅವಧಿ ಹೆಚ್ಚು ಹೆಮ್ಮೆ ತಂದಿದೆ ಎಂದು ತಿಳಿಸಿದರು. ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಸೋಮವಾರದವರೆಗೆ ಮಂಗಳೂರು ಘಟನೆಗೆ ಬಿಜೆಪಿ ಕಾರಣ ಎಂದು ಆರೋಪಿಸುತ್ತಿದ್ದ ಕಾಂಗ್ರೆಸ್‌ನವರಿಗೆ ಗಲಭೆ ನಡೆದ ದಿನದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯಿಂದ ಎಲ್ಲದಕ್ಕೂ ಉತ್ತರ ಸಿಕ್ಕಿದೆ. ಗಲಭೆಗೆ ಪೊಲೀಸರು ಇಲ್ಲವೇ ಸರ್ಕಾರ ಕಾರಣವಲ್ಲ. ಬದಲಿಗೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಗೂಂಡಾಗಳೇ ಕಾರಣ ಎಂಬುದು ಸಾಬೀತಾಗಿದೆ ಎಂದರು.
ಇನ್ನೆಷ್ಟು ಸಾವಾಗಬೇಕು?: ಕಾಂಗ್ರೆಸ್ಸಿಗರೇ, ರಾಜ್ಯದಲ್ಲಿ ನಿಮಗೆ ಶಾಂತಿ ಬೇಡವೆ. ಕಾಯ್ದೆಯಿಂದ ಮುಸ್ಲಿಮರಿಗೆ ಅನ್ಯಾಯವಾಗಲಿದೆ ಎಂದು ದಾರಿ ತಪ್ಪಿಸಿ ಗಲಭೆ ಮಾಡಿಸುತ್ತಿದ್ದೀರಲ್ಲ ಇದು ನ್ಯಾಯವೇ. ಕಾಯ್ದೆ ದುರುಪಯೋಗಪಡಿಸಿಕೊಂಡು ಗಲಭೆ ಸೃಷ್ಟಿಸಿ ಎರಡು ಸಾವಾಯಿತು. ರಾಜ್ಯದಲ್ಲಿ ಇನ್ನೆಷ್ಟು ಸಾವಾಗಬೇಕು ಎಂದು ಪ್ರಶ್ನಿಸಿದರು.
ಕುತಂತ್ರ ರಾಜಕಾರಣ: ಪ್ರಧಾನಿ ನರೇಂದ್ರ ಮೋದಿಯವರ ಕರೆಯಂತೆ ಹಿಂದೂ- ಮುಸ್ಲಿಮರೆಲ್ಲಾ ಬ್ರಾತೃತ್ವದಿಂದ ಬಾಳಲು ಮುಂದಾಗುತ್ತಿರುವಾಗ ಕಾಂಗ್ರೆಸ್, ಮುಸ್ಲಿಮರನ್ನು ಹಿಡಿದಿಟ್ಟುಕೊಳ್ಳಲು ಕುತಂತ್ರ ರಾಜಕಾರಣ ಮಾಡುತ್ತಿದೆ. ಇದು ಯಶಸ್ವಿಯಾಗುವುದಿಲ್ಲ. ಮುಸ್ಲಿಮರೂ ತಿಳಿವಳಿಕೆಯಿಂದ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಮುಸ್ಲಿಮರಿಗೆ, ಸಾಮಾನ್ಯರಿಗೆ ಅರ್ಥವಾದ ಮೇಲೆ ಕಾಂಗ್ರೆಸ್ ದೇಶ ಹಾಗೂ ರಾಜ್ಯದಿಂದ ನಿರ್ನಾಮವಾಗಲಿದೆ ಎಂದು ಹೇಳಿದರು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಮಹೇಶ್ ಟೆಂಗಿನಕಾಯಿ, ಶಾಸಕ ಪಿ.ರಾಜೀವ್ ಉಪಸ್ಥಿತರಿದ್ದರು.
ಈಗಿರುವವರೆಲ್ಲಾ ನಕಲಿ ಗಾಂಧಿಗಳು: ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಕಾಂಗ್ರೆಸ್‌ನ “ಮನಮೋಹನ್ ಗಾಂಧಿ’ ಅವರು ಪೌರತ್ವ ಕಾಯ್ದೆ ತಿದ್ದುಪಡಿ ಅಗತ್ಯವಿದೆ ಎಂದು ಹೇಳಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ಹೇಳಿದರು. ಆಗ ಸಭಿಕರು, ಹಿರಿಯರು “ಮನಮೋಹನ್ ಸಿಂಗ್’ ಎಂದು ಸರಿಪಡಿಸಿದರು. ಬಳಿಕ ನಿರ್ಮಲ್ ಕುಮಾರ್ ಸುರಾನ, ಈಗಿರುವವರೆಲ್ಲಾ ನಕಲಿ ಗಾಂಧಿಗಳು. ಇವರೆಲ್ಲಾ ಗಾಂಧಿ ಎಂದು ಹೆಸರಿಟ್ಟುಕೊಳ್ಳುವ ಬದಲು ಖಾನ್ ಎಂದು ಹೆಸರಿಟ್ಟುಕೊಳ್ಳಬೇಕಿತ್ತು ಎಂದು ಕುಟುಕಿದರು.