ನವದೆಹಲಿ: ಕೋವಿಡ್ 19 ವೈರಸ್ ತಡೆಗಟ್ಟಲು ಲಾಕ್ ಡೌನ್ ಜಾರಿಯಾದ ಪರಿಣಾಮ ಜಗತ್ತಿನ ಹಲವು ದೇಶಗಳಲ್ಲಿ ಭಾರತೀಯರು ಅನಿವಾರ್ಯವಾಗಿ ಅಲ್ಲೇ ಉಳಿಯುವಂತಾಗಿತ್ತು. ಇದೀಗ 12 ದೇಶಗಳಲ್ಲಿನ ಸುಮಾರು 15 ಭಾರತೀಯರು ತಾಯ್ನಾಡಿಗೆ ಮರಳಲು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಮುಗಿಬಿದ್ದ ಪರಿಣಾಮ ಬುಧವಾರ ನಾಗರಿಕ ವಿಮಾನಯಾನ ಸಚಿವಾಲಯದ ವೆಬ್ ಸೈಟ್ ಕ್ರ್ಯಾಶ್ (ಸ್ಥಗಿತವಾಗು) ಆಗಿರುವುದಾಗಿ ವರದಿ ತಿಳಿಸಿದೆ.
ಕೋವಿಡ್ ತಡೆಗಟ್ಟಲು ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ಕೇಂದ್ರ ಸರ್ಕಾರ ಮಾರ್ಚ್ ತಿಂಗಳಾಂತ್ಯದಲ್ಲಿ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ಆಗಮನಕ್ಕೆ ನಿಷೇಧ ಹೇರಿತ್ತು. ಇದರಿಂದಾಗಿ ವಿದೇಶದಲ್ಲಿ ಸಾವಿರಾರು ವಿದ್ಯಾರ್ಥಿಗಳು, ಪ್ರವಾಸಿಗರು ಸಿಕ್ಕಿಹಾಕಿಕೊಳ್ಳುವಂತಾಗಿತ್ತು.
ಊರಿಗೆ ಮರಳುವ ಧಾವಂತದಲ್ಲಿ ಅತೀ ಹೆಚ್ಚು ಜನರು ಹೆಸರನ್ನು ನೋಂದಾಯಿಸಲು ಮುಂದಾಗಿದ್ದರಿಂದ ವೆಬ್ ಸೈಟ್ ಕ್ರ್ಯಾಶ್ ಆಗುವಂತಾಗಿದೆ. ಜನರು ಏರ್ ಇಂಡಿಯಾ ವೆಬ್ ಸೈಟ್ ಪರಿಶೀಲಿಸಿ, ಅದರಲ್ಲಿ ಯಾವ ವಿಮಾನ ಕಾರ್ಯಾಚರಿಸಲಿದೆ ಎಂಬ ವಿವರ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಈ ನಿಟ್ಟಿನಲ್ಲಿ ಮಂಗಳವಾರ ಮೊದಲ ಹಂತವಾಗಿ ಭಾರತದಿಂದ ಎರಡು ಹಡಗು ತೆರಳಿದ್ದು, ಒಂದು ಮಾಲ್ಡೀವ್ಸ್ ನಲ್ಲಿ ಸಿಕ್ಕಿಹಾಕಿಕೊಂಡ ಒಂದು ಸಾವಿರ ಭಾರತೀಯ ಪ್ರಜೆಗಳನ್ನು ಕರೆತರಲು ಹಾಗೂ ಮತ್ತೊಂದು ಹಡಗು ಗಲ್ಫ್ ಗೆ ತೆರಳಿದೆ ಎಂದು ವರದಿ ವಿವರಿಸಿದೆ.
ಯುನೈಟೆಡ್ ಅರಬ್ ನಲ್ಲಿ ಊರಿಗೆ ಮರಳಲು ಮೂರು ಲಕ್ಷಕ್ಕೂ ಅಧಿಕ ಭಾರತೀಯರು ಕಾತರದಿಂದ ಇದ್ದು ಮೊದಲ ಹಂತದಲ್ಲಿ 64 ವಿಮಾನಗಳಲ್ಲಿ ಕರೆತರಲು ಸಿದ್ದತೆ ನಡೆದಿದೆ. ಕತಾರ್ ನಿಂದ ಕೇರಳಕ್ಕೆ ಗುರುವಾರ ವಿಮಾನ ಬರುವುದು ನಿಗದಿಯಾಗಿದ್ದು, ಅದು ಶನಿವಾರಕ್ಕೆ ಮುಂದೂಡಿಕೆಯಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಗಲ್ಫ್ ದೇಶಗಳಲ್ಲಿ ಇರುವ ಭಾರತೀಯರನ್ನು ಒಟ್ಟು 26 ವಿಮಾನಗಳಲ್ಲಿ ಕರೆತರಲು ಸಿದ್ದತೆಯಾಗಿದ್ದು, ಉಳಿದ ವಿಮಾನಗಳು ಏಷ್ಯಾ, ಬ್ರಿಟನ್ ಹಾಗೂ ಅಮೆರಿಕದಲ್ಲಿ ಇರುವ ಭಾರತೀಯರನ್ನು ಭಾರತಕ್ಕೆ ಕರೆತರಲಿದೆ ಎಂದು ಹೇಳಿದೆ. ಈವರೆಗೆ ವಿದೇಶದಲ್ಲಿರುವ ಎರಡು ಲಕ್ಷ ಭಾರತೀಯರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿರುವುದಾಗಿ ನಾಗರಿಕ ವಿಮಾನ ಸಚಿವ ಹರ್ದೀಪ್ ಪುರಿ ತಿಳಿಸಿದ್ದಾರೆ.