ನವದೆಹಲಿ: ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ನೇವಲ್ ಆ್ಯಂಡ್ ಇಂಜಿನಿಯರಿಂಗ್ ಲಿಮಿಟೆಡ್ (ಆರ್ ಎನ್ ಇಎಲ್) ಜತೆ ಮಾಡಿಕೊಂಡಿದ್ದ 2,500 ಕೋಟಿ ರೂಪಾಯಿಗಳ ರಕ್ಷಣಾ ಒಪ್ಪಂದವನ್ನು ರಕ್ಷಣಾ ಸಚಿವಾಲಯ ರದ್ದುಗೊಳಿಸಿದೆ ಎಂದು ವರದಿ ತಿಳಿಸಿದೆ.
ರಿಲಯನ್ಸ್ ನೇವಲ್ ಆ್ಯಂಡ್ ಇಂಜಿನಿಯರಿಂಗ್ ಲಿಮಿಟೆಡ್ ಜತೆ ಸಮುದ್ರದ ಗಡಿಯಲ್ಲಿ ಗಸ್ತು ಹಡಗುಗಳ ನಿರ್ಮಾಣಕ್ಕಾಗಿ ಗುತ್ತಿಗೆ ನೀಡಿತ್ತು. ಆದರೆ ಹಡಗುಗಳ ಸರಬರಾಜು ಮಾಡುವಲ್ಲಿ ಭಾರೀ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಒಪ್ಪಂದ ರದ್ದುಗೊಂಡಿರುವುದಾಗಿ ಮೂಲಗಳು ತಿಳಿಸಿವೆ.
ಸುಮಾರು ಎರಡು ವಾರಗಳ ಹಿಂದೆ ಗುತ್ತಿಗೆಯನ್ನು ರದ್ದುಪಡಿಸಲಾಗಿದೆ. 2011ರಲ್ಲಿ ಕಂಪನಿ ಜತೆ ಐದು ಯುದ್ಧ ಹಡಗುಗಳ ನಿರ್ಮಾಣಕ್ಕಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಗುಜರಾತ್ ಮೂಲದ ಪಿಪ್ ವಾವ್ ಡಿಫೆನ್ಸ್ ಆ್ಯಂಡ್ ಆಫ್ ಶೋರ್ ಇಂಜಿನಿಯರಿಂಗ್ ಲಿ.ಕಂಪನಿ ಜತೆ ರಕ್ಷಣಾ ಇಲಾಖೆ ಒಪ್ಪಂದ ಮಾಡಿಕೊಂಡಿತ್ತು. ಆಗ ನಿಖಿಲ್ ಗಾಂಧಿ ಕಂಪನಿ ಮಾಲೀಕರಾಗಿದ್ದು, ನಂತರ ಈ ಕಂಪನಿಯನ್ನು 2015ರಲ್ಲಿ ಅಂಬಾನಿ ಖರೀದಿಸಿದ್ದರು.
ಇದನ್ನೂ ಓದಿ:ಗಡಿಯಲ್ಲಿ ಮತ್ತೆ ಪಾಕ್ ಕಳ್ಳಾಟ ಬಯಲು: ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಕಳ್ಳಸಾಗಣೆ ಯತ್ನ ವಿಫಲ
ಈ ಒಪ್ಪಂದ ರದ್ದುಗೊಳಿಸಿರುವ ಬಗ್ಗೆ ರಿಲಯನ್ಸ್ ನೇವಲ್ ಆ್ಯಂಡ್ ಇಂಜಿನಿಯರಿಂಗ್ ಲಿಮಿಟೆಡ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆರ್ ಎನ್ ಇಎಲ್ ಕಂಪನಿ 11 ಸಾವಿರ ಕೋಟಿ ರೂಪಾಯಿ ನಷ್ಟದಲ್ಲಿದ್ದು, ಕಂಪನಿ ವಿರುದ್ಧ ದಿವಾಳಿ ಪ್ರಕ್ರಿಯೆ ರಾಷ್ಟ್ರೀಯ ಕಂಪನಿ ಪ್ರಾಧಿಕಾರದಲ್ಲಿ ನಡೆಯುತ್ತಿದೆ.