ಮುಂಬಯಿ: ಮೀರಾರೋಡ್ ಪೂರ್ವದ ಮೀರಾಗಾಂವ್ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ವಿಶೇಷ ದೀಪೋತ್ಸವವು ನ. 13ರಂದು ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ನೆರವೇರಿತು.
ದೇವಸ್ಥಾನದ ಟ್ರಸ್ಟಿ ಹಾಗೂ ಪ್ರಧಾನ ಅರ್ಚಕ ಸಾಂತಿಂಜ ಜನಾರ್ದನ ಭಟ್ ಅವರ ಪೌರೋಹಿತ್ಯದಲ್ಲಿ ಪರಿವಾರ ದೇವರಾದ ಶ್ರೀ ಮಹಾಗಣಪತಿ, ಶ್ರೀ ದುರ್ಗಾ ಪರಮೇಶ್ವರಿ, ಶ್ರೀ ಆಂಜನೇಯ ಶ್ರೀ ನವಗ್ರಹಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಎದುರಿನ ಹಣತೆ ದೀಪ ಸ್ತಂಭಕ್ಕೆ ಹಾಗೂ ಹೊರಾಂಗಣ ಒಳಾಂಗಣದ ದೀಪಕ್ಕೆ ವಿವಿಧ ಪೂಜಾ ವಿಧಿ-ವಿಧಾನದೊಂದಿಗೆ ದೀಪೋತ್ಸವಕ್ಕೆ ಚಾಲನೆಯಿತ್ತು ಆಶೀರ್ವಚನ ನೀಡಿದ ಸಾಂತಿಂಜ ಜನಾರ್ಧನ ಭಟ್ ಅವರು, ಐಕ್ಯತೆಯ ಪ್ರಕಾಶ ನಮ್ಮ ಬದುಕಿನ ಪ್ರೇರಣ ಶಕ್ತಿಯಾಗಿದೆ. ಪರಿಸರ ಶುದ್ಧಿಗಾಗಿ, ತೈಲದ ದೀಪ ಪರೋಕ್ಷವಾಗಿ ಸಹಕರಿಸುತ್ತದೆ. ಸಾಲು ಹಣತೆಗಳು ಸುಖ, ಸಮೃದ್ಧಿ, ಐಶ್ವರ್ಯದ ಧೊÂàತಕವಾಗಿದೆ. ಇದರ ಶೋಭೆ ಮನೆ-ಮನಗಳನ್ನು ಬೆಳಗಿಸುತ್ತದೆ. ಕಾರ್ತಿಕ ಮಾಸದ ದೀಪಾರಾಧನೆ ಮನುಷ್ಯನ
ಮತ್ತು ದೇವರ ನಡುವಿನ ಸೂಕ್ಷ್ಮಪ್ರಜ್ಞೆಯ ಸಂಕೇತವಾಗಿದೆ ಎಂದು ನುಡಿದರು.ದೇವಸ್ಥಾನದ ಸ್ಥಾಪಕ ಕೃಷ್ಣ ಜಿ. ಶೆಟ್ಟಿ, ಅಧ್ಯಕ್ಷ ಶಿಮಂತೂರು ಮಜಲಗುತ್ತು ಬಾಬಾ ರಂಜನ್ ಶೆಟ್ಟಿ, ಕಾರ್ಯದರ್ಶಿ ಪ್ರಮೋದ್ ವಿ. ಮ್ಹಾತ್ರೆ, ಕೋಶಾಧಿಕಾರಿ ವೆಂಕಟೇಶ್ ಡಿ. ಪಾಟೀಲ್, ಟ್ರಸ್ಟಿಗಳಾದ ಅನಿಲ್ ಶೆಟ್ಟಿ, ಸುಂದರ ಶೆಟ್ಟಿಗಾರ್, ಹೇಮಂತ್ ಸಂಕಪಾಲ್, ಪ್ರಸನ್ನ ಬಿ. ಶೆಟ್ಟಿ, ಕೆ. ಪ್ರಸನ್ನ ಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು. ವಿವಿಧ ಪೂಜಾ ಕಾರ್ಯಕ್ರಮಗಳಲ್ಲಿ ಸಾಂತಿಂಜ ಮಾಧವ ಭಟ್, ಸುರೇಶ್ ಭಟ್ ಕುಂಟಾಡಿ, ವಿಠಲ್ ಭಟ್, ರಾಘವೇಂದ್ರ ಭಟ್ ಮಾಣೆ ಹಾಗೂ ಗಣೇಶ್ ರಾವ್ ಪಡುಬಿದ್ರೆ ಸಹಕರಿಸಿದರು.
ಬಿಲ್ಲವರ ಅಸೋಸಿಯೇಶನ್ ಮೀರಾರೋಡ್ ಸ್ಥಳೀಯ ಸಮಿತಿ ಹಾಗೂ ಶ್ರೀ ಲಕ್ಷ್ಮೀನಾರಾಯಣ ಭಜನ ಮಂಡಳಿ ಮೀರಾರೋಡ್ ಇದರ ಸದಸ್ಯರಿಂದ ಭಜನೆಯನ್ನು ಆಯೋಜಿಸಲಾಗಿತ್ತು. ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಹಣತೆಗಳನ್ನು ಹಚ್ಚುವ ಮೂಲಕ ದೀಪದಿಂದ ದೀಪ ಬೆಳಗಿಸಿದರು. ಮಹಾಪೂಜೆಯ ಆನಂತರ ಮಹಾಪ್ರಸಾದ ನಡೆಯಿತು.
ಚಿತ್ರ-ವರದಿ: ರಮೇಶ್ ಅಮೀನ್