Advertisement
ವನಿತೆಯರ 48 ಕೆಜಿ ದೇಹತೂಕ ವಿಭಾಗದ ಸ್ಪರ್ಧೆಯಲ್ಲಿ ಮೀರಾಬಾೖ ಬಂಗಾರದಿಂದ ಸಿಂಗಾರಗೊಂಡರು. ಸ್ನ್ಯಾಚ್‌ನಲ್ಲಿ 85 ಕೆಜಿ, ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 109 ಕೆಜಿ ಸಹಿತ ಒಟ್ಟು 194 ಕೆಜಿ ಭಾರ ಎತ್ತುವ ಮೂಲಕ ಅವರು ಐತಿಹಾಸಿಕ ಸಾಧನೆಗೈದರು. ಇದು ನೂತನ ರಾಷ್ಟ್ರೀಯ ದಾಖಲೆಯಾಗಿದೆ. ಕಳೆದೆರಡು ದಶಕಗಳ ಅವಧಿಯಲ್ಲಿ ಭಾರತದ ವನಿತಾ ಸ್ಪರ್ಧಿಯೊಬ್ಬರು ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದ ಮೊದಲ ಬಂಗಾರದ ಪದಕ ಇದೆಂಬುದು ವಿಶೇಷ. ಇದರೊಂದಿಗೆ ಕಳೆದ ರಿಯೋ ಒಲಿಂಪಿಕ್ಸ್ ವೈಫಲ್ಯವನ್ನು ಅವರು ಹೊಡೆದೋಡಿಸಿದರು. ಥಾಯ್ಲೆಂಡಿನ ಸುಖರೋನ್ ಥುನ್ಯಾ ಬೆಳ್ಳಿ (193 ಕೆಜಿ) ಮತ್ತು ಕೊಲಂಬಿಯಾದ ಸೆಗುರಾ ಅನಾ (182 ಕೆಜಿ) ಕಂಚಿನ ಪದಕ ಗೆದ್ದರು.
“ಇದೊಂದು ಮಹಾನ್ ಸಾಧನೆ. ಕೋಚ್ ವಿಜಯ್ ಶರ್ಮ ಅವರ ಮಾರ್ಗದರ್ಶನ ಇಲ್ಲದೇ ಇರುತ್ತಿದ್ದಲ್ಲಿ ಇದು ಸಾಧ್ಯವಾಗುತ್ತಿರಲಿಲ್ಲ. ಉನ್ನತ ಯಶಸ್ಸು ಗಳಿಸುವ ಯತ್ನದಲ್ಲಿ ನಾನು ಮತ್ತು ನನ್ನ ಕೋಚ್ ತೆರೆದು ನೋಡದ ಬಾಗಿಲುಗಳೇ ಇರಲಿಲ್ಲ. ರಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲದೇ ಹೋದಾಗ ನಾನು ಬಹಳ ನಿರಾಶಳಾಗಿದ್ದೆ. ಅಲ್ಲಿ ನಾನೆಸಗಿದ ಸಣ್ಣ ತಪ್ಪು ಕಾಡುತ್ತಲೇ ಇತ್ತು. ಈ ಪದಕ ರಿಯೋ ನೋವನ್ನು ಮರೆಸಲಿದೆ. ನನ್ನ ದೌರ್ಬಲ್ಯಗಳನ್ನೆಲ್ಲ ಹೋಗಲಾಡಿಸಿಕೊಂಡು ಮುಂಬರುವ ಕಾಮನ್ವೆಲ್ತ್ ಗೇಮ್ಸ್, ಏಶ್ಯನ್ ಗೇಮ್ಸ್ ಮತ್ತು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಪ್ರಯತ್ನಿಸಲಿದ್ದೇನೆ’ ಎಂದು 2014ರ ಕಾಮನ್ವೆಲ್ತ್ ಗೇಮ್ಸ್ ಬೆಳ್ಳಿ ಪದಕ ವಿಜೇತೆ ಮೀರಾಭಾç ಸಂಭ್ರಮದಿಂದ ನುಡಿದರು. ಮಣಿಪುರದ ಸಾಧಕಿ
ಮಣಿಪುರದವರಾದ, 23ರ ಹರೆಯದ ಮೀರಾಬಾೖ ಚಾನು ಭಾರತೀಯ ರೈಲ್ವೇ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದಾರೆ. 2014 ಮತ್ತು 2015ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೀರಾಬಾೖ ಕ್ರಮವಾಗಿ 11ನೇ ಹಾಗೂ 9ನೇ ಸ್ಥಾನ ಪಡೆದಿದ್ದರು. 2 ತಿಂಗಳ ಹಿಂದೆ ಆಸ್ಟ್ರೇಲಿಯದಲ್ಲಿ ನಡೆದ ಸೀನಿಯರ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಮೀರಾಬಾೖ ಮುಂದಿನ ಕಾಮನ್ವೆಲ್ತ್ ಗೇಮ್ಸ್‌ಗೆ ಅರ್ಹತೆ ಸಂಪಾದಿಸಿದ್ದರು.
Related Articles
Advertisement
ಒಲಿಂಪಿಕ್ ಕಂಚಿನ ಪದಕ ವಿಜೇತೆ ಕರ್ಣಂ ಮಲ್ಲೇಶ್ವರಿ 2 ಸಲ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರಕ್ಕೆ ಕೊರಳೊಡ್ಡಿದ್ದರು (1994, 1995). 1989-99ರ ಅವಧಿಯಲ್ಲಿ ಕುಂಜರಾಣಿ ದೇವಿ ಇದೇ ಕೂಟದಲ್ಲಿ 7 ಪದಕ ಗೆದ್ದಿದ್ದರೂ ಅವರಿಗೆ ಬಂಗಾರ ಒಲಿದಿರಲಿಲ್ಲ.