ಕೊಪ್ಪಳ: ನಾಡಿನ ಪ್ರಸಿದ್ಧ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಕೊಡುಗೈ ದಾನಿಗಳೇ ಮಿಗಿಲಾಗಿದ್ದಾರೆ. ದಾಸೋಹಕ್ಕೆ ನಾ ಮುಂದು ತಾ ಮುಂದು ಎಂದು ಕೈ ಮೇಲೆ ಮಾಡುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಜಾತ್ರೆಯ ಎರಡನೇ ದಿನ ಕೊಪ್ಪಳ ಗೆಳೆಯರ ಬಳಗವು ಬರೊಬ್ಬರಿ 25 ಕ್ವಿಂಟಲ್ ಹಿಟ್ಟು ಬಳಸಿ ಭಕ್ತರ ಸಮೂಹಕ್ಕೆ ಸುಮಾರು 3.50 ಲಕ್ಷ ಮಿರ್ಚಿ ಸೇವೆ ಅರ್ಪಿಸುತ್ತಿದ್ದು, ನಾಡಿನ ಗಮನ ಸೆಳೆದಿದೆ.
ಗೆಳೆಯರ ಬಳಗ ಪ್ರತಿ ವರ್ಷದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಲಕ್ಷ ಲಕ್ಷ ಭಕ್ತರಿಗೆ ದಾಸೋಹದಲ್ಲಿ ಬಿಸಿ ಬಿಸಿ ಮಿರ್ಚಿ ಸೇವಾ ಕಾರ್ಯವನ್ನು ಕಳೆದ ಐದು ವರ್ಷದಿಂದಲೂ ಮುನ್ನಡೆಸಿಕೊಂಡು ಬಂದಿದೆ. ಅವರ ಸೇವೆ ಈ ವರ್ಷದ ಜಾತ್ರೆಯ ಮಹಾ ದಾಸೋಹದಲ್ಲೂ ಮುಂದುವರಿದಿದೆ. ಸ್ವತಃ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳೇ ದಾಸೋಹ ಭವನದಲ್ಲಿ ಬಾಣಸಿಗರೊಂದಿಗೆ ತಯಾರಿಸುವ ಮೂಲಕ ಮಿರ್ಚಿ ಸೇವಾ ಕಾರ್ಯಕ್ಕೆ ಚಾಲನೆ ನೀಡಿ ಸೇವಾ ದಾನಿಗಳಿಗೆ ಪ್ರೋತ್ಸಾಹಿಸಿದ್ದಾರೆ.
ಕೊಪ್ಪಳದ ಮಂಜುನಾಥ ಶೆಟ್ಟರ್, ರಮೇಶ ತುಪ್ಪದ, ಹುಲಗಪ್ಪ ಕಟ್ಟಿಮನಿ, ಸಂತೋಷ ದೇಶಪಾಂಡೆ ಸೇರಿ 50 ಗೆಳೆಯರ ಬಳಗ ಜಾತ್ರೆಯ ಎರಡನೇ ದಿನ ಸೋಮವಾರ ಬೆಳಗ್ಗೆ 4 ಗಂಟೆಯಿಂದಲೇ ಮಿರ್ಚಿ ಸೇವೆ ಆರಂಭಿಸಿದ್ದು, ಆ ದಿನ ಮಧ್ಯರಾತ್ರಿ 12 ಗಂಟೆವರೆಗೂ ನಿರಂತರ ಮಿರ್ಚಿ ಸೇವೆ ನಡೆಯಲಿದೆ. ಒಂದು ದಿನ ಎಷ್ಟೇ ಖರ್ಚಾದರೂ ಸಹಿತ ಅದೆಲ್ಲವನ್ನು ಈ ಗೆಳೆಯರ ಬಳಗ ಭರಿಸುತ್ತದೆ. ಮಹಾ ದಾಸೋಹದಲ್ಲಿ ಇದೊಂದು ಸಣ್ಣ ಸೇವಾ ಕಾರ್ಯ ಎಂದು ಭಕ್ತರಿಗೆ ಬಿಸಿ ಮಿರ್ಚಿ ಸೇವೆ ಕಲ್ಪಿಸುತ್ತಿದೆ.
25-30 ಕ್ವಿಂಟಲ್ ಹಿಟ್ಟು ಬಳಕೆ: ಮಹಾ ದಾಸೋಹದಲ್ಲಿ ಬರೊಬ್ಬರಿ 25ರಿಂದ 30 ಕ್ವಿಂಟಲ್ ಕಡಲೆ ಹಿಟ್ಟು ಬಳಕೆ ಮಾಡಲಾಗುತ್ತಿದ್ದು, ಸಂಜೆವರೆಗೂ 25 ಕ್ವಿಂಟಲ್ ಹಿಟ್ಟು ಬಳಕೆಯಾಗಿದೆ. ಮಧ್ಯರಾತ್ರಿ 12:00 ಗಂಟೆವರೆಗೂ 5 ಕ್ವಿಂಟಲ್ ಹಿಟ್ಟು ಬಳಕೆಯಾಗಬಹುದೆಂಬ ಲೆಕ್ಕಾಚಾರ ಹಾಕಲಾಗಿದೆ. ಈ ಹಿಟ್ಟಿಗೆ 10 ಬ್ಯಾರಲ್ ಒಳ್ಳೆಣ್ಣೆ, 17 ಕ್ವಿಂಟಲ್ ಹಸಿ ಮೆಣಸಿನಕಾಯಿ, 50 ಕೆಜಿ ಅಜಿವಾನ, 50 ಕೆಜಿ ಸೋಡಾಪುಡಿ, 50 ಕೆಜಿ ಉಪ್ಪು, 45 ಸಿಲಿಂಡರ್ ಬಳಕೆ ಮಾಡಲಾಗಿದೆ. ಇದು ಸಂಜೆಯ ಅಂಕಿ-ಅಂಶ, ರಾತ್ರಿವರೆಗೂ ಇದರ ವೆಚ್ಚ ಇನ್ನಷ್ಟು ಹೆಚ್ಚಾಗಲಿದೆ.
500 ಬಾಣಸಿಗರಿಂದ ಮಿರ್ಚಿ ಕಾರ್ಯ: ಮಹಾ ದಾಸೋಹ ಭವನಕ್ಕೆ ಊಟದ ಸವಿರುಚಿ ನೋಡಲು ಆಗಮಿಸುವ ಭಕ್ತ ಸಮೂಹಕ್ಕೆ ಆ ಕ್ಷಣವೇ ಬಿಸಿ ಬಿಸಿ ಮಿರ್ಚಿ ನೀಡಲು ಹಸಿ ಮೆಣಸಿನಕಾಯಿ ಸ್ವತ್ಛ ಮಾಡುವ ಮಹಿಳೆಯರು ಸೇರಿ 400-500 ಬಾಣಸಿಗರನ್ನು ಬಳಸಿಕೊಳ್ಳಲಾಗಿದೆ. ಇವರೆಲ್ಲರೂ ಮಹಾ ದಾಸೋಹ ಭವನದಲ್ಲಿ ಬಿಟ್ಟೂ ಬಿಡದೇ ಮಿರ್ಚಿ ಕರಿಯುತ್ತಿದ್ದಾರೆ. ಇದಕ್ಕೆ ಗೆಳೆಯರ ಬಳಗ ಸಾಥ್ ನೀಡಿ ಅವರಿಗೆ ಇನ್ನಷ್ಟು ಪ್ರೇರೇಪಿಸುತ್ತಿದ್ದಾರೆ. ನಾಡಿನ ಯಾವ ಜಾತ್ರಾ ಮಹೋತ್ಸವದಲ್ಲಿ ಇಲ್ಲದ ಮಿರ್ಚಿ ಸೇವೆಯನ್ನು ಕೊಪ್ಪಳದ ಜಾತ್ರೆಯ ದಾಸೋಹ ಭವನದಲ್ಲಿ ನೋಡಬಹುದಾಗಿದೆ.
ಬಗೆ ಬಗೆಯ ಭಕ್ಷ್ಯ ಭೋಜನ
ಮಹಾ ದಾಸೋಹದಲ್ಲಿ ಬಗೆ ಬಗೆಯ ಭಕ್ಷ್ಯ ಭೋಜನವೇ ಭಕ್ತರಿಗೆ ಲಭಿಸುತ್ತದೆ. ಲಕ್ಷಗಟ್ಟಲೆ ಶೇಂಗಾ ಹೋಳಿಗೆ, ಕ್ವಿಂಟಲ್ ಗಟ್ಟಲೇ ಮಾದಲಿ, ಲಡ್ಡು, ಕರ್ಚಿಕಾಯಿ ಸೇರಿದಂತೆ ನಾನಾ ಬಗೆಯ ತಿಂಡಿ, ತಿನಿಸುಗಳನ್ನು ಸಾವಿರಾರು ದಾನಿಗಳು ಶ್ರೀಮಠದ ದಾಸೋಹಕ್ಕೆ ಅರ್ಪಿಸಿ ಭಕ್ತರಿಗೆ ಉಣ ಬಡಿಸುತ್ತಿದ್ದಾರೆ.
ನಾನು ಹಲವಾರು ಜಾತ್ರೆಗಳನ್ನು ನೋಡಿದ್ದೇನೆ. ಆದರೆ ಕೊಪ್ಪಳದ ಅಜ್ಜನ ಜಾತ್ರೆಯ ದಾಸೋಹದಲ್ಲಿ ಬಗೆ ಬಗೆಯ ಖಾದ್ಯವಿರುತ್ತದೆ. ಇಂದು ಯಾರೋ
ಪುಣ್ಯಾತ್ಮರು ಮಿರ್ಚಿ ಸೇವೆ ಅರ್ಪಿಸಿದ್ದಾರೆ. ಬಿಸಿ ಬಿಸಿ ಮಿರ್ಚಿಯನ್ನು ಭಕ್ತರಿಗೆ ಉಣ ಬಡಿಸಿದ್ದಾರೆ. ಅವರ ಸೇವೆ ನಿಜಕ್ಕೂ ಇತರೆ ದಾನಿಗಳಿಗೆ ಪ್ರೇರಣೆಯಾಗಿದೆ. ಶ್ರೀ ಗವಿಸಿದ್ದೇಶ್ವರ ಮಹಾ ಸ್ವಾಮೀಜಿ ಅವರು ಪವಾಡ ಮಾಡುತ್ತಿದ್ದಾರೆ.
*ರಂಗನಾಥ, ಜಾತ್ರೆಗೆ ಬಂದ ಭಕ್ತ.
ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ 2ನೇ ದಿನದಂದು ಪ್ರತಿ ವರ್ಷ ನಮ್ಮ ಗೆಳೆಯರ ಬಳಗದಿಂದ ಮಿರ್ಚಿ ಸೇವೆ ಮಾಡುತ್ತಿದ್ದು, ಈ ವರ್ಷವೂ ಸೇವೆ ಮುಂದುವರಿಸಿದ್ದೇವೆ. 25-30 ಕ್ವಿಂಟಲ್ ಹಿಟ್ಟು ಬಳಕೆ, 10 ಬ್ಯಾರಲ್ ಎಣ್ಣೆ, 17-18 ಕ್ವಿಂಟಲ್ ಹಸಿ ಮೆಣಸಿನಕಾಯಿ ಸೇರಿ ವಿವಿಧ ಪದಾರ್ಥ ವ್ಯಯಿಸಿ ಮಿರ್ಚಿ ಸೇವೆ ಮಾಡುತ್ತಿದ್ದೇವೆ. ಇದೊಂದು ನಮ್ಮ ಸಣ್ಣ ಸೇವೆ ಇರಲೆಂದು ಭಕ್ತಿಯಿಂದಲೇ ಮಾಡುತ್ತಿದ್ದೇವೆ.
*ಮಂಜುನಾಥ ಅಂಗಡಿ, ಗೆಳೆಯರ ಬಳಗದ ಸದಸ್ಯ
ದತ್ತು ಕಮ್ಮಾರ